ಲಾತೂರ್ (ಮಹಾರಾಷ್ಟ್ರ) : ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಸರ್ಕಾರ ಸದನದಲ್ಲಿ ಮಂಡಿಸಿ ಅಂಗೀಕರಿಸಿರುವ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮರಾಠ ಸಮುದಾಯಕ್ಕೆ ಶೇಕಡಾ 10 ರಷ್ಟು ಮೀಸಲಾತಿ ನೀಡುವ ಮಸೂದೆಗೆ ವಿರೋಧ ವ್ಯಕ್ತವಾಗಿದೆ. ಇದು ಒಬಿಸಿ ವರ್ಗದಡಿ ಸೌಲಭ್ಯ ಸಿಗುವುದಿಲ್ಲ. ಹೀಗಾಗಿ ವಿಧೇಯಕವನ್ನು ನಾವು ಒಪ್ಪುವುದಿಲ್ಲ ಎಂದು ಮರಾಠ ಸಂಘಟನೆ ತಗಾದೆ ತೆಗೆದಿವೆ.
ಇತರ ಹಿಂದುಳಿದ ವರ್ಗದ (ಒಬಿಸಿ) ಅಡಿ ಮರಾಠ ಸಮುದಾಯಕ್ಕೆ ಮೀಸಲಾತಿ ನೀಡಬೇಕು. ಸರ್ಕಾರ ಪರಿಚಯಿಸಿರುವ ಮೀಸಲಾತಿ ಮಸೂದೆಯು ಒಬಿಸಿ ವರ್ಗದಡಿ ಮೀಸಲಾತಿ ನೀಡದೆ ಸಮುದಾಯವನ್ನು ವಂಚಿಸಲಿದೆ. ಹೀಗಾಗಿ ಅಂಗೀಕಾರ ವಿರೋಧಿಸಿ ಮರಾಠಾ ಸಂಘಟನೆಯ ಕಾರ್ಯಕರ್ತರಿಂದ ಇಂದು (ಮಂಗಳವಾರ) ಪ್ರತಿಭಟನೆ ನಡೆಯಲಿದೆ ಎಂದು ಅಖಿಲ ಭಾರತೀಯ ಛಾವಾ ಮರಾಠ ಸಂಘಟನೆ ತಿಳಿಸಿದೆ.
ಒಬಿಸಿ ವರ್ಗದ ಅಡಿಯಲ್ಲಿ ಮರಾಠ ಸಮುದಾಯವು ಮೀಸಲಾತಿಗಾಗಿ ಹೋರಾಡುತ್ತಿದೆ. ಆದರೆ, ಸರ್ಕಾರ ಸಮುದಾಯಕ್ಕೆ 10 ಪ್ರತಿಶತ ಮೀಸಲಾತಿ ನೀಡುವ ಮಸೂದೆಯನ್ನು ತಂದಿದೆ. ಈ ಮಸೂದೆಯು ಕಾನೂನಾತ್ಮಕವಾಗಿ ನಿಲ್ಲುವುದಿಲ್ಲ. ಸರ್ಕಾರವು ಮರಾಠ ಸಮುದಾಯವನ್ನು ವಂಚಿಸಿದೆ ಎಂದು ಸಂಘಟನೆಯ ಮುಖಂಡರೊಬ್ಬರು ಹೇಳಿದರು.
ಜಾರಂಗೆ ನೇತೃತ್ವದಲ್ಲಿ ಹೋರಾಟ: ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜಾರಂಗೆ ಪಾಟೀಲ್ ಅವರ ನೇತೃತ್ವದಲ್ಲಿ ಹೋರಾಟ ನಡೆಸಲಾಗುತ್ತಿದೆ. 3 ಬಾರಿ ಉಪವಾಸ ನಿರಶನ ಕೈಗೊಳ್ಳಲಾಗಿದೆ. ಪ್ರತಿ ಬಾರಿಯೂ ಸರ್ಕಾರ ಸಂಧಾನ ನಡೆಸಿ ಬೇಡಿಕೆ ಈಡೇರಿಸುವ ಭರವಸೆ ನೀಡುತ್ತಿತ್ತು. ಫೆಬ್ರವರಿ 20 ರಂದು ಮರಾಠರಿಗೆ ಶೇಕಡಾ 10 ರಷ್ಟು ಮೀಸಲಾತಿ ನೀಡುವ ಮಸೂದೆಯನ್ನು ಸರ್ಕಾರ ಅಧಿವೇಶನದಲ್ಲಿ ಅಂಗೀಕರಿಸಿತು.
ನಿವೃತ್ತ ನ್ಯಾಯಮೂರ್ತಿ ಸುನಿಲ್ ಶುಕ್ರೆ ಅವರ ನೇತೃತ್ವದ ಮಹಾರಾಷ್ಟ್ರ ಹಿಂದುಳಿದ ವರ್ಗ ಆಯೋಗವು (ಎಂಬಿಸಿಸಿ) ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ ವರದಿಯ ಅನುಸಾರ ಮೀಸಲಾತಿ ವಿಸ್ತರಿಸಲಾಗಿದೆ. ರಾಜ್ಯವು ಈಗಾಗಲೇ ಆರ್ಥಿಕವಾಗಿ ದುರ್ಬಲ ವರ್ಗವಿರುವ (ಇಡಬ್ಲ್ಯೂಎಸ್) ಸಮುದಾಯಗಳಿಗೆ ಶೇಕಡಾ 10 ರಷ್ಟು ಮೀಸಲಾತಿ ನೀಡಲಾಗಿದೆ. ಇದರಲ್ಲಿ ಮರಾಠರು ಹೆಚ್ಚಿನ ಶೇಕಡಾ 85 ರಷ್ಟು ಮೀಸಲಾತಿಯ ಫಲಾನುಭವಿಗಳಾಗಿದ್ದಾರೆ.
ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಮರಾಠ ಸಮುದಾಯದ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯ ವರದಿಯನ್ನು ಶುಕ್ರವಾರವಷ್ಟೇ ಸಲ್ಲಿಸಿತ್ತು. ಇದು ಕೇವಲ ಒಂಬತ್ತು ದಿನಗಳಲ್ಲಿ ಸುಮಾರು 2.5 ಕೋಟಿ ಮನೆಗಳ ಸಮೀಕ್ಷೆಯನ್ನು ನಡೆಸಿ, ವರದಿ ಸಿದ್ಧ ಮಾಡಿತ್ತು. ಸಮಿತಿಯು ಶಿಕ್ಷಣ ಮತ್ತು ಉದ್ಯೋಗದಲ್ಲಿ ಮರಾಠರಿಗೆ 10 ಪ್ರತಿಶತ ಮೀಸಲಾತಿಯನ್ನು ಶಿಫಾರಸು ಮಾಡಿದೆ.
ಇದನ್ನೂ ಓದಿ: ಉದ್ಯೋಗ, ಶಿಕ್ಷಣದಲ್ಲಿ ಮರಾಠ ಸಮುದಾಯಕ್ಕೆ ಶೇ.10 ಮೀಸಲು ಮಸೂದೆಗೆ ಸದನ ಅಂಗೀಕಾರ