ನವದೆಹಲಿ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದರು. ಮಹಾರಾಷ್ಟ್ರದ ಅಭಿವೃದ್ಧಿಗೆ ನೀಡಿದ ಮಾರ್ಗದರ್ಶನ ಹಾಗೂ ಬೆಂಬಲಕ್ಕಾಗಿ ಪ್ರಧಾನಿಗೆ ಕೃತಜ್ಞತೆ ಸಲ್ಲಿಸಿದ ಫಡ್ನವೀಸ್, ಅವರ ಮಾರ್ಗದರ್ಶನದಲ್ಲಿ ರಾಜ್ಯವನ್ನು 'ಮುಂದಿನ ಹಂತ'ಕ್ಕೆ ಕೊಂಡೊಯ್ಯುವ ಪ್ರತಿಜ್ಞೆ ಮಾಡಿದರು.
ಡಿಸೆಂಬರ್ 5ರಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಫಡ್ನವಿಸ್ ಅವರು ಇದೇ ಮೊದಲ ಬಾರಿಗೆ ಪ್ರಧಾನಿಯನ್ನು ಭೇಟಿಯಾದರು.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಮಹಾ ಸಿಎಂ, "ಕಳೆದ 10 ವರ್ಷಗಳಲ್ಲಿ, ನಿಮ್ಮ ಬೆಂಬಲದೊಂದಿಗೆ ಮಹಾರಾಷ್ಟ್ರ ಪ್ರತಿಯೊಂದು ಕ್ಷೇತ್ರದಲ್ಲೂ ನಂಬರ್ 1 ಆಗಿದೆ. ಈಗ ನಿಮ್ಮ ನಾಯಕತ್ವ ಮತ್ತು ಮಾರ್ಗದರ್ಶನದಲ್ಲಿ ಈ ವಿಕಾಸ ಪಯಣವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಗುರಿಯನ್ನು ಹೊಂದಿದ್ದೇವೆ" ಎಂದು ಬರೆದುಕೊಂಡಿದ್ದಾರೆ.
"ಮಹಾರಾಷ್ಟ್ರದ ಅಭಿವೃದ್ಧಿಯ ಬೆನ್ನಿಗೆ ನಿಂತ ಪ್ರಧಾನಿ ಮೋದಿ ಅವರ ಅಮೂಲ್ಯವಾದ ಸಮಯ, ಮಾರ್ಗದರ್ಶನ, ಆಶೀರ್ವಾದಕ್ಕಾಗಿ ಅವರಿಗೆ ಅತ್ಯಂತ ಕೃತಜ್ಞತೆ ಸಲ್ಲಿಸುತ್ತೇನೆ. ನಮ್ಮಂತಹ ಕೋಟ್ಯಂತರ ಬಿಜೆಪಿ ಕಾರ್ಯಕರ್ತರಿಗೆ ಇನ್ನೂ ಹೆಚ್ಚು ಕೆಲಸ ಮಾಡಲು ನೀವು ಸ್ಫೂರ್ತಿಯಾಗಿದ್ದೀರಿ" ಎಂದು ತಿಳಿಸಿದ್ದಾರೆ.
ಬಳಿಕ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ದೆಹಲಿಯ ಅವರ ನಿವಾಸದಲ್ಲಿ ಭೇಟಿ ಮಾಡಿ, ಆಶೀರ್ವಾದ ಪಡೆದರು. ಸಿಎಂ ಆಗಿ ಅಧಿಕಾರ ವಹಿಸಿಕೊಂಡಿರುವ ಫಡ್ನವಿಸ್ ಅವರ ಮುಂದಿನ ಅವಧಿ ಯಶಸ್ವಿಯಾಗಲಿ ಎಂದು ಸಿಂಗ್ ಹಾರೈಸಿದರು.
"ನಮ್ಮ ಹಿರಿಯ ನಾಯಕ, ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ತುಂಬಾ ಖುಷಿಯಾಯಿತು. ಅವರಿಗೆ ಗಣೇಶನ ವಿಗ್ರಹವನ್ನು ನೀಡಿ, ಅವರಿಂದ ಆಶೀರ್ವಾದ ಪಡೆದುಕೊಂಡು ಬಂದೆ" ಎಂದು ಪಡ್ನವಿಸ್ ಎಕ್ಸ್ನಲ್ಲಿ ತಿಳಿಸಿದ್ದಾರೆ.
ರಾಜನಾಥ್ ಸಿಂಗ್ ಅವರೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, "ಮಹಾರಾಷ್ಟ್ರದ ಕ್ರಿಯಾಶೀಲ ಮುಖ್ಯಮಂತ್ರಿ ದೇವೇಂದ್ರ ಫಡ್ನಿವಿಸ್ ಅವರನ್ನು ಭೇಟಿ ಮಾಡಿದೆ. ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಫಡ್ನವೀಸ್, ಮಹಾರಾಷ್ಟ್ರದ ಅಭಿವೃದ್ಧಿ ಪಯಣಕ್ಕೆ ಹೊಸ ವೇಗವನ್ನು ನೀಡಲಿದ್ದಾರೆ ಎನ್ನುವ ವಿಶ್ವಾಸವಿದೆ. ಅವರ ಅಧಿಕಾರಾವಧಿ ಅತ್ಯಂತ ಯಶಸ್ವಿಯಾಗಿರಲಿ ಎಂದು ಹಾರೈಸುತ್ತೇನೆ" ಎಂದಿದ್ದಾರೆ.
ಕಳೆದ ತಿಂಗಳು ನಡೆದ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಭರ್ಜರಿ ಜಯ ಗಳಿಸಿತ್ತು. ಡಿ.5ರಂದು ಫಡ್ನವಿಸ್ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು. ಕಳೆದ ವಾರ ಫಡ್ನವಿಸ್ ನವದೆಹಲಿಗೆ ತೆರಳಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಉಪರಾಷ್ಟ್ರಪತಿ ಜಗದೀಪ್ ಧಂಕರ್ ಅವರನ್ನು ಭೇಟಿ ಮಾಡಿದ್ದರು. ಅವರಿಗೆ ವಿಠಲ-ರುಕ್ಮಿಣಿ ಪ್ರತಿಮೆಗಳನ್ನು ಉಡುಗೊರೆಯಾಗಿಯೂ ನೀಡಿದ್ದರು.
ಇದನ್ನೂ ಓದಿ: 84ನೇ ವರ್ಷಕ್ಕೆ ಕಾಲಿಟ್ಟ ಶರದ್ ಪವಾರ್: ಪ್ರಧಾನಿ ಮೋದಿ, ಅಜಿತ್ ಪವಾರ್ ಸೇರಿ ಗಣ್ಯರಿಂದ ಶುಭಾಶಯ