ನವದೆಹಲಿ: ಮನ್ ಕಿ ಬಾತ್ ಕಾರ್ಯಕ್ರಮ 10 ವರ್ಷಗಳನ್ನು ಪೂರೈಸಿದ್ದು, ಇಂದಿನ 114ನೇ ಸಂಚಿಕೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಮುಂಬರುವ ಹಬ್ಬ ಹರಿದಿನಗಳಲ್ಲಿ 'ಮೇಡ್ ಇನ್ ಇಂಡಿಯಾ' ಉತ್ಪನ್ನಗಳನ್ನು ಖರೀದಿಸುವಂತೆ ದೇಶವಾಸಿಗಳಿಗೆ ಮನವಿ ಮಾಡಿದರು.
ದೇಶದ ಯುವ ಶಕ್ತಿಯಿಂದಾಗಿ ಇಡೀ ವಿಶ್ವದ ಕಣ್ಣು ನಮ್ಮತ್ತ ನೆಟ್ಟಿದೆ. ಅದು ಅಟೋಮೊಬೈಲ್, ಜವಳಿ, ವಾಯುಯಾನ, ಎಲೆಕ್ಟ್ರಾನಿಕ್ಸ್ ಅಥವಾ ರಕ್ಷಣಾ ಕ್ಷೇತ್ರವಾಗಿರಬಹುದು. ಪ್ರತಿ ವಲಯದಲ್ಲಿ ರಫ್ತು ಹೆಚ್ಚಾಗುತ್ತಿದೆ. ಮತ್ತು ವಿದೇಶಿ ನೇರ ಹೂಡಿಕೆ ಹೆಚ್ಚಳವು ಅದರ ಯಶಸ್ಸಿಗೆ ಸಾಕ್ಷಿಯಾಗಿದೆ. ಇದು ಸ್ಥಳೀಯ ತಯಾರಕರಿಗೆ ಸಹಾಯ ಮಾಡಿದೆ. ನಿರಂತರವಾಗಿ ಬೆಳೆಯುತ್ತಿರುವ ದೇಶದಲ್ಲಿ ಎಫ್ಡಿಐನ ನಿರಂತರ ಹೆಚ್ಚಳ ನಮ್ಮ ಮೇಕ್ ಇನ್ ಇಂಡಿಯಾದ ಯಶಸ್ಸಿನ ಕಥೆಯನ್ನು ಹೇಳುತ್ತಿದೆ. ನಮ್ಮ ದೇಶದಲ್ಲಿ ತಯಾರಾಗುವಂತಹ ವಸ್ತುಗಳು ಜಾಗತಿಕ ಗುಣಮಟ್ಟದ್ದಾಗಿರಬೇಕು. ಸಾಧ್ಯವಾದಷ್ಟು ಸ್ಥಳೀಯ ವಸ್ತುಗಳಿಗೆ ಒತ್ತು ನೀಡಬೇಕು ಎಂದು ಹೇಳಿದರು.
"ಮನ್ ಕಿ ಬಾತ್ನ ಪಯಣ 10 ವರ್ಷಗಳನ್ನು ಪೂರೈಸಿದೆ. ಇಂದಿನ ಮನ್ ಕಿ ಬಾತ್ ನನಗೆ ಭಾವನಾತ್ಮಕವಾಗಿದೆ. 10 ವರ್ಷಗಳ ಹಿಂದೆ ವಿಜಯದಶಮಿ ದಿನ ಮೊದಲ ಸಂಚಿಕೆಯನ್ನು ಪ್ರಾರಂಭಿಸಲಾಗಿತ್ತು. ನವರಾತ್ರಿಯ ಮೊದಲ ದಿನಕ್ಕಿಂತ ಮೂರು ದಿನ ಹಿಂದೆ 114ನೇ ಸಂಚಿಕೆಗೆ ತಲುಪಿದೆ. ಇದು ಎಂತಹ ಮಂಗಳಕರ ಸಂಯೋಜನೆಯಾಗಿದೆ. ದೇಶದ ಜನ ಮಸಾಲೆಯುಕ್ತ, ಋಣಾತ್ಮಕ ವಿಷಯಗಳಿಗೆ ಮಾತ್ರವಲ್ಲ. ಸಕಾರಾತ್ಮಕ ವಿಷಯಗಳಿಗೂ ಗಮನ ಕೊಡುತ್ತಾರೆ ಎನ್ನುವುದನ್ನು ಮನ್ ಕಿ ಬಾತ್ ಕಾರ್ಯಕ್ರಮ ತೋರಿಸಿದೆ" ಎಂದರು.
ತಮ್ಮ ಇತ್ತೀಚಿನ ಯುಎಸ್ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ, 4000 ವರ್ಷಗಳಷ್ಟು ಹಳೆಯ ಸುಮಾರು 300 ಪ್ರಾಚೀನ ವಸ್ತುಗಳನ್ನು ಭಾರತಕ್ಕೆ ಹಿಂದಿರುಗಿಸಿರುವ ಬಗ್ಗೆ ಒತ್ತಿ ಹೇಳಿದರು. "ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ವಿವಿಧ ದೇಶಗಳಿಂದ ಹೆಚ್ಚಿನ ಸಂಖ್ಯೆ ಪ್ರಾಚೀನ ಕಲಾಕೃತಿಗಳನ್ನು ಭಾರತಕ್ಕೆ ವಾಪಸ್ ತಂದಿದೆ. ನಾವೆಲ್ಲರೂ ನಮ್ಮ ಪರಂಪರೆಯ ಬಗ್ಗೆ ತುಂಬಾ ಹೆಮ್ಮೆ ಪಡುತ್ತೇವೆ. ಅಭಿವೃದ್ಧಿ ಕೂಡ ಪರಂಪರೆ ಎಂದು ನಾನು ಯಾವಾಗಲೂ ಹೇಳುತ್ತೇನೆ" ಎಂದು ಹೇಳಿದರು.
ಸ್ವಚ್ಛ ಭಾರತ ಮಿಷನ್ ಯಶಸ್ಸನ್ನು ಎತ್ತಿ ಹಿಡಿದ ಅವರು, ತಮ್ಮ ಜೀವನದುದ್ದಕ್ಕೂ ಸ್ವಚ್ಛತೆಗೆ ವಿಶೇಷ ಒತ್ತು ನೀಡಿದ ಮಹಾತ್ಮ ಗಾಂಧೀಜಿ ಅವರಿಗೆ ದೊಡ್ಡ ಗೌರವ ಎಂದು ಶ್ಲಾಘಿಸಿದರು.
ಕಡಿಮೆ ಬಳಕೆ, ಮರು ಬಳಕೆ, ಮತ್ತು ಪುನರ್ಬಳಕೆ: "ಅಕ್ಟೋಬರ್ 2 ರಂದು ಸ್ವಚ್ಛ ಭಾರತ ಮಿಷನ್ 10 ವರ್ಷಗಳನ್ನು ಪೂರೈಸುತ್ತಿದೆ. ತಮ್ಮ ಇಡೀ ಜೀವನವನ್ನು ಈ ಉದ್ದೇಶಕ್ಕಾಗಿ ಮುಡಿಪಾಗಿಟ್ಟ ಮಹಾತ್ಮ ಗಾಂಧೀಜಿಯವರಿಗೆ ಗೌರವ ನಮನ. ಸ್ವಚ್ಛ ಭಾರತ ಮಿಷನ್ ಯಶಸ್ಸಿನಿಂದಾಗಿ ಜನರು ಕಡಿಮೆ ಬಳಕೆ, ಮರು ಬಳಕೆ, ಮತ್ತು ಪುನರ್ಬಳಕೆ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದಾರೆ" ಎಂದು ಮೋದಿ ಮೆಚ್ಚುಗೆಯ ಮಾತುಗಳನ್ನಾಡಿದರು.
'Tripal R' ಚಾಂಪಿಯನ್: "ಕೇರಳದ 74 ವರ್ಷದ ಸುಬ್ರಹ್ಮಣ್ಯಂ ಅವರು 23000ಕ್ಕೂ ಹೆಚ್ಚು ಕುರ್ಚಿಗಳನ್ನು ದುರಸ್ತಿ ಮಾಡಿ ಮತ್ತೆ ಬಳಸುವಂತೆ ಮಾಡಿದ್ದಾರೆ. ಜನರು ಅವರನ್ನು 'Tripal R' ಚಾಂಪಿಯನ್ ಎಂದೂ ಕರೆಯುತ್ತಾರೆ. ಅವರ ಈ ವಿಶಿಷ್ಟ ಪ್ರಯತ್ನಗಳನ್ನು ಕೋಝಿಕ್ಕೋಡ್ ಸಿವಿಲ್ ಸ್ಟೇಷನ್, ಪಿಡಬ್ಲ್ಯೂಡಿ ಮತ್ತು ಎಲ್ಐಸಿ ಕಚೇರಿಗಳಲ್ಲಿ ಕಾಣಬಹುದು. ಸ್ನೇಹಿತರೇ ಸ್ವಚ್ಛತೆಯ ಬಗ್ಗೆ ನಡೆಯುತ್ತಿರುವ ಅಭಿಯಾನದಲ್ಲಿ ನಾವು ಹೆಚ್ಚು ಹೆಚ್ಚು ಜನರನ್ನು ತೊಡಗಿಸಿಕೊಳ್ಳಬೇಕು. ಮತ್ತು ಈ ಅಭಿಯಾನ ಒಂದು ದಿನ ಅಥವಾ ಒಂದು ವರ್ಷದ್ದಲ್ಲ. ನಮ್ಮ ಜೀವಮಾನದುದ್ದಕ್ಕೂ ನಿರಂತರವಾಗಿ ಮಾಡಬೇಕಾದ ಕೆಲಸವಿದು. ನಿಮ್ಮ ಕುಟುಂಬ, ಸ್ನೇಹಿತರು, ನೆರೆಹೊರೆಯವರು ಅಥವಾ ಸಹೋದ್ಯೋಗಿಗಳು ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಮಾಡಿ" ಎಂದು ಮಿಷನ್ ಯಶಸ್ಸಿಗೆ ಕಾರಣರಾದ ಎಲ್ಲರನ್ನು ಪ್ರಧಾನಿ ಅಭಿನಂದಿಸಿದರು.
ಪಾಂಡಿಚೇರಿ ಕಡಲತೀರದಲ್ಲಿ ಸ್ವಚ್ಛತಾ ಅಭಿಯಾನದ ಕುರಿತು ಚರ್ಚಿಸಿದ ಅವರು, ಮಾಹೆ ಪುರಸಭೆ ಹಾಗೂ ಸುತ್ತಮುತ್ತಲಿನ ಯುವಕರ ತಂಡ ಈ ಸ್ವಚ್ಛತಾ ಅಭಿಯಾನವನ್ನು ಮುನ್ನಡೆಸುತ್ತಿದೆ. ಈ ತಂಡ ಮಾಹೆ ಪ್ರದೇಶವನ್ನು ಸಂಪೂರ್ಣ ಸ್ವಚ್ಛ ಮಾಡುತ್ತಿದೆ. ದೇಶದ ಪ್ರತಿಯೊಂದು ಭಾಗದಲ್ಲೂ ಇಂತಹ ಕೆಲವು ವಿಶಿಷ್ಟ ಪ್ರಯತ್ನಗಳು ನಡೆಯುತ್ತಿರುವುದನ್ನು ಗಮನಿಸುತ್ತಿದ್ದೇನೆ. ಅಕ್ಟೋಬರ್ 2ರಂದು ಗಾಂಧೀಜಿ ಜನ್ಮದಿನ. ಈ ಹಿನ್ನೆಲೆ ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಮಿಷನ್ ಅನ್ನು ಜನಾಂದೋಲನವಾಗಿ ಪರಿವರ್ತಿಸಿದವರನ್ನು ಅಭಿನಂದಿಸುವ ಸಂದರ್ಭವಿದು" ಎಂದು ಹೇಳಿದರು.
ಮುಂಗಾರುವಿನಲ್ಲಿ ಭಾರತದ ಸಮೃದ್ಧ ಮಳೆಯಾಗಿದ್ದು, ನೀರನ್ನು ಸಂರಕ್ಷಿಸಲು ದೇಶದ ವಿವಿಧ ಭಾಗಗಳಲ್ಲಿ ಮಾಡುತ್ತಿರುವ ಪ್ರಯತ್ನಗಳ ಬಗ್ಗೆ ಮೋದಿ ಪ್ರಸ್ತಾಪಿಸಿದರು.
ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿ ಪ್ರಧಾನಿಯಾದ ಬಳಿಕ ಈ ಮನ್ ಕಿ ಮಾತ್ ನಾಲ್ಕನೇ ಸಂಚಿಕೆಯಾಗಿದೆ.
ಇದನ್ನೂ ಓದಿ: ಭಾರತದ ನೈಟಿಂಗೇಲ್ ಲತಾ ಮಂಗೇಶ್ಕರ್ ಪತ್ರ ಓದಿ ಭಾವುಕರಾದ ಪ್ರಧಾನಿ ಮೋದಿ - PM Narendra Modi