ಹೈದರಾಬಾದ್: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಹೇಳಿದಂಗೆ 400ಕ್ಕೂ ಹೆಚ್ಚು ಸ್ಥಾನಗಳು ಬರುವುದು ಅನುಮಾನ ಎಂದು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಮತ್ತೆ ಮತ್ತೆ ಹೇಳಿದ್ದಾರೆ. ಆದರೆ, ಬಿಜೆಪಿ ಕಳೆದ ಬಾರಿಯ ಫಲಿತಾಂಶವನ್ನೇ ಪಡೆಯಲಿದೆ ಎಂದು ಅವರು ಸ್ಪಷ್ಟ ಭವಿಷ್ಯ ನುಡಿದಿದ್ದಾರೆ. ರಾಷ್ಟ್ರೀಯ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು, ಪ್ರಧಾನಿ ಮೋದಿಯವರ ಮೇಲೆ ಜನರಿಗೆ ನಿರಾಸೆ ಇದೆ. ಆದರೆ ಅಷ್ಟೊಂದು ಕೋಪವಿಲ್ಲ. ಬಿಜೆಪಿಗೆ ನಷ್ಟವಾದರೆ ಉತ್ತರ ಮತ್ತು ಪಶ್ಚಿಮ ಭಾರತದಲ್ಲಿ ಮಾತ್ರ ಆಗುತ್ತದೆಯೇ ಹೊರತು ದಕ್ಷಿಣದಲ್ಲಿ ಅಲ್ಲ ಎಂದು ವಿವರಣೆ ನೀಡಿದ್ದಾರೆ. ಚಾರ್ ಸೌ ಪಾರ್ ಎಂದು ಹೇಳುವ ಮೂಲಕ ಚುನಾವಣೆ ಮೂಡ್ ಹಾಗೂ ಪಕ್ಷದ ಕಾರ್ಯಕರ್ತರ ಹುಮ್ಮಸ್ಸನ್ನು ದ್ವಿಗುಣ ಗೊಳಿಸಿದ್ದಾರೆ. ಅಲ್ಲದೇ ಇದೇ ವಿಷಯವಾಗಿ ಚರ್ಚೆ ನಡೆಯುವಂತೆ ಮಾಡಿದ ಕೀರ್ತಿ ಮೋದಿ ಅವರಿಗೆ ಸಲ್ಲುತ್ತದೆ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ದೇಶದಲ್ಲಿ ಬಿಜೆಪಿಗೆ ಸವಾಲೆಸೆಯುವ ಕೋಪವಾಗಲೀ, ಆಕ್ರೋಶವಾಗಲಿ ಜನರಲ್ಲಿ ಇಲ್ಲ ಎಂದಿರುವ ರಣ ತಂತ್ರಗಾರ ಪಿಕೆ, ಮೋದಿ ಮತ್ತೊಮ್ಮೆ ಆ ಪಕ್ಷವನ್ನು ಗೆಲುವಿನ ದಡ ಸೇರಲಿದ್ದಾರೆ ಎಂದು ಭವಿಷ್ಯವನ್ನು ನುಡಿದಿದ್ದಾರೆ. 2019ರಲ್ಲಿ ಬಿಜೆಪಿಗೆ 303 ಸ್ಥಾನಗಳು ಬಂದಿದ್ದವು. ಈ ಬಾರಿಯೂ ಅಷ್ಟೇ ಅಥವಾ ಅದಕ್ಕಿಂತ ಹೆಚ್ಚು ಸ್ಥಾನ ಸಿಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ. ಭರವಸೆಗಳನ್ನು ಈಡೇರಿಸದ ಬಗ್ಗೆ ಜನರು ಮೋದಿಯವರ ಮೇಲೆ ನಿರಾಶೆಗೊಂಡಿರಬಹುದು, ಆದರೆ ಕೋಪಗೊಂಡಿಲ್ಲ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಬಂದರೆ ಪರಿಸ್ಥಿತಿ ಸುಧಾರಿಸುತ್ತದೆ ಎಂಬ ಭಾವನೆ ಕಾಂಗ್ರೆಸ್ ಬೆಂಬಲಿಗರನ್ನು ಹೊರತುಪಡಿಸಿದರೆ ಬೇರೆ ಯಾರಲ್ಲೂ ಅಷ್ಟೊಂದು ಕಂಡು ಬರುತ್ತಿಲ್ಲ ಎಂದು ಪ್ರಶಾಂತ್ ಕಿಶೋರ್ ಅಭಿಪ್ರಾಯಪಟ್ಟಿದ್ದಾರೆ. 325 ಲೋಕಸಭಾ ಸ್ಥಾನಗಳನ್ನು ಹೊಂದಿರುವ ಉತ್ತರ ಮತ್ತು ಪಶ್ಚಿಮ ಭಾರತವು 2014 ರಿಂದ ಬಿಜೆಪಿಯ ಭದ್ರಕೋಟೆಯಾಗಿ ಪರಿಣಮಿಸಿದೆ. 225 ಕ್ಷೇತ್ರಗಳಿರುವ ಪೂರ್ವ ಮತ್ತು ದಕ್ಷಿಣ ಭಾರತದಲ್ಲಿ ಸದ್ಯ ಬಿಜೆಪಿ 50 ಕ್ಕಿಂತ ಕಡಿಮೆ ಸ್ಥಾನಗಳನ್ನು ಹೊಂದಿದೆ ಎಂದು ವಿವರಿಸಲಾಗಿದೆ. ಆದರೆ ಈ ಬಾರಿ ದಕ್ಷಿಣದಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಬಿಜೆಪಿಗೆ ನಷ್ಟವಾದರೆ ಉತ್ತರ ಮತ್ತು ಪಶ್ಚಿಮ ಭಾರತದಲ್ಲಿ ಆಗುತ್ತದೆ ಎಂದು ಕಿಶೋರ್ ಅಂದಾಜಿಸಿದ್ದಾರೆ.
ಬಿಜೆಪಿ ಸೋಲುತ್ತದೆಯೋ, ಗೆಲ್ಲುತ್ತದೆಯೋ ಎಂಬ ಚರ್ಚೆ ಇಲ್ಲ ಎಂದು ಪ್ರಶಾಂತ್ ಕಿಶೋರ್ ವಿವರಿಸಿದರು. ಬಿಜೆಪಿಗೆ 370 ಸ್ಥಾನ ಸಿಗುತ್ತದೋ ಇಲ್ಲವೋ ಎಂಬುದು ಈಗ ಚರ್ಚೆಗೆ ಗ್ರಾಸವಾಗಿದೆ. ಚಾರ್ ಸೌ ಪಾರ್ ಎಂಬ ಘೋಷಣೆಯೊಂದಿಗೆ ಚರ್ಚೆಯ ತಿರುಳನ್ನು ಮೋದಿ ಬದಲಾಯಿಸಿದರು. ಈ ಹೇಳಿಕೆ ನೀಡುವ ಮೂಲಕ ಮೋದಿ ಪ್ರತಿಪಕ್ಷಗಳಿಗೆ ತಂತ್ರ ಹೆಣೆಯುವ ಅವಕಾಶವನ್ನೇ ನೀಡದೆ ತಮ್ಮ ಹೇಳಿಕೆಯ ಚರ್ಚೆಯಲ್ಲಿ ಜನ ತೊಡಗುವಂತೆ ಮಾಡಿದ್ದಾರೆ. ಇದರ ಶ್ರೇಯ ಮೋದಿಯವರಿಗೆ ಸಲ್ಲಬೇಕು ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ಪ್ರತಿಪಕ್ಷಗಳು ಎಡವಿದ್ದೆಲ್ಲಿ?: ಬಿಜೆಪಿಯನ್ನು ಎದುರಿಸುವ ಅವಕಾಶವನ್ನು ಪ್ರತಿಪಕ್ಷ ಭಾರತ ಮೈತ್ರಿಕೂಟವು ಹಲವು ಬಾರಿ ಕೈಚಲ್ಲಿದೆ. ಇದ್ದ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ. ಭಾರತ ಮೈತ್ರಿಕೂಟ ತಡವಾಗಿ ರಚನೆಯಾಗಿದ್ದು, ಹಾಗೂ ಅಷ್ಟೇ ವೇಗದಲ್ಲಿ ಒಡಕುಂಟಾಗಿದ್ದು ಅದರ ವೈಫಲ್ಯ ಎಂದ ಅವರು, ಬಿಜೆಪಿ ಈಗಾಗಲೇ ಕಳೆದುಕೊಂಡಿದ್ದ ಸ್ಥಾನವನ್ನು ಮರಳಿ ಪಡೆದಿದೆ. ಭಾರತ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯನ್ನು ಘೋಷಣೆ ಮಾಡದಿರುವುದು ಮತ್ತಷ್ಟು ಹಿನ್ನಡೆಗೆ ಕಾರಣ ಎಂದು ಅವರು ವಿಶ್ಲೇಷಣೆ ಮಾಡಿದ್ದಾರೆ.
ಕ್ಯಾಚ್‌ಗಳನ್ನು ಮಿಸ್ ಮಾಡಿಕೊಂಡರೆ?: ಇಂಡಿಯಾ ಮೈತ್ರಿಕೂಟದಲ್ಲಿನ ಆಂತರಿಕ ಕಲಹವನ್ನು ಉಲ್ಲೇಖಿಸಿದ ಪಿಕೆ, ಮಿತ್ರಪಕ್ಷಗಳಲ್ಲಿ ಸ್ಥಾನಗಳ ಹೊಂದಾಣಿಕೆಗೆ ಸಂಬಂಧಿಸಿದಂತೆ ಎಸ್‌ಪಿ ಮತ್ತು ಟಿಎಂಸಿ ಜತೆಗಿನ ಭಿನ್ನಾಭಿಪ್ರಾಯಗಳನ್ನು ಅವರು ಇದೇ ವೇಳೆ ಉದಾಹರಣೆಯಾಗಿ ನೀಡಿದರು. ನೋಟು ಅಮಾನ್ಯೀಕರಣದ ನಂತರ ಗುಜರಾತ್‌ನಲ್ಲಿ ಬಿಜೆಪಿ ತನ್ನ ಪ್ರಭಾವವನ್ನು ಕಳೆದುಕೊಂಡಿದ್ದರೂ, ಕೋವಿಡ್ ನಂತರ ಬಂಗಾಳದಲ್ಲಿ ಬಿಜೆಪಿ ಭಾರಿ ನಷ್ಟವನ್ನು ಅನುಭವಿಸಿದ್ದರೂ, ಕಾಂಗ್ರೆಸ್ ಆ ಎರಡು ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲವಾಯ್ತು ಎಂಬ ಅಂಶವನ್ನು ಪ್ರಶಾಂತ್ ಕಿಶೋರ್ ಹೇಳಿದ್ದಾರೆ. ಬ್ಯಾಟ್ಸ್‌ಮನ್‌ಗಳು ಕ್ಯಾಚ್‌ಗಳನ್ನು ತಪ್ಪಿಸಿಕೊಂಡರೆ ಶತಕಗಳನ್ನು ಮಾಡುತ್ತಲೇ ಇರುತ್ತಾರೆ ಎಂದು ಅವರು ಉದಾಹರಣೆ ಸಹಿತ ವಿವರಣೆ ನೀಡಿದ್ದಾರೆ.