ಮುಂಬೈ (ಮಹಾರಾಷ್ಟ್ರ): ಭೂ ಹಗರಣದಲ್ಲಿ ಆರೋಪಿಯಾಗಿ ಜಾರಿ ನಿರ್ದೇಶನಾಲಯದಿಂದ (ಇಡಿ) ವಿಚಾರಣೆ ಎದುರಿಸುತ್ತಿರುವ ಉದ್ಧವ್ ಠಾಕ್ರೆ ಬಣದ ಶಿವಸೇನೆ ಶಾಸಕ ರವೀಂದ್ರ ವೇಕರ್ ಅವರು ಭಾನುವಾರ ಸಿಎಂ ಏಕನಾಥ್ ಶಿಂಧೆ ಬಣ ಸೇರಿದ್ದಾರೆ. ಇಡಿ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಅವರು ಬಣ ಬದಲಿಸಿದ್ದಾಗಿ ವಿಪಕ್ಷಗಳು ಆರೋಪಿಸಿವೆ.
ಜೋಗೇಶ್ವರಿ ಪೂರ್ವ ಕ್ಷೇತ್ರದ ಶಾಸಕರಾಗಿರುವ ವೇಕರ್ ಅವರು ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಪಕ್ಷದ ಹಿರಿಯ ನಾಯಕ ಮತ್ತು ಸಂಸದ ಗಜಾನನ ಕೀರ್ತಿಕರ್ ಅವರ ಸಮ್ಮುಖದಲ್ಲಿ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮ್ಮ ಕೆಲವು ಬೆಂಬಲಿಗರೊಂದಿಗೆ ಶಿವಸೇನೆಗೆ ಸೇರಿದರು. ಈ ಮೂಲಕ ಉದ್ಧವ್ ಠಾಕ್ರೆ ಅವರ ಬಣದ ಮತ್ತೊಬ್ಬ ಶಾಸಕ ಶಿಂಧೆ ಬಣ ಸೇರಿದ್ದಾರೆ. ರವೀಂದ್ರ ಅವರು ಉದ್ಧವ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದರು.
ಅಭಿವೃದ್ಧಿಗಾಗಿ ಶಿಂಧೆ ಬಣ ಸೇರ್ಪಡೆ: ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ರವೀಂದ್ರ ವೇಕರ್, ನಾನು 50 ವರ್ಷಗಳಿಂದ ಶಿವಸೇನೆಯ ಕಾರ್ಯಕರ್ತನಾಗಿದ್ದೇನೆ. 1974 ರಿಂದ ಶಿವಸೇನೆ ಸಂಸ್ಥಾಪಕ ದಿವಂಗತ ಬಾಳಾಸಾಹೇಬ್ ಠಾಕ್ರೆ ಅವರೊಂದಿಗೆ ಕೆಲಸ ಮಾಡಿದ್ದೇನೆ. 4 ಬಾರಿ ಕಾರ್ಪೊರೇಟರ್ ಆಗಿ, ಮುಂಬೈನ ಮುನ್ಸಿಪಲ್ ಕಾರ್ಪೊರೇಶನ್‌ನಲ್ಲಿ ಸ್ಥಾಯಿ ಸಮಿತಿಯಲ್ಲಿ ಕೆಲಸ ಮಾಡಿದ್ದೇನೆ. ಮೂರು ಬಾರಿ ಶಾಸಕನಾಗಿದ್ದೇನೆ. ನನ್ನ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಬಾಕಿ ಉಳಿದಿರುವುದರಿಂದ ಈಗ ಶಿಂಧೆ ಬಣದ ಶಿವಸೇನೆಗೆ ಸೇರುತ್ತಿದ್ದೇನೆ ಎಂದು ಹೇಳಿದರು. ಇದೇ ವೇಳೆ ವೇಕರ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಶ್ಲಾಘಿಸಿದರು.
ಕೇಂದ್ರದ ಎನ್‌ಡಿಎ ಮತ್ತು ಮಹಾರಾಷ್ಟ್ರದ ಮೈತ್ರಿ ಸರ್ಕಾರದ ಅಡಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳು ವೇಕರ್ ಮೇಲೆ ಪ್ರಭಾವ ಬೀರಿವೆ. ಆದ್ದರಿಂದ ಅವರು ಶಿವಸೇನೆಗೆ ಸೇರಿದ್ದಾರೆ ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದರು.
ಇಡಿಯಿಂದ ತಪ್ಪಿಸಿಕೊಳ್ಳುವ ಯತ್ನ: ಶಾಸಕ ರವೀಂದ್ರ ವೇಕರ್ ಅವರು ಜಾರಿ ನಿರ್ದೇಶನಾಲಯದ (ಇಡಿ) ವಿಚಾರಣೆ ಎದುರಿಸುತ್ತಿದ್ದು, ಇದರಿಂದ ತಪ್ಪಿಸಿಕೊಳ್ಳಲು ಶಿವಸೇನೆಗೆ ಸೇರಿದ್ದಾರೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಬಿಜೆಪಿ ಸರ್ಕಾರಗಳು ವಿಪಕ್ಷಗಳ ನಾಯಕರನ್ನು ಗುರಿಯಾಗಿಸಿಕೊಂಡು ಕೇಂದ್ರದ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ. ಇದಕ್ಕೆ ಈಗ ರವೀಂದ್ರ ಅವರು ಬಲಿಯಾಗಿದ್ದಾರೆ ಎಂದು ಆರೋಪಿಸಿವೆ.
ಆರೋಪವೇನು?: ಜೋಗೇಶ್ವರಿ ಮತ್ತು ವಿಖ್ರೋಲಿ ನಡುವೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಕ್ರೀಡ ಮತ್ತು ಮನರಂಜನಾ ಉದ್ದೇಶಕ್ಕಾಗಿ ಮೀಸಲಿರಿಸಿದ್ದ ಜಾಗದಲ್ಲಿ ಐಷಾರಾಮಿ ಹೋಟೆಲ್ ನಿರ್ಮಿಸಿದ ಆರೋಪ ರವೀಂದ್ರ ಅವರ ಮೇಲಿದೆ. ಈ ಸಂಬಂಧ ಇಡಿ ಅಧಿಕಾರಿಗಳು ಕೇಸ್ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಸಾರ್ವಜನಿಕ ಬಳಕೆಯ ಉದ್ದೇಶಕ್ಕಾಗಿ ಜಾಗವನ್ನು ರವೀಂದ್ರ ಮತ್ತು ಇತರರಿಗೆ ನಿಯೋಜಿಸಲಾಗಿತ್ತು. ಆದರೆ, ಹಣ ಮಾಡುವ ಉದ್ದೇಶದಿಂದ ಇಲ್ಲಿ ವಾಣಿಜ್ಯ ಕಟ್ಟಡ ನಿರ್ಮಿಸಲು, ಮುಂಬೈ ಮಹಾನಗರ ಪಾಲಿಕೆಗೆ ಸುಳ್ಳು ಮಾಹಿತಿ ನೀಡಿ 2021 ರಲ್ಲಿ ಅನುಮತಿ ಪಡೆದಿದ್ದಾರೆ ಎಂದು ವೇಕರ್ ವಿರುದ್ಧ ಇಡಿ ಎಫ್ಐಆರ್ನಲ್ಲಿ ಆರೋಪಿಸಿದೆ. ಪ್ರಕರಣದಲ್ಲಿ ರವೀಂದ್ರ ವೇಕರ್ ಅವರ ಪತ್ನಿ ಮನಿಷಾ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ನಿಜವಾದ ಶಿವಸೇನೆ: ಸ್ಪೀಕರ್ ತೀರ್ಪು ಯಾವೆಲ್ಲ ಅಂಶಗಳನ್ನು ಆಧರಿಸಿದೆ? ಇಲ್ಲಿದೆ ಮಾಹಿತಿ