ನವದೆಹಲಿ/ಕೋಲ್ಕತ್ತಾ: ಜೀವ ಮತ್ತು ವೈದ್ಯಕೀಯ ವಿಮಾ ಕಂತುಗಳ ಮೇಲಿನ ಜಿಎಸ್‌ಟಿ ಹಿಂಪಡೆಯಬೇಕೆಂಬ ಬೇಡಿಕೆ ಜೋರಾಗಿದೆ. ಖುದ್ದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರೇ ತಮ್ಮದೇ ಸರ್ಕಾರದ ಮುಂದೆ ಈ ಬೇಡಿಕೆ ಮಂಡಿಸಿದ್ದಾರೆ. ಇದನ್ನು ಹಲವಾರು ಪ್ರತಿಪಕ್ಷಗಳ ನಾಯಕರು ಬೆಂಬಲಿಸಿದ್ದಾರೆ. ಈಗ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಧ್ವನಿಗೂಡಿಸಿದ್ದಾರೆ.
Our demand to Government of India is to roll back GST from life insurance and medical insurance premium on grounds of people's health imperatives.
— Mamata Banerjee (@MamataOfficial) August 1, 2024
This GST is bad because it adversely affects the people's ability to take care of their basic vital needs.
If Government of India…
ಕೆಲ ದಿನಗಳ ಹಿಂದೆ ಕೇಂದ್ರ ಗಡ್ಕರಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದಾರೆ. ಜೀವ ಮತ್ತು ವೈದ್ಯಕೀಯ ವಿಮಾ ಕಂತುಗಳ ಮೇಲಿನ ಶೇ.18 ರಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಹಿಂತೆಗೆದುಕೊಳ್ಳಬೇಕೆಂದು ಕೋರಿದ್ದಾರೆ. ಅಲ್ಲದೇ, ಜೀವ ವಿಮಾ ಕಂತುಗಳ ಮೇಲೆ ಜಿಎಸ್‌ಟಿ ವಿಧಿಸುವುದು ಜೀವನದ ಅನಿಶ್ಚಿತತೆಗಳ ಮೇಲೆ ತೆರಿಗೆ ವಿಧಿಸುವುದಕ್ಕೆ ಸಮಾನವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಆಗಸ್ಟ್ 8 ರಂದು ಜಿಎಸ್‌ಟಿ ಕೌನ್ಸಿಲ್ ಸಭೆ: ತೆರಿಗೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಜವಾಬ್ದಾರಿಯುತ ಜಿಎಸ್‌ಟಿ ಕೌನ್ಸಿಲ್ ಇದೇ ಆಗಸ್ಟ್‌ನಲ್ಲಿ ಸಭೆ ಸೇರಲಿದೆ. ಇದಕ್ಕೂ ಮುನ್ನವೇ ಕೇಂದ್ರ ಸಚಿವ ಗಡ್ಕರಿ ಅವರು ಜೀವ ವಿಮಾ ಕಂತುಗಳ ಮೇಲೆ ಜಿಎಸ್‌ಟಿಯನ್ನು ಖಂಡಿಸಿದ್ದಾರೆ. ಇದನ್ನು ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ, ಸಮಾಜವಾದಿ ಪಕ್ಷದ ಸಂಸದ ರಾಜೀವ್ ಕುಮಾರ್ ರೈ ಮತ್ತು ಆರ್‌ಜೆಡಿ ಸಂಸದ ಎ.ಡಿ.ಸಿಂಗ್ ಸೇರಿದಂತೆ ಇತರರು ಬೆಂಬಲಿಸಿದ್ದಾರೆ.
ಇದೀಗ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಹ ಬೆಂಬಲಿಸಿದ್ದಾರೆ. ''ಜನರ ಆರೋಗ್ಯದ ಅಗತ್ಯತೆಗಳ ಆಧಾರದ ಮೇಲೆ ಜೀವ ವಿಮೆ ಮತ್ತು ವೈದ್ಯಕೀಯ ವಿಮಾ ಕಂತುಗಳಿಂದ ಜಿಎಸ್‌ಟಿಯನ್ನು ಹಿಂದಕ್ಕೆ ಪಡೆಯಬೇಕೆಂದು ಭಾರತ ಸರ್ಕಾರಕ್ಕೆ ನಮ್ಮ ಬೇಡಿಕೆಯಾಗಿದೆ. ಈ ಜಿಎಸ್‌ಟಿ ಕೆಟ್ಟದ್ದಾಗಿದೆ. ಏಕೆಂದರೆ, ಇದು ಜನರ ಮೂಲಭೂತ ಅಗತ್ಯಗಳನ್ನು ನೋಡಿಕೊಳ್ಳುವ ಸಾಮರ್ಥ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಭಾರತ ಸರ್ಕಾರವು ಜನವಿರೋಧಿ ಜಿಎಸ್‌ಟಿಯನ್ನು ಹಿಂತೆಗೆದುಕೊಳ್ಳದಿದ್ದರೆ, ನಾವು ರಸ್ತೆಗಿಳಿಯುವುದು ಹೋರಾಟ ಮಾಡುವುದು ಖಚಿತ'' ಎಂದು ಟಿಎಂಸಿ ನಾಯಕ ಮಮತಾ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ವಿತ್ತ ಸಚಿವರಿಗೆ ಪತ್ರ ಬರೆದಿದ್ದ ಗಡ್ಕರಿ: ಜುಲೈ 28ರಂದು ವಿತ್ತ ಸಚಿವರಿಗೆ ಪತ್ರ ಬರೆದಿದ್ದ ಗಡ್ಕರಿ, ಕುಟುಂಬಕ್ಕೆ ರಕ್ಷಣೆ ನೀಡಲು ಜೀವನದ ಅನಿಶ್ಚಿತತೆಯ ಅಪಾಯವನ್ನು ಆವರಿಸುವ ವ್ಯಕ್ತಿಯು ಖರೀದಿದ ಪ್ರೀಮಿಯಂಗೆ ತೆರಿಗೆಯನ್ನು ವಿಧಿಸಬಾರದು. ಇದಲ್ಲದೇ, ಪ್ರಮುಖ ವಿಷಯ ಎಂದರೆ ಜೀವ ಮತ್ತು ವೈದ್ಯಕೀಯ ವಿಮಾ ಕಂತುಗಳ ಮೇಲಿನ ಜಿಎಸ್‌ಟಿ ಹಿಂತೆಗೆದುಕೊಳ್ಳುವಿಕೆಗೆ ಸಂಬಂಧಿಸಿದೆ. ಜೀವ ವಿಮೆ ಮತ್ತು ವೈದ್ಯಕೀಯ ವಿಮಾ ಪ್ರೀಮಿಯಂಗಳೆರಡೂ ಶೇ.18ರಷ್ಟು ಜಿಎಸ್‌ಟಿ ದರಕ್ಕೆ ಒಳಪಟ್ಟಿರುತ್ತವೆ.
ಈ ರೀತಿ ವೈದ್ಯಕೀಯ ವಿಮಾ ಕಂತುಗಳ ಮೇಲಿನ ಶೇ.18ರಷ್ಟು ಜಿಎಸ್‌ಟಿ ಸಾಮಾಜಿಕವಾಗಿ ಅಗತ್ಯವಾಗಿರುವ ಈ ವಿಭಾಗದ ಬೆಳವಣಿಗೆಗೆ ಅಡ್ಡಿಯಾಗುತ್ತಿದೆ. ಜೀವ ಮತ್ತು ವೈದ್ಯಕೀಯ ವಿಮಾ ಪ್ರೀಮಿಯಂ ಮೇಲಿನ ಜಿಎಸ್‌ಟಿಯನ್ನು ಹಿಂಪಡೆಯುವ ಸಲಹೆಯನ್ನು ಆದ್ಯತೆಯ ಮೇರೆಗೆ ಪರಿಗಣಿಸಲು ನಿಮ್ಮನ್ನು ವಿನಂತಿಸಲಾಗಿದೆ. ಏಕೆಂದರೆ, ಇದು ಬಾಕಿ ಇರುವ ನಿಯಮಗಳ ಪ್ರಕಾರ ಹಿರಿಯ ನಾಗರಿಕರಿಗೆ ತೊಡಕಾಗುತ್ತದೆ ಎಂದು ಉಲ್ಲೇಖಿಸಿದ್ದರು.
ಇದನ್ನೂ ಓದಿ: ಜುಲೈ ತಿಂಗಳಲ್ಲಿ ಶೇ 10 ರಷ್ಟು GST ಸಂಗ್ರಹ ಹೆಚ್ಚಳ: 1.74 ಲಕ್ಷ ಕೋಟಿಯಿಂದ 1.82 ಲಕ್ಷ ಕೋಟಿಗೆ ಜಿಗಿತ