ಛತ್ರಪತಿ ಸಂಭಾಜಿನಗರ (ಔರಂಗಾಬಾದ್): ತಂಗಿಯ ಪ್ರೇಮ ವಿವಾಹಕ್ಕೆ ಸಹಾಯ ಮಾಡಿದ್ದಕ್ಕೆ ಸಿಟ್ಟಿಗೆದ್ದು, ಸಿನಿಮೀಯ ಶೈಲಿಯಲ್ಲಿ ಯುವಕನೊಬ್ಬನ ದೇಹದ ಮೇಲೆ ನಾಲ್ಕು ಬಾರಿ ಬೊಲೆರೋ ಚಲಾಯಿಸಿ ಕೊಂದು ಹಾಕಿರುವ ಆಘಾತಕಾರಿ ಘಟನೆ ವಾಲಾಜ್ ಪ್ರದೇಶದಲ್ಲಿ ನಡೆದಿದೆ. ಮೃತ ಯುವಕನ ಹೆಸರು ಪವನ್ ಮೋಧೆ ಎಂದಾಗಿದ್ದು, ಏಪ್ರಿಲ್ 4 ರಂದು ಮದುವೆ ಆಗಬೇಕಿತ್ತು. ಹೀಗಾಗಿ ಹಣ ತೆಗೆಯಲು ತಂದೆಯೊಂದಿಗೆ ಬ್ಯಾಂಕ್‌ಗೆ ತೆರಳಿದ್ದರು ಎಂಬುದಾಗಿ ತಿಳಿದು ಬಂದಿದೆ. ಕೊಲೆಯ ಆರೋಪಿ ಸಚಿನ್ ವಾಘಚೌರೆ. ಮೃತನ ಚಿಕ್ಕಪ್ಪ ಎಂಬುದಾಗಿ ತನಿಖೆ ವೇಳೆ ತಿಳಿದು ಬಂದಿದೆ. ವಾಲಾಜ್ ವ್ಯಾಪ್ತಿಯ ಶೆಂಡೂರು ವಾಡ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ವಾಲಾಜ್ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪವನ್ ಅವರ ತಂದೆ ಶಿವರಾಮ್ ಅವರ ಸೋದರಳಿಯ ಆರೋಪಿ ಸಚಿನ್ ವಾಘಚೌರೆ ಅವರ ಪುತ್ರಿಯೊಂದಿಗೆ ಪ್ರೇಮ ವಿವಾಹವಾಗಿದ್ದರು. ನಂತರ ಶಿವರಾಂ ಸಚಿನ್‌ಗೆ ಘಟನೆ ಮರೆಯಲು ಪ್ರಯತ್ನಿಸಿದ್ದರು. ಇಬ್ಬರ ಪ್ರೇಮವಿವಾಹಕ್ಕೆ ಶಿವರಾಂ ಸಹಾಯ ಮಾಡಿದ್ದಾರೆ ಎಂದು ಸಚಿನ್ ಶಂಕಿಸಿದ್ದರು. ಹೀಗಾಗಿ ಯುವಕನ ಮೇಲೆ ಕಡುಕೋಪ ಇತ್ತು. ಶಿವರಾಂ ಪುತ್ರ ಪವನ್ ಅ. 4ರಂದು ವಿವಾಹವಾಗಲಿದ್ದು, ಅದಕ್ಕಾಗಿ ಹಣ ತರಲು ತಂದೆ - ಮಗ ಇಬ್ಬರೂ ದ್ವಿಚಕ್ರ ವಾಹನದಲ್ಲಿ ಬ್ಯಾಂಕ್‌ಗೆ ತೆರಳಿದ್ದರು.
ಹಣ ತೆಗೆದುಕೊಂಡು ಹಿಂತಿರುಗುತ್ತಿದ್ದಾಗ ಆರೋಪಿಗಳು ಹಾಗೂ ಆತನ ಐವರು ಸಹಚರರು ಬೊಲೊರೊ ಕಾರಿನಿಂದ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾರೆ. ಇದರಿಂದಾಗಿ ಪವನ್ ಮತ್ತು ಶಿವರಾಂ ಇಬ್ಬರೂ ರಸ್ತೆಯಲ್ಲಿ ಬಿದ್ದಿದ್ದಾರೆ. ಇದಾದ ಬಳಿಕ ಆರೋಪಿಗಳು ಕಾರನ್ನು ತಿರುಗಿಸಿ ಬೊಲೆರೊ ಜೀಪ್ ಅನ್ನು ಮತ್ತೆ ಮತ್ತೆ ಅವರ ಮೇಲೆ ಹರಿಸಿದ್ದಾರೆ.
ಪವನ್ ತಲೆಯ ಮೇಲೆ ಕಾರು ಚಲಿಸಿದೆ. ನಂತರ ಆರೋಪಿಗಳು ಪವನ್ ದೇಹದ ಮೇಲೆ ನಾಲ್ಕು ಬಾರಿ ಕಾರು ಚಲಾಯಿಸಿದ್ದಾರೆ. ಇದರಿಂದಾಗಿ ಪವನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಶಿವರಾಮ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆ ಕುರಿತು ಮಾಹಿತಿ ಪಡೆದ ವಾಲಾಜ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಘಟನೆ ಬಳಿಕ ಆರೋಪಿಗಳು ಪರಾರಿಯಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.