2024ರ ಲೋಕಸಭಾ ಚುನಾವಣೆಯ ಮೂರು ಹಂತಗಳು ಪೂರ್ಣಗೊಂಡಿದ್ದು, ಇಂದು 4ನೇ ಹಂತದ ಮತದಾನ ನಡೆದಿದೆ. ಈ ಹಂತದಲ್ಲಿ 9 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶ ಒಳಗೊಂಡಂತೆ 96 ಸಂಸದೀಯ ಕ್ಷೇತ್ರಗಳಿಗೆ ಮತದಾನ ನಡೆದಿದೆ. ಮುಖ್ಯವಾಗಿ ಅವಳಿ ತೆಲುಗು ರಾಜ್ಯಗಳಾದ ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಎಲ್ಲ ಕ್ಷೇತ್ರಗಳಿಗೆ ಏಕಕಾಲದಲ್ಲಿ ಮತದಾನ ನಡೆದಿದ್ದು, ಉಳಿದಂತೆ ಉತ್ತರ ಪ್ರದೇಶದ 13, ಮಹಾರಾಷ್ಟ್ರದ 11, ಪಶ್ಚಿಮ ಬಂಗಾಳದ 8 ಮಧ್ಯಪ್ರದೇಶದ 8, ಬಿಹಾರದ 5, ಜಾರ್ಖಂಡ್ನ 4 ಒಡಿಶಾದ 4 ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ 1 ಸ್ಥಾನಕ್ಕೆ ಮತದಾನ ನಡೆದಿದೆ.
ಪ್ರಧಾನಿ ಮೋದಿ ಸರ್ಕಾರದ ಐವರು ಕೇಂದ್ರ ಸಚಿವರು, ಓರ್ವ ಮಾಜಿ ಸಿಎಂ, ಓರ್ವ ನಟ ಮತ್ತು ಇಬ್ಬರು ಕ್ರಿಕೆಟಿಗರು ಸೇರಿದಂತೆ ಒಟ್ಟು 1717 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇದಲ್ಲದೇ, ಆಂಧ್ರ ವಿಧಾನಸಭೆಯ 175 ಮತ್ತು ಒಡಿಶಾ ವಿಧಾನಸಭೆಯ 28 ಸ್ಥಾನಗಳಿಗೂ ಇಂದು ಮತದಾನ ನಡೆದಿದೆ. ರಾತ್ರಿ ವೇಳೆಗೆ ಯಾವ ಯಾವ ರಾಜ್ಯದಲ್ಲಿ ಎಷ್ಟು ಪ್ರಮಾಣದ ಮತದಾನವಾಗಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ.
ಒಟ್ಟಾರೆ 67.71% ಮತದಾನವಾಗಿದೆ. ಪಶ್ಚಿಮ ಬಂಗಾಳದಲ್ಲಿ ಅಧಿಕ (ಶೇ.78.44) ಮತದಾನವಾದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಕಡಿಮೆ (ಶೇ.37.98) ಮತದಾನ ನಡೆದಿದೆ.
ರಾಜ್ಯಗಳು | ಶೇಕಡಾವಾರು |
ಆಂಧ್ರ ಪ್ರದೇಶ | 78.25% |
ಬಿಹಾರ | 57.06% |
ಜಮ್ಮು ಮತ್ತು ಕಾಶ್ಮೀರ | 37.98% |
ಜಾರ್ಖಂಡ್ | 65.31% |
ಮಧ್ಯ ಪ್ರದೇಶ | 70.98% |
ಮಹಾರಾಷ್ಟ್ರ | 59.64% |
ಒಡಿಶಾ | 73.97% |
ತೆಲಂಗಾಣ | 64.93% |
ಉತ್ತರಪ್ರದೇಶ | 58.05% |
ಪಶ್ಚಿಮ ಬಂಗಾಳ | 78.44% |