ಲಾತೂರ್(ಮಹಾರಾಷ್ಟ್ರ): ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನಾಯಕಿ ಪಂಕಜಾ ಮುಂಡೆ ಅವರು ಸೋತರೆ 'ನಾನು ಸಾಯ್ತೀನಿ' ಎಂದು ವಿಡಿಯೋ ಹರಿಬಿಟ್ಟಿದ್ದ ವ್ಯಕ್ತಿ ಬಸ್ ಅಪಘಾತದಲ್ಲಿ ಶುಕ್ರವಾರ ಸಾವನ್ನಪ್ಪಿದ್ದಾರೆ. ಇದು ಅಪಘಾತವೋ ಅಥವಾ ಆತ್ಮಹತ್ಯೆಯೋ ಎಂಬುದು ತಿಳಿದುಬಂದಿಲ್ಲ.
ಮೃತರನ್ನು ಲಾತೂರ್‌ನ ಅಹ್ಮದ್‌ಪುರದ ಯೆಸ್ಟರ್‌ನ ನಿವಾಸಿ ಸಚಿನ್ ಕೊಂಡಿಬಾ ಮುಂಡೆ (38) ಎಂದು ಗುರುತಿಸಲಾಗಿದೆ. ಬೋರ್ಗಾಂವ್ ಪಾಟಿ ಬಸ್ ನಿಲ್ದಾಣದಲ್ಲಿ ರಾತ್ರಿ ವೇಳೆ ಆತನ ಶವ ಬಸ್ನಡಿ ಸಿಲುಕಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದು ಆತ್ಮಹತ್ಯೆಯಾಗಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಾಲಕನ ಬಂಧನ, ಬಸ್ ವಶ: ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್ ಚಾಲಕನನ್ನು ಬಂಧಿಸಲಾಗಿದೆ. ಇದು ಅಪಘಾತವೇ ಅಥವಾ ಆತ್ಮಹತ್ಯೆಯೇ ಎಂದು ತನಿಖೆ ನಡೆಯುತ್ತಿದ್ದು, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಅನ್ನು ಜಪ್ತಿ ಮಾಡಲಾಗಿದೆ. ಯಲ್ದರವಾಡಿ ಮಾರ್ಗದ ಬಸ್ ಬೋರಗಾಂವ್ ಪಟಿ ಬಸ್ ನಿಲ್ದಾಣದಲ್ಲಿ ನಿಂತಾಗ ಈ ದುರ್ಘಟನೆ ಸಂಭವಿಸಿದೆ. ಸಚಿನ್ ಮುಂಡೆ ಬಸ್ ಹಿಂದೆ ನಿಂತಿದ್ದಾಗ, ಚಕ್ರದಡಿ ಸಿಲುಕಿ ನಜ್ಜುಗುಜ್ಜಾಗಿದ್ದಾನೆ.
ಮೃತ ವ್ಯಕ್ತಿ ಅವಿವಾಹಿತರಾಗಿದ್ದು, ತಂದೆ-ತಾಯಿ ಮತ್ತು ಸಹೋದರನೊಂದಿಗೆ ವಾಸವಾಗಿದ್ದರು. ಸಾವಿನ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಕಿಂಗಾವ್ ಪೊಲೀಸ್ ಠಾಣೆಯ ಸಹಾಯಕ ಇನ್ಸ್‌ಪೆಕ್ಟರ್ ಬಹುಸಾಹೇಬ್ ಖಂಡಾರೆ ತಿಳಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಬೀಡ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪಂಕಜಾ ಮುಂಡೆ ಅವರು ಕಾಂಗ್ರೆಸ್ ಅಭ್ಯರ್ಥಿ ಬಜರಂಗ್ ಸೋನಾವಾನೆ ಅವರ ವಿರುದ್ಧ 6,553 ಮತಗಳಿಂದ ಸೋಲು ಕಂಡಿದ್ದಾರೆ. ಚುನಾವಣಾ ಆಯೋಗವು ಜೂನ್ 5 ರ ಮುಂಜಾನೆ ನಿಖರ ಫಲಿತಾಂಶ ಘೋಷಿಸಿತ್ತು. ಫಲಿತಾಂಶದ ಬಳಿಕ ಸಚಿನ್ ಖಿನ್ನತೆಗೆ ಒಳಗಾಗಿದ್ದ. ಮೌನವಾಗಿರುತ್ತಿದ್ದ ಎಂದು ಮೃತನ ಸಂಬಂಧಿಕರು ಹೇಳಿದ್ದಾರೆ. ಶನಿವಾರ ಬೆಳಗ್ಗೆ ಗ್ರಾಮದಲ್ಲಿ ಅಂತಿಮ ಸಂಸ್ಕಾರ ಮಾಡಲಾಗಿದೆ.
ಇದನ್ನೂ ಓದಿ: ಮೋದಿ 3.0 ಸರ್ಕಾರದಲ್ಲಿ ರಾಜ್ಯದ ಐವರಿಗೆ ಅವಕಾಶ: ಯಾರಿಗೆ ಸಂಪುಟ ದರ್ಜೆ ಸ್ಥಾನ? - MODI CABINET