ಕೋಲ್ಕತ್ತಾ (ಪಶ್ಚಿಮ ಬಂಗಾಳ): ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರು ಇಂಡಿಯಾ ಮೈತ್ರಿಕೂಟವನ್ನು ತೊರೆದು ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೆ ಸೇರಲು ಮುಂದಾಗಿದ್ದಾರೆ. ಈ ಬೆಳವಣಿಗೆ ನಡುವೆಯೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹೇಳಿಕೆಯೊಂದನ್ನು ನೀಡಿದ್ದು, ''ನಿತೀಶ್ ಕುಮಾರ್ ಅವರ ನಿರ್ಗಮನವು ಪ್ರತಿಪಕ್ಷಗಳ ಮೈತ್ರಿಯ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ'' ಎಂದು ಹೇಳಿದ್ದಾರೆ.
75ನೇ ಗಣರಾಜ್ಯೋತ್ಸವದ ಅಂಗವಾಗಿ ರಾಜಭವನದಲ್ಲಿ ನಿನ್ನೆ ನಡೆದ ಕಾರ್ಯಕ್ರಮದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, '''ಬಿಹಾರದ ಜನರ ದೃಷ್ಟಿಯಲ್ಲಿ ನಿತೀಶ್ ಕುಮಾರ್ ಅವರು ತಮ್ಮ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅವರು ರಾಜೀನಾಮೆ ನೀಡಿದರೆ, ತೇಜಸ್ವಿ ಯಾದವ್‌ಗೆ ಬಿಹಾರದಲ್ಲಿ ಕೆಲಸ ಮಾಡುವುದು ಸುಲಭವಾಗುತ್ತದೆ'' ಎಂದು ಅಭಿಪ್ರಾಯಪಟ್ಟಿದ್ದಾರೆ.
''ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಲಿದೆ'' ಎಂದು ಮಮತಾ ಘೋಷಿಸಿದ್ದಾರೆ. ಪ್ರಾದೇಶಿಕ ಪಕ್ಷಗಳು ಒಗ್ಗಟ್ಟಾಗಿಯೇ ಇರಲಿದ್ದು, ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರವೇ ಮುಂದಿನ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಅತೃಪ್ತ ಜೆಡಿಯು ಶಾಸಕರ ಸಂಪರ್ಕ: ''ಒಂದು ವೇಳೆ ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಮೈತ್ರಿಯಿಂದ ಹೊರ ನಡೆಯಲು ಹಾಗೂ ಬಿಜೆಪಿಯೊಂದಿಗೆ ಕೈಜೋಡಿಸಲು ನಿರ್ಧರಿಸಿದರೆ, ಅದು ರಾಜ್ಯ ವಿಧಾನಸಭೆಯಲ್ಲಿ ನಂಬರ್ ಗೇಮ್ ಪೈಪೋಟಿಗೆ ಕಾರಣ ಆಗುತ್ತದೆ. ನಮ್ಮ ಅಂದಾಜಿನ ಪ್ರಕಾರ, ಜೆಡಿಯು ಕಳೆದುಕೊಂಡರೆ, ಸರಳ ಬಹುಮತ ಹೊಂದಲು ಮೈತ್ರಿಕೂಟಕ್ಕೆ ಸುಮಾರು 8 ಶಾಸಕರ ಕೊರತೆ ಕಾಡಲಿದೆ.
ಅಗತ್ಯವಿದ್ದರೆ, ಕೆಲವು ಅತೃಪ್ತ ಜೆಡಿಯು ಶಾಸಕರು ಆರ್‌ಜೆಡಿ ನಾಯಕರೊಂದಿಗೆ ಸಂಪರ್ಕದಲ್ಲಿರುವುದರಿಂದ ಪಕ್ಷವನ್ನು ಬದಲಾಯಿಸಲು ಸಿದ್ಧರಿರುವುದರಿಂದ ಈ ಸಂಖ್ಯೆಯನ್ನು ಸರಿ ಮಾಡಬಹುದು. ವಿಧಾನಸಭೆ ಸ್ಪೀಕರ್ ಆರ್‌ಜೆಡಿಯಿಂದ ಬಂದಿರುವುದರಿಂದ ಹಾಗೂ ನಿಯಮಗಳ ಪ್ರಕಾರವೇ ಈ ಬಾರಿ ಮೈತ್ರಿಕೂಟವು ಪ್ರಬಲ ಸ್ಥಾನದಲ್ಲಿದೆ. ಈ ಅಂಶಗಳು ನಿತೀಶ್ ಕುಮಾರ್ ಅವರು ಮೈತ್ರಿಯನ್ನು ಮುರಿಯುವ ಅಪಾಯವನ್ನು ತೆಗೆದುಕೊಳ್ಳುವ ಮುನ್ನ ಖಂಡಿತವಾಗಿಯೂ ಅವರ ಮೇಲೆ ತೀವ್ರ ಒತ್ತಡ ಹೇರುತ್ತೇವೆ'' ಎಂದು ಹೆಸರು ಹೇಳಲು ಇಚ್ಛಿಸದ ಎಐಸಿಸಿ ಹಿರಿಯ ಪದಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಲೋಕಸಭಾ ಚುನಾವಣೆ 2024: 96 ಕೋಟಿಗೂ ಹೆಚ್ಚು ಜನರು ಮತ ಚಲಾಯಿಸಲು ಅರ್ಹರು