ಜಾಲ್ನಾ (ಮಹಾರಾಷ್ಟ್ರ) : ಶಿವ ಸಂಘಟನಾ ನಾಯಕ ಮನೋಜ್ ಜಾರಂಗೆ ಪಾಟೀಲ್ ಅವರು ಶುಕ್ರವಾರ ತಮ್ಮ ಮತದಾನದ ಹಕ್ಕು ಚಲಾಯಿಸಲು ಛತ್ರಪತಿ ಸಂಭಾಜಿನಗರದಿಂದ (ಔರಂಗಾಬಾದ್) ನೆರೆಯ ಜಾಲ್ನಾಕ್ಕೆ ಆಂಬ್ಯುಲೆನ್ಸ್ನಲ್ಲಿ ಹೊರಟಿದ್ದಾರೆ.
ಆಗಸ್ಟ್ 29, 2023 ರಿಂದ ಪ್ರಾರಂಭವಾದ ಸರಣಿ ಮರಾಠಾ ಮೀಸಲಾತಿ ಆಂದೋಲನ ಮತ್ತು ಉಪವಾಸ ಸತ್ಯಾಗ್ರಹದಿಂದ ಮಹಾರಾಷ್ಟ್ರ ಮಹಾಯುತಿ ಸರ್ಕಾರವನ್ನು ಬೆಚ್ಚಿಬೀಳಿಸಿದ್ದ ಜಾರಂಗೆ ಪಾಟೀಲ್ ಅವರು ಇಂದು ಮಧ್ಯಾಹ್ನ ತಮ್ಮ ಹುಟ್ಟೂರಾದ ಅಂತರವಾಲಿ-ಸರಾಟಿ ಗ್ರಾಮದಲ್ಲಿ ಮತ ಚಲಾಯಿಸಲಿದ್ದಾರೆ.
ಛತ್ರಪತಿ ಸಂಭಾಜಿನಗರದ ಗ್ಯಾಲಕ್ಸಿ ಆಸ್ಪತ್ರೆಯಿಂದ ಹೊರಟ ಸಂಪೂರ್ಣ ಸುಸಜ್ಜಿತ ಆಂಬ್ಯುಲೆನ್ಸ್ನ ಸ್ಟ್ರೆಚರ್ ಮೇಲೆ ಮಲಗಿದ್ದ ಜಾರಂಗೆ ಪಾಟೀಲ್ ಅವರು 60 ಕಿಮೀ ಪ್ರಯಾಣಿಸಿ ಜಾಲ್ನಾ ತಲುಪಲಿದ್ದಾರೆ. ಆ್ಯಂಬುಲೆನ್ಸ್ನಲ್ಲಿರುವ ವೈದ್ಯಕೀಯ ಸಿಬ್ಬಂದಿಯ ತಂಡವು ಪ್ರಯಾಣದುದ್ದಕ್ಕೂ ಜಾರಂಗೆ ಪಾಟೀಲ್ ಅವರ ಆರೋಗ್ಯದ ಮೇಲೆ ನಿಗಾ ಇಡಲಿದೆ.
"ಮತ ಚಲಾಯಿಸಿದ ನಂತರ ಜಾರಂಗೆ ಪಾಟೀಲ್ ಇದೇ ಆಸ್ಪತ್ರೆಗೆ ಮರಳುವ ನಿರೀಕ್ಷೆಯಿದೆ. ಧಾರಾಶಿವ್ ಪ್ರವಾಸದ ಸಮಯದಲ್ಲಿ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ಒಳಗಾದ ನಂತರ ಅವರು ಆಸ್ಪತ್ರೆಗೆ ದಾಖಲಾಗಿದ್ದರು" ಎಂದು ಸತಾರಾದ ಅವರ ಆಪ್ತರೊಬ್ಬರು ಐಎಎನ್ಎಸ್ಗೆ ತಿಳಿಸಿದರು.
ದುರ್ಬಲವಾದರೂ ದೃಢವಾಗಿ ಕಾಣುತ್ತಿದ್ದ ಜಾರಂಗೆ ಪಾಟೀಲ್, ಲೋಕಸಭಾ ಚುನಾವಣೆಯಲ್ಲಿ ಯಾವುದೇ ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಮತ ಚಲಾಯಿಸುವಂತೆ ನಾನು ಮರಾಠಾ ಜನತೆಗೆ ಶಿಫಾರಸು ಮಾಡುವುದಿಲ್ಲ ಎಂದು ಪುನರುಚ್ಚರಿಸಿದರು. "ನಿಮ್ಮ ಹಿತಾಸಕ್ತಿಗಾಗಿ ಹೋರಾಡುವವರಿಗೆ ನೀವು ಬುದ್ಧಿವಂತಿಕೆಯಿಂದ ಮತ ಚಲಾಯಿಸಬೇಕು ಎಂದು ಮಾತ್ರ ನಾನು ಹೇಳುತ್ತೇನೆ. ಮರಾಠರಿಗೆ ಒಬಿಸಿ ವರ್ಗದ ಮೀಸಲಾತಿ ವಿರೋಧಿಸುವವರಿಗೆ ಮತ ಹಾಕಬೇಡಿ" ಎಂದು ಜಾರಂಗೆ ಪಾಟೀಲ್ ಹೇಳಿದರು.
ಜಾರಂಗೆ ಪಾಟೀಲ್ ಅವರು ಅಂತರವಾಲಿ-ಸರಾಟಿ ಗ್ರಾಮದ ಮತದಾನ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ. ಇದೇ ಗ್ರಾಮದಲ್ಲಿ ಅವರು ಆಗಸ್ಟ್ 29, 2023 ರಂದು ಮರಾಠಾ ಮೀಸಲಾತಿಗಾಗಿ ಮೊದಲ 'ಆಮರಣಾಂತ ಉಪವಾಸ' ಆಂದೋಲನ ಆರಂಭಿಸಿದ್ದರು. ಅದರ ನಂತರ ಕನಿಷ್ಠ ನಾಲ್ಕು ಬಾರಿ ಉಪವಾಸ ಮುಷ್ಕರ, ಪ್ರತಿಭಟನಾ ಮೆರವಣಿಗೆಗಳು, ದಾಖಲೆಯ ಸಾರ್ವಜನಿಕ ರ್ಯಾಲಿಗಳು ಮತ್ತು ಜನವರಿಯಲ್ಲಿ ಮುಂಬೈವರೆಗೂ ತಲುಪಿದ ಆಂದೋಲನವು ಮಹಾಯುತಿ ಸರ್ಕಾರವನ್ನು ಬೆಚ್ಚಿಬೀಳಿಸಿದ್ದವು.
ಮೀಸಲಾತಿ ಹೋರಾಟಕ್ಕಾಗಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿರುವ ಮರಾಠಾ ಮುಖಂಡ ಮನೋಜ್ ಜಾರಂಗೆ ಪಾಟೀಲ್ ಅವರು ಬುಧವಾರ ಸಂಭಾಜಿನಗರದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೂಲಗಳ ಪ್ರಕಾರ, ಜಾರಂಗೆ ಪಾಟೀಲ್ ಮರಾಠಾವಾಡ ಪ್ರದೇಶದ ಧಾರಾಶಿವ್ ಪ್ರವಾಸದಲ್ಲಿದ್ದರು. ಅಲ್ಲಿ ಅವರು ಯಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ನಂತರ ನಿಗದಿತ ಕಾರ್ಯಕ್ರಮಗಳೊಂದಿಗೆ ಮುಂದುವರಿಯುತ್ತಿದ್ದಂತೆ ನಾರೋಗ್ಯಕ್ಕೀಡಾದರು. ಕೂಡಲೇ ಅವರನ್ನು ಸಂಭಾಜಿನಗರದ ಗ್ಯಾಲಕ್ಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಇದನ್ನೂ ಓದಿ: ಆಂಧ್ರಪ್ರದೇಶ ವಿಧಾನಸಭಾ ಚುನಾವಣೆ: 6 ಮಾಜಿ ಮುಖ್ಯಮಂತ್ರಿಗಳ ಮಕ್ಕಳು ಸ್ಪರ್ಧಾ ಕಣದಲ್ಲಿ - Andhra Pradesh Assembly polls