ಮುಂಬೈ (ಮಹಾರಾಷ್ಟ್ರ): ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಉಪ ಮುಖ್ಯಮಂತ್ರಿಗಳಾದ ಏಕನಾಥ್ ಶಿಂಧೆ ಮತ್ತು ಅಜಿತ್ ಪವಾರ್ ಸೇರಿದಂತೆ ಆಡಳಿತಾರೂಢ ಮಹಾಯತಿ ಸದಸ್ಯರು ಶಾಸಕರಾಗಿ ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು. ಆದರೆ, ವಿದ್ಯುತ್ಚಾಲಿತ ಮತಯಂತ್ರ (ಇವಿಎಂ) ದುರ್ಬಳಕೆ ಆರೋಪ ಮಾಡಿರುವ ವಿಪಕ್ಷ ಸದಸ್ಯರು ಪ್ರಮಾಣವಚನ ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದಾರೆ.
ಮಹಾಯುತಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದ ಬಳಿಕ ಶನಿವಾರದಿಂದ ಆರಂಭವಾಗಿರುವ ಮೂರು ದಿನಗಳ ವಿಶೇಷ ಅಧಿವೇಶನದಲ್ಲಿ ಹೊಸದಾಗಿ ಆಯ್ಕೆಯಾಗಿರುವ ಸದಸ್ಯರಿಗೆ ಶಾಸಕತ್ವ ಪ್ರಮಾವಚನ ಸ್ವೀಕಾರ ಕಾರ್ಯಕ್ರಮ ನಡೆಯುತ್ತಿದೆ. ಆದರೆ, ವಿಪಕ್ಷಗಳಾದ ಶಿವಸೇನೆ (ಉದ್ಧವ್ ಬಣ), ಎನ್‌ಸಿಪಿ (ಶರದ್ ಪವಾರ್) ಮತ್ತು ಕಾಂಗ್ರೆಸ್ ಸದಸ್ಯರು ಶಾಸಕರಾಗಿ ಪ್ರತಿಜ್ಞಾವಿಧಿ ಪಡೆದುಕೊಳ್ಳಲು ನಿರಾಕರಿಸಿದ್ದಾರೆ.
ಬೆಳಗ್ಗೆ 11 ಗಂಟೆಗೆ ಕಲಾಪ ಆರಂಭವಾದ ಬಳಿಕ ಹಂಗಾಮಿ ಸ್ಪೀಕರ್ ಕಾಳಿದಾಸ್ ಕೊಲಂಬ್ಕರ್ ಅವರು ಚುನಾಯಿತ ಸದಸ್ಯರಿಗೆ ಶಾಸಕತ್ವದ ಪ್ರಮಾಣ ವಚನ ಬೋಧಿಸಿದರು.
ಬಹುಮತ ಜನರದ್ದೋ, ಇವಿಎಂನದ್ದೋ?: ಪ್ರಮಾಣವಚನ ಕಾರ್ಯಕ್ರಮ ಬಹಿಷ್ಕರಿಸಿದ ಬಳಿಕ ವಿಧಾನಸಭೆಯ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಸೇನೆ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ, ‘ಮೊದಲ ದಿನವೇ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸದಿರಲು ಮಹಾ ವಿಕಾಸ್ ಅಘಾಡಿ ಸದಸ್ಯರು ನಿರ್ಧರಿಸಿದ್ದಾರೆ. ಅಧಿಕಾರ ಪಡೆದಿರುವ ಮಹಾಯುತಿ ಸದಸ್ಯರು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಆದರೆ, ಈ ಬಹುಮತ ಜನರಿಂದ ಬಂದಿದ್ದೋ ಅಥವಾ ಇವಿಎಂ, ಚುನಾವಣಾ ಆಯೋಗ ನೀಡಿದ್ದೋ ಎಂದು ಪ್ರಶ್ನಿಸಿದರು.
ಸೊಲ್ಲಾಪುರದ ಮಲ್ಶಿರಾಸ್ ವಿಧಾನಸಭಾ ಕ್ಷೇತ್ರದ ಮರ್ಕಡವಾಡಿ ಗ್ರಾಮದಲ್ಲಿ ಬ್ಯಾಲೆಟ್ ಪೇಪರ್ ಮೂಲಕ ಅಣಕು ಮತದಾನಕ್ಕೆ ಮುಂದಾದಾಗ ಪೊಲೀಸರು ಜನರನ್ನು ಬಂಧಿಸಿ, ಕರ್ಫ್ಯೂ ಹೇರಿದ್ದಾರೆ. ಇದರ ವಿರುದ್ಧ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ. ಜನರ ಮನಸ್ಸಿನಲ್ಲಿ ಮತದಾನದ ಬಗ್ಗೆ ಅನುಮಾನಗಳಿವೆ. ಹೀಗಾಗಿ, ನಾವು ಪ್ರಮಾಣ ಸ್ವೀಕರಿಸುತ್ತಿಲ್ಲ ಎಂದು ತಿಳಿಸಿದರು.
ನವೆಂಬರ್ 20 ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ, ಶಿವಸೇನೆ (ಶಿಂಧೆ ಬಣ) ಮತ್ತು ಎನ್‌ಸಿಪಿ (ಅಜಿತ್ ಬಣ) ನೇತೃತ್ವದ 'ಮಹಾಯುತಿ' ಮೈತ್ರಿಯು ಮಹಾರಾಷ್ಟ್ರ ವಿಧಾನಸಭೆಯ 288 ಸ್ಥಾನಗಳ ಪೈಕಿ 230ರಲ್ಲಿ ಭರ್ಜರಿ ಜಯ ದಾಖಲಿಸಿದೆ. ಬಿಜೆಪಿ 132, ಶಿವಸೇನೆ 57 ಮತ್ತು ಎನ್‌ಸಿಪಿ 41 ಸ್ಥಾನಗಳನ್ನು ಗೆದ್ದಿವೆ.
ಇತ್ತ, ವಿಪಕ್ಷಗಳಾದ ಶಿವಸೇನೆ (ಯುಬಿಟಿ) 20, ಕಾಂಗ್ರೆಸ್ 16 ಮತ್ತು ಎನ್‌ಸಿಪಿ (ಎಸ್‌ಪಿ) 10 ಸೇರಿ ಕೇವಲ 46 ಸ್ಥಾನ ಪಡೆದುಕೊಂಡಿವೆ.
ಇದನ್ನೂ ಓದಿ: ಇಡಿ ಭರ್ಜರಿ ಬೇಟೆ;13.5 ಕೋಟಿ ರೂ. ವಶಕ್ಕೆ ಪಡೆದ ಜಾರಿ ನಿರ್ದೇಶನಾಲಯ