ವಯನಾಡು(ಕೇರಳ): ಕಾಂಗ್ರೆಸ್ ನಾಯಕ ಮತ್ತು ಹಾಲಿ ಸಂಸದ ರಾಹುಲ್ ಗಾಂಧಿ ಇಂದು ಕೇರಳದ ವಯನಾಡು ಲೋಕಸಭಾ ಕ್ಷೇತ್ರದಲ್ಲಿ ತಮ್ಮ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ಕಲ್ಪೆಟ್ಟಾದಲ್ಲಿ ಬೃಹತ್ ರೋಡ್ ಶೋ ನಡೆಸುವ ಮೂಲಕ ಕ್ಷೇತ್ರದಲ್ಲಿ ಶಕ್ತಿ ಪ್ರದರ್ಶನ ನಡೆಸಿದರು.
ಈ ವೇಳೆ, ಜನತೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ''ನಿಮ್ಮ ಸಂಸತ್ ಕ್ಷೇತ್ರದ ಪ್ರತಿನಿಧಿಯಾಗಿರುವುದು ನನಗೆ ಗೌರವದ ವಿಷಯ. ನಾನು ನಿಮ್ಮನ್ನು ಕೇವಲ ಮತದಾರರಂತೆ ಪರಿಗಣಿಸುವುದಿಲ್ಲ ಮತ್ತು ಹಾಗೆ ಭಾವಿಸುವುದೂ ಇಲ್ಲ. ನನ್ನ ತಂಗಿ ಪ್ರಿಯಾಂಕಾ ಅವರನ್ನು ನಾನು ಹೇಗೆ ಭಾವಿಸುತ್ತೇನೋ ಅದೇ ರೀತಿ ನಿಮ್ಮನ್ನೂ ಭಾವಿಸುತ್ತೇನೆ. ನಿಮ್ಮ ಬಗ್ಗೆ ಯೋಚಿಸುತ್ತೇನೆ. ಹಾಗಾಗಿ ವಯನಾಡಿನ ಪ್ರತೀ ಮನೆಗಳಲ್ಲೂ ನನಗೆ ಸಹೋದರಿಯರು, ತಾಯಿ, ತಂದೆ, ಸಹೋದರರು ಇದ್ದಾರೆ. ಅದಕ್ಕಾಗಿ ನಾನು ನಿಮಗೆ ನನ್ನ ಹೃದಯಾಂತರಾಳದಿಂದ ಧನ್ಯವಾದ ಹೇಳುತ್ತೇನೆ'' ಎಂದು ಹೇಳಿದರು.
ಇದೇ ವೇಳೆ, ''ವಯನಾಡಿನ ಸಮಸ್ಯೆಗಳನ್ನು ಆಲಿಸಲು ನಾನು ಯಾವಾಗಲೂ ಸಿದ್ಧ. ಕ್ಷೇತ್ರದಲ್ಲಿ ಮನುಷ್ಯ-ಪ್ರಾಣಿ ಸಂಘರ್ಷ, ವೈದ್ಯಕೀಯ ಕಾಲೇಜು ಸಮಸ್ಯೆಗಲಿವೆ. ಈ ಹೋರಾಟದಲ್ಲಿ ನಾನು ಇಲ್ಲಿನ ಜನರೊಂದಿಗೆ ನಿಲ್ಲುತ್ತೇನೆ. ವೈದ್ಯಕೀಯ ಕಾಲೇಜಿಗೆ ಸರ್ಕಾರದ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದ್ದೇವೆ. ಈ ಬಗ್ಗೆ ಸಿಎಂಗೆ ಪತ್ರ ಬರೆದಿದ್ದೇನೆ. ಆದರೆ, ದುರದೃಷ್ಟವಶಾತ್ ಸಿಎಂ ಅದನ್ನು ಮುಂದಕ್ಕೆ ಕೊಂಡೊಯ್ದಿಲ್ಲ. ದೆಹಲಿಯಲ್ಲಿ ನಮ್ಮ ಸರ್ಕಾರವಿದ್ದರೆ ಮತ್ತು ಕೇರಳದಲ್ಲಿ ಸರ್ಕಾರ ಬಂದಾಗ ಎರಡನ್ನೂ ಸಮಸ್ಯೆಗಳನ್ನು ನಾವು ಪರಿಹರಿಸುತ್ತೇವೆ. ಇವುಗಳ ಬಗ್ಗೆ ನನಗೆ ಸಂಪೂರ್ಣವಾಗಿ ಮನವರಿಕೆಯಾಗಿದೆ'' ಎಂದು ಗಾಂಧಿ ತಿಳಿಸಿದರು.
ಇದಕ್ಕೂ ಮುನ್ನ ನಾಮಪತ್ರ ಸಲ್ಲಿಕೆ ಆಗಮಿಸಿದ ರಾಹುಲ್ ಅವರನ್ನು ಸ್ವಾಗತಿಸಲು ಯುಡಿಎಫ್ ಮುಖಂಡರು, ಕಾರ್ಯಕರ್ತರು ಸೇರಿದಂತೆ ಸಾವಿರಾರು ಜನರು ಕಲ್ಪೆಟ್ಟಾದಲ್ಲಿ ಜಮಾಯಿಸಿದ್ದರು. ಪ್ರಿಯಾಂಕಾ ಗಾಂಧಿ ಅವರೊಂದಿಗೆ ರಾಹುಲ್ ಇಲ್ಲಿನ ಸಿವಿಲ್ ಸ್ಟೇಷನ್ವರೆಗೆ ರೋಡ್ ಶೋ ನಡೆಸಿದರು.
ಕಾಂಗ್ರೆಸ್ ಇನ್ನೂ ಪ್ರಬಲ ಅಸ್ತಿತ್ವವನ್ನು ಹೊಂದಿರುವ ರಾಜ್ಯಗಳಲ್ಲಿ 20 ಲೋಕಸಭಾ ಕ್ಷೇತ್ರಗಳ ಕೇರಳ ಒಂದಾಗಿದೆ. 2019ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ವಯನಾಡಿನಿಂದ 4.31 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದರು.
ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) 20ರಲ್ಲಿ 19 ಸ್ಥಾನಗಳನ್ನು ಗೆದ್ದಿತ್ತು. ಈ ಪೈಕಿ ಕಾಂಗ್ರೆಸ್ 15 ಸ್ಥಾನ, ಮಿತ್ರಪಕ್ಷಗಳಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಎರಡು ಸ್ಥಾನ, ರೆವಲ್ಯೂಷನರಿ ಸೋಷಿಯಲಿಸ್ಟ್ ಪಾರ್ಟಿ ಒಂದು ಸ್ಥಾನ ಮತ್ತು ಕೇರಳ ಕಾಂಗ್ರೆಸ್ (ಎಂ) ಒಂದು ಸ್ಥಾನ ಗೆದ್ದಿದೆ. ಅಲಪ್ಪುಳದಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಒಂದು ಸ್ಥಾನವನ್ನು ಗೆದ್ದಿದೆ.
ದೇಶಾದ್ಯಂತ ಏಪ್ರಿಲ್ 19ರಿಂದ ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ವಯನಾಡು ಕ್ಷೇತ್ರದಿಂದ ಹಾಲಿ ಸಂಸದರಾದ ರಾಹುಲ್ ಗಾಂಧಿ ಮತ್ತೊಮ್ಮೆ ಆಯ್ಕೆ ಬಯಸಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ ಅಮೇಠಿ ಮತ್ತು ವಯನಾಡು ಎರಡೂ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಅಮೇಠಿಯಲ್ಲಿ ಸೋಲು ಕಂಡಿದ್ದ ಅವರು, ವಯನಾಡಿನಲ್ಲಿ ಗೆಲುವು ಸಾಧಿಸಿದ್ದರು.
ಈ ಬಾರಿ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಪ್ರಮುಖ ಪ್ರತಿಪಕ್ಷಗಳು 'ಇಂಡಿಯಾ' ಮೈತ್ರಿಕೂಟ ರಚಿಸಿಕೊಂಡಿವೆ. ಇದರಲ್ಲಿ ಸಿಪಿಐಎಂ, ಸಿಪಿಐ-ಎಂ ಕೂಡ ಪಾಲದಾರ ಪಕ್ಷಗಳಾಗಿವೆ. ಆದರೆ, ಕೇರಳದಲ್ಲಿ ಮಾತ್ರ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷಗಳ ಬೇರೆ ಸ್ಪರ್ಧೆ ಮಾಡುತ್ತಿವೆ. ರಾಹುಲ್ ಗಾಂಧಿ ವಿರುದ್ಧ ಸಿಪಿಐ ರಾಷ್ಟ್ರೀಯ ನಾಯಕಿ ಮತ್ತು ಎಡ ಪ್ರಜಾಸತ್ತಾತ್ಮಕ ಫ್ರಂಟ್ (ಎಲ್‌ಡಿಎಫ್) ಅಭ್ಯರ್ಥಿ ಅನ್ನಿ ರಾಜ್ ಸ್ಪರ್ಧೆ ಮಾಡಿದ್ದಾರೆ. ಅವರು ಕೂಡ ಇಂದೇ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿಯಿಂದ ಪಕ್ಷದ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಕಣಕ್ಕಿಳಿದಿದ್ದಾರೆ. ಕೇರಳದಲ್ಲಿ ಎಲ್ಲ 20 ಕ್ಷೇತ್ರಗಳಲ್ಲಿ ಏಪ್ರಿಲ್ 26ರಂದು ಮತದಾನ ನಡೆಯಲಿದೆ. ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ.
ಇದನ್ನೂ ಓದಿ: ಚಾಮರಾಜನಗರದಲ್ಲಿ ಸಿಎಂ ಸಿದ್ದರಾಮಯ್ಯ ರೋಡ್ ಶೋ: ಮೋದಿ, ಅಮಿತ್ ಶಾ ವಿರುದ್ಧ ವಾಗ್ದಾಳಿ