ಮೋಗಾ (ಪಂಜಾಬ್): ಸೋಷಿಯಲ್ ಮೀಡಿಯಾದಲ್ಲಿ ಪ್ರೇಮಾಂಕುರವಾಗಿ ಯುವತಿಯನ್ನು ಮದುವೆಯಾಗಲು ಬಂಧು ಬಾಂಧವರೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿದ್ದ ವರ ಬರಿಗೈಯಲ್ಲಿ ವಾಪಸಾದ ವಿಚಿತ್ರ ಘಟನೆ ಮೋಗಾದಲ್ಲಿ ಎರಡು ದಿನಗಳ ಹಿಂದೆ ನಡೆದಿದೆ.
ಹೌದು, ದುಬೈನಲ್ಲಿ ಕೆಲಸ ಮಾಡುವ ಜಲಂಧರ್ ಜಿಲ್ಲೆಯ ಮರಿಯಾಲ ಗ್ರಾಮದ ನಿವಾಸಿ ದೀಪಕ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಮನ್ಪ್ರೀತ್ ಕೌರ್ ಎಂಬ ಹುಡುಗಿಯೊಂದಿಗೆ ಸ್ನೇಹ ಬೆಳೆಸಿದ್ದರು. ಈ ಸ್ನೇಹವು ಪ್ರೀತಿಗೆ ತಿರುಗಿ ಗಾಢವಾಯಿತು, ಇಬ್ಬರೂ ಮದುವೆಯಾಗಲು ನಿರ್ಧರಿಸಿದರು. ಆದರೆ ಅವರು ಒಬ್ಬರನ್ನೊಬ್ಬರು ಭೇಟಿಯಾಗಲಿಲ್ಲ ಅಥವಾ ಒಬ್ಬರನ್ನೊಬ್ಬರು ನೋಡಿಯೂ ಇರಲಿಲ್ಲ. ಮದುವೆ ಸಮಾರಂಭದ ಸ್ಥಳಕ್ಕೆ ವರನು ತನ್ನ ಕುಟುಂಬ ಮತ್ತು ಅತಿಥಿಗಳೊಂದಿಗೆ ಬಂದು ಕಾಯುತ್ತಿದ್ದರು. ಡಿಸೆಂಬರ್ 6 ರಂದು ಮದುವೆಯ ದಿನವನ್ನು ನಿಗದಿಪಡಿಸಿದ್ದರು ಮತ್ತು ಮೋಗಾದ ರೋಸ್ ಗಾರ್ಡನ್ ಅರಮನೆಯಲ್ಲಿ ವಿವಾಹ ಸಮಾರಂಭವನ್ನು ಸಹ ಹಮ್ಮಿಕೊಂಡಿದ್ದರು.
ವಧು ಫೋನ್ ಸ್ವಿಚ್ ಆಫ್; ಅಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ವರನ ಕಡೆಯವರು ಮೋಗಾ ತಲುಪಿ, ಸ್ಥಳಕ್ಕೆ ಬಂದ ಮೇಲೆಯೇ ಈ ಹೆಸರಿನ ಹುಡುಗಿ ಯಾರೂ ಇಲ್ಲಿಗೆ ಬಂದಿಲ್ಲ ಅನ್ನೋದು ಗೊತ್ತಾಯಿತು. ಆಕೆಗೆ ಫೋನ್ ಮಾಡಿ ಕರೆದಾಗ ನೀನು ಇಲ್ಲೇ ಇರು, ನಿನ್ನನ್ನು ಕರೆದುಕೊಂಡು ಹೋಗಲು ಬರುತ್ತಿದ್ದೇವೆ ಎಂದಷ್ಟೇ ಹೇಳಿದ್ದಳು. ಇದಾದ ಬಳಿಕ ಫೋನ್ ಸ್ವಿಚ್ ಆಫ್ ಆಗಿದ್ದು, ಮದುವೆಯ ಆಸೆಯಲ್ಲಿದ್ದ ವರನಿಗೆ ಮರ್ಮಾಘಾತ ಉಂಟಾಗಿದೆ. ಮೊಗಾದ ಲೋಹರಾ ಚೌಕ್‌ನಲ್ಲಿ ಮಧ್ಯಾಹ್ನ 12 ರಿಂದ ಸಂಜೆ 6ರ ವರೆಗೆ ಮದುಮಗ ತನ್ನ ಕುಟುಂಬ ಮತ್ತು ಸಂಬಂಧಿಕರೊಂದಿಗೆ ಹಸಿವು ಮತ್ತು ಬಾಯಾರಿಕೆಯಿಂದ ನಿಂತಿದ್ದರು. ಆದರೆ ಯಾರೂ ಕೂಡ ಆ ಸ್ಥಳಕ್ಕೆ ಬರಲಿಲ್ಲ. ಹಾಗಾಗಿ ಅಂತಿಮವಾಗಿ ಸಂಜೆ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.
ವರ ದೀಪಕ್ ತಾನು ತಹಸಿಲ್ ನಾಕೋದರ ಮರಿಯಾಲ ಮೆಹತ್‌ಪುರ ಗ್ರಾಮದ ನಿವಾಸಿಯಾಗಿದ್ದು, ದುಬೈನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹುಡುಗಿಯೊಂದಿಗೆ ಶುರುವಾಗಿದ್ದ ಮಾತುಕತೆ ಮದುವೆ ಹಂತಕ್ಕೆ ಬಂದು ಕನ್ಫರ್ಮ್ ಆಗಿತ್ತು. ಇದನ್ನು ನಂಬಿ ಮೆರವಣಿಗೆಯಲ್ಲಿ ಬಂದ ವರನಿಗೆ ಆಘಾತ ಉಂಟಾಯಿತು. ಯುವತಿಗಾಗಿ ಮಧ್ಯಾಹ್ನದಿಂದ ಕಾದು ಕುಳಿತರೂ ಯಾರೂ ಬಾರದೇ ಇದ್ದುದರಿಂದ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರು.
ಪರಸ್ಪರ ಮುಖವನ್ನೇ ನೋಡದ ಜೋಡಿ; ವರನು ಹುಡುಗಿಯೊಂದಿಗೆ ವೈಯಕ್ತಿಕ ಸಂಭಾಷಣೆ ನಡೆಸಿಲ್ಲ ಮತ್ತು ಅವನು ಹುಡುಗಿಯನ್ನು ಭೇಟಿಯಾಗಿರಲಿಲ್ಲ ಎಂದು ಹೇಳುತ್ತಾರೆ. ವರನ ತಂದೆ ಡಿಸೆಂಬರ್ 2 ರಂದು ಮದುವೆಯ ವಿಷಯ ಕುರಿತು ಯುವತಿಯೊಂದಿಗೆ ಮಾತುಕತೆ ನಡೆಸಿದ್ದರು. ಆದರೆ ಹುಡುಗಿ ತನ್ನ ತಂದೆಯ ಆರೋಗ್ಯ ಸರಿಯಿಲ್ಲ ಎಂದು ಹೇಳಿದ್ದಳು. ಆದ್ದರಿಂದ ಡಿಸೆಂಬರ್ 6 ರಂದು ಅರಮನೆಯಲ್ಲಿ ಮದುವೆ ಸಮಾರಂಭ ಇಟ್ಟುಕೊಂಡಿರುವ ಬಗ್ಗೆ ತಿಳಿಸಿದ್ದರು. ವರನ ತಂದೆ ಕೂಡ ಮೋಸ ಹೋಗಿದ್ದಾರೆ. ಮದುವೆ ಮೆರವಣಿಗೆ ತಂದಿದ್ದರು ಮತ್ತು ಎಲ್ಲರೂ ಹುಡುಗಿಗಾಗಿ ಕಾಯುತ್ತಿದ್ದರು. ವರನ ತಂದೆಯಿಂದ ದೂರನ್ನು ಸ್ವೀಕರಿಸಲಾಗಿದೆ. ಅವರ ಬಳಿ ಹುಡುಗಿಯ ಫೋನ್ ಸಂಖ್ಯೆ ಮಾತ್ರ ಇದೆ ಮತ್ತು ಮೋಸ ಮಾಡಿದ ಹುಡುಗಿಯನ್ನು ಹುಡುಕಬೇಕಿದೆ ಎಂದು ಪೊಲೀಸ್ ಅಧಿಕಾರಿ ಹರ್ಜಿಂದರ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ; ಅಪರಿಚಿತ APK ಫೈಲ್ ಕಳಿಸಿ ಮಂಗಳೂರಿಗನಿಗೆ ಹ್ಯಾಕ್, ವಂಚನೆ: ದೆಹಲಿಯಲ್ಲಿ ಆರೋಪಿ ಬಂಧನ