ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಾಗಿ ಬಿಜೆಪಿ 25 ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದೆ. ವಿದರ್ಭ ವಲಯದ ವಾರ್ಧಾ ಜಿಲ್ಲೆಯ ಅರ್ವಿ ಕ್ಷೇತ್ರದಿಂದ ಸುಮಿತ್ ವಾಂಖೆಡೆ ಅವರಿಗೂ ಟಿಕೆಟ್ ನೀಡಲಾಗಿದೆ. ವಾಂಖೆಡೆ ಇವರು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಮಾಜಿ ಆಪ್ತ ಸಹಾಯಕ. ಅರ್ವಿ ಕ್ಷೇತ್ರದಿಂದ ಹಾಲಿ ಶಾಸಕ ದಾದಾರಾವ್ ಕೆಚೆ ಅವರಿಗೆ ಪಕ್ಷ ಟಿಕೆಟ್ ನಿರಾಕರಿಸಿದೆ. ಸೋಮವಾರದ ಪಟ್ಟಿಯೊಂದಿಗೆ, ನವೆಂಬರ್ 20ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ಇದುವರೆಗೆ 146 ಅಭ್ಯರ್ಥಿಗಳನ್ನು ಘೋಷಿಸಿದಂತಾಗಿದೆ.
ಶಿವರಾಜ್ ಪಾಟೀಲ್ ಸೊಸೆಗೆ ಟಿಕೆಟ್: ಬೋರಿವಲಿಯ ಹಾಲಿ ಶಾಸಕ ಸುನಿಲ್ ರಾಣೆ ಅವರಿಗೆ ಟಿಕೆಟ್ ನಿರಾಕರಿಸಲಾಗಿದ್ದು, ಈ ಕ್ಷೇತ್ರದಲ್ಲಿ ಮುಂಬೈ ಘಟಕದ ಪ್ರಧಾನ ಕಾರ್ಯದರ್ಶಿ ಸಂಜಯ್ ಉಪಾಧ್ಯಾಯ ಅವರಿಗೆ ಟಿಕೆಟ್ ನೀಡಲಾಗಿದೆ. ಮಾಜಿ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ಚಕುರ್ಕರ್ ಅವರ ಸೊಸೆ ಅರ್ಚನಾ ಪಾಟೀಲ್ ಚಕುರ್ಕರ್ ಅವರನ್ನು ಲಾತೂರ್ ನಗರದಿಂದ ಕಾಂಗ್ರೆಸ್ ಅಭ್ಯರ್ಥಿ ಮತ್ತು ಮಾಜಿ ಸಚಿವ ಅಮಿತ್ ದೇಶ್ ಮುಖ್ ವಿರುದ್ಧ ಪಕ್ಷ ಕಣಕ್ಕಿಳಿಸಿದೆ. ಅರ್ಚನಾ ಪಾಟೀಲ್-ಚಕುರ್ಕರ್ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಬಿಜೆಪಿಗೆ ಸೇರಿದ್ದರು.
ಅರ್ನಿ ಕ್ಷೇತ್ರದಲ್ಲಿ ಹಾಲಿ ಶಾಸಕ ಸಂದೀಪ್ ಧುರ್ವೆ ಅವರಿಗೆ ಟಿಕೆಟ್ ತಪ್ಪಿದ್ದು, ಮಾಜಿ ಶಾಸಕ ರಾಜು ತೋಡ್ಸಮ್ ಅವರನ್ನು ಕಣಕ್ಕಿಳಿಸಲಾಗಿದೆ. ಇದಲ್ಲದೆ, ಪಕ್ಷವು ವಿಕಾಸ್ ಕುಂಭಾರೆ ಅವರನ್ನು ಕೈಬಿಟ್ಟು ನಾಗ್ಪುರ ಸೆಂಟ್ರಲ್ ಸ್ಥಾನದಿಂದ ಪ್ರವೀಣ್ ದಾಟ್ಕೆ ಅವರನ್ನು ಕಣಕ್ಕಿಳಿಸಿದೆ. ಉಮರ್ಖೇಡ್ ಕ್ಷೇತ್ರದ ಹಾಲಿ ಶಾಸಕ ನಾಮದೇವ್ ಸಾಸಾನೆ ಅವರಿಗೆ ಟಿಕೆಟ್ ತಪ್ಪಿದ್ದು, ಈ ಕ್ಷೇತ್ರದಲ್ಲಿ ಕಿಶನ್ ವಾಂಖೆಡೆ ಅವರನ್ನು ಕಣಕ್ಕಿಳಿಸಲಾಗಿದೆ.
ವರ್ಸೊವಾದಿಂದ ಭಾರತಿ ಲವೇಕರ್, ಘಾಟ್ ಕೋಪರ್ನಿಂದ ಪರಾಗ್ ಶಾ, ಸೋಲಾಪುರ ಕ್ಷೇತ್ರದಿಂದ ಸಾರ್ವತ್ರಿಕ ಚುನಾವಣೆಯಲ್ಲಿ ಸೋತಿದ್ದ ಹರೀಶ್ ಪಿಂಪ್ಲೆ (ಮುರ್ತಿಜಾಪುರ) ಮತ್ತು ರಾಮ್ ಸಾತ್ಪುತೆ ಅವರನ್ನು ಮಾಲ್ ಶಿರಾಸ್ ಕ್ಷೇತ್ರದಿಂದ ಮತ್ತೆ ಕಣಕ್ಕಿಳಿಸಲಾಗಿದೆ.
ಘಾಟ್ ಕೋಪರ್ ಪೂರ್ವದಲ್ಲಿ, 2019 ರ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಲ್ಪಟ್ಟ ಮಾಜಿ ಸಚಿವ ಪ್ರಕಾಶ್ ಮೆಹ್ತಾ ಪ್ರಬಲ ಆಕಾಂಕ್ಷಿಯಾಗಿದ್ದರೂ, ಅವರಿಗೆ ಟಿಕೆಟ್ ಸಿಕ್ಕಿಲ್ಲ. ಇಲ್ಲಿ ಹಾಲಿ ಶಾಸಕ ಪರಾಗ್ ಶಾ ಅವರನ್ನೇ ಮತ್ತೆ ಆಯ್ಕೆ ಮಾಡಲಾಗಿದೆ. ಎನ್ಸಿಪಿಯ ಮಾಜಿ ಶಾಸಕ ಪ್ರಕಾಶ್ ದಹಕೆ ಅವರ ಪತ್ನಿ ಸಾಯಿ ದಹಕೆ ಅವರನ್ನು ಕಾರಂಜಾ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ. ಅವರು ಕಳೆದ ವಾರವಷ್ಟೇ ಪಕ್ಷಕ್ಕೆ ಸೇರಿದ್ದರು.
ಪಟ್ಟಿಯಲ್ಲಿನ ಇತರರು: ರಾಜೇಶ್ ವಾಂಖೆಡೆ (ಟಿಯೋಸಾ), ಉಮೇಶ್ ಯವಾಲ್ಕರ್ (ಮೊರ್ಶಿ), ಚರಣ್ ಸಿಂಗ್ ಠಾಕೂರ್ (ಕಟೋಲ್), ಕಾಂಗ್ರೆಸ್ ತೊರೆದು ಮತ್ತೆ ಬಿಜೆಪಿ ತೆಕ್ಕೆಗೆ ಬಂದ ಆಶಿಶ್ ದೇಶ್ ಮುಖ್, (ಸಾವ್ನೇರ್), ಮಿಲಿಂದ್ ಮಾನೆ (ನಾಗ್ಪುರ ಉತ್ತರ), ಅವಿನಾಶ್ ಬ್ರಹ್ಮಂಕರ್ (ಸಕೋಲಿ), ಕಿಶೋರ್ ಜೋರ್ಗೆವಾರ್ (ಚಂದ್ರಾಪುರ), ವಿನೋದ್ ಮೇಧಾ (ದಹನು), ಸ್ನೇಹಾ ದುಬೆ (ವಸೈ), ಮನೋಜ್ ಘೋರ್ಪಡೆ (ಕರಾಡ್ ಉತ್ತರ) ಮತ್ತು ಸಂಗ್ರಾಮ್ ದೇಶ್ಮುಖ್ (ಪಲುಸ್ ಕಡೇಗಾಂವ್).
ಇದನ್ನೂ ಓದಿ : ಹೈದರಾಬಾದ್ನಲ್ಲಿ ಪ್ರಿಯಕರನೊಂದಿಗೆ ಸೇರಿ 3ನೇ ಪತಿಯನ್ನು ಕೊಂದು, ಕೊಡಗಿನಲ್ಲಿ ಸುಟ್ಟು ಹಾಕಿದ ಪತ್ನಿ!