ನವದೆಹಲಿ: ಭಾರತೀಯ ಜನತಾ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯನ್ನು ನಾಳೆ ಬಿಡುಗಡೆ ಮಾಡಲಿದೆ ಎಂದು ಪಕ್ಷದ ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಅದು ತನ್ನ ಚುನಾವಣಾ ಪ್ರಣಾಳಿಕೆಗೆ "ಸಂಕಲ್ಪ ಪತ್ರ" ಎಂದು ಕರೆದಿದೆ. ಏಪ್ರಿಲ್ 14 ರಂದು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಬಿಡುಗಡೆ ಮಾಡಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯ ಪ್ರಣಾಳಿಕೆ ಸಮಿತಿ ಈಗಾಗಲೇ ಎರಡು ಸಭೆಗಳನ್ನು ನಡೆಸಿದೆ. ಬಿಜೆಪಿ ತನ್ನ ಪ್ರಣಾಳಿಕೆಗಾಗಿ 1.5 ಮಿಲಿಯನ್ ಸಲಹೆಗಳನ್ನು ಸ್ವೀಕರಿಸಿದೆ, ಇದರಲ್ಲಿ 400,000ಕ್ಕೂ ಹೆಚ್ಚು ಸಲಹೆಗಳನ್ನು NaMo ಅಪ್ಲಿಕೇಶನ್ ಮೂಲಕ ಸ್ವೀಕರಿಸಿದರೆ, 1.1 ಮಿಲಿಯನ್ ವಿಡಿಯೋಗಳ ಮೂಲಕವೂ ನಾನಾ ಸಲಹೆಗಳು ಬಂದಿವೆ.
ಪಕ್ಷದ ಮೂಲಗಳ ಪ್ರಕಾರ, ಬಿಜೆಪಿಯ ಪ್ರಣಾಳಿಕೆಯು ಅಭಿವೃದ್ಧಿ, ಸಮೃದ್ಧ ಭಾರತ, ಮಹಿಳೆಯರು, ಯುವಕರು, ಬಡವರು ಮತ್ತು ರೈತರನ್ನು ಕೇಂದ್ರೀಕರಿಸಿ ರಚನೆ ಮಾಡಲಾಗುತ್ತದೆ. ಸಾಧಿಸಬಹುದಾದ ಭರವಸೆಗಳನ್ನು ಮಾತ್ರ ಈ ಬಾರಿ ಜನರ ಮುಂದಿಡಲು ಪಕ್ಷ ನಿರ್ಧರಿಸಿದೆ ಎನ್ನಲಾಗಿದೆ. ಪ್ರಣಾಳಿಕೆಯ ವಿಷಯವು ’ಮೋದಿ ಗ್ಯಾರಂಟಿ ಅಭಿವೃದ್ಧಿ ಹೊಂದಿದ ಭಾರತ 2047‘‘ ಎಂಬ ಮುಖ್ಯ ಧ್ಯೇಯವನ್ನು ಇಟ್ಟುಕೊಂಡು ಹೊರ ಬರಲಿದೆ. ಅಷ್ಟೇ ಅಲ್ಲ ಆರ್ಥಿಕ ಅಭಿವೃದ್ಧಿ ಜತೆ ಜತೆಗೆ ಸಾಂಸ್ಕೃತಿಕ ರಾಷ್ಟ್ರೀಯತೆಯನ್ನು ಕೇಂದ್ರೀಕರಿಸಿ ಈ ಬಾರಿಯ ಪ್ರಣಾಳಿಕೆ ಸಿದ್ಧಪಡಿಸಲಾಗಿದೆ.
ಭಾರತೀಯ ಜನತಾ ಪಕ್ಷವು 27 ಸದಸ್ಯರನ್ನು ಒಳಗೊಂಡ ಚುನಾವಣಾ ಪ್ರಣಾಳಿಕೆ ಸಮಿತಿಯನ್ನು ರಚಿಸಿದೆ. ಈ ಸಮಿತಿಯ ಅಧ್ಯಕ್ಷರಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ನೇಮಕ ಮಾಡಲಾಗಿದೆ. ಏತನ್ಮಧ್ಯೆ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಣಾಳಿಕೆ ಸಮಿತಿಯ ಸಂಯೋಜಕರಾಗಿದ್ದಾರೆ. ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಸಹ ಸಂಯೋಜಕರಾಗಿದ್ದಾರೆ.
ಈಗಾಗಲೇ ಪ್ರತಿ ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಈಗಾಗಲೇ ತನ್ನ ಪ್ರಣಾಳಿಕೆಯನ್ನು "ನ್ಯಾಯ ಪತ್ರ" ಎಂಬ ಹೆಸರಿನಲ್ಲಿ ಬಿಡುಗಡೆ ಮಾಡಿದೆ. ಈ ಬಾರಿ ಕಾಂಗ್ರೆಸ್ ತಾನು ಅಧಿಕಾರಕ್ಕೆ ಬಂದರೆ 25 ಗ್ಯಾರಂಟಿಗಳನ್ನು ಜಾರಿಗೆ ತರುವುದಾಗಿ ಹೇಳಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಸಾರ್ವಜನಿಕರಿಗೆ 25 ಭರವಸೆಗಳನ್ನು ನೀಡಿದ್ದಾರೆ. ಕುಟುಂಬದ ಬಡ ಮಹಿಳೆಯರಿಗೆ ವಾರ್ಷಿಕ 100,000 ರೂ. ಆರ್ಥಿಕ ನೆರವು ನೀಡುವ ಪ್ರಮುಖ ಭರವಸೆಯೊಂದಿಗೆ, 18ನೇ ಲೋಕಸಭೆ ಚುನಾವಣೆ ಗೆಲ್ಲಲು ಕಾಂಗ್ರೆಸ್ ಸನ್ನದ್ಧವಾಗಿದೆ.
ಏಪ್ರಿಲ್ 19, 2024 ರಿಂದ ಜೂನ್ 1, 2024 ರವರೆಗೆ 7 ಹಂತಗಳಲ್ಲಿ ಮತದಾನ ನಡೆಯಲಿದೆ. ಜೂನ್ 4, 2024 ರಂದು ಅಂತಿಮ ಫಲಿತಾಂಶ ಹೊರ ಬೀಳಲಿದೆ.
ಇದನ್ನು ಓದಿ: ಕುಲದೀಪ್, ಖಲೀಲ್, ಜೇಕ್ ಆಟಕ್ಕೆ ಲಖನೌ ಉಡೀಸ್: ಬದೌನಿ ಹೋರಾಟದ ಅರ್ಧಶತಕ ವ್ಯರ್ಥ - IPL 2024