ಲಕ್ನೋ(ಉತ್ತರ ಪ್ರದೇಶ): 2024ರ ಲೋಕಸಭಾ ಚುನಾವಣೆಯಲ್ಲಿ ಹಲವೆಡೆ ಅಚ್ಚರಿಯ ಫಲಿತಾಂಶಗಳು ಬಂದಿವೆ. ಈ ಪೈಕಿ ಉತ್ತರ ಪ್ರದೇಶದ ಫೈಜಾಬಾದ್ ಲೋಕಸಭಾ ಕ್ಷೇತ್ರವೂ ಒಂದು. ಬಿಜೆಪಿ ಗೆಲ್ಲಲೇಬೇಕಿದ್ದ ಈ ಕ್ಷೇತ್ರದಲ್ಲಿ ಅಚ್ಚರಿಯ ಫಲಿತಾಂಶ ಹೊರಬಂದಿದೆ. ಈ ಮೂಲಕ ಬಿಜೆಪಿಗೆ ಹಿನ್ನಡೆಯಾಗಿದೆ.
ರಾಮನಗರಿ ಅಯೋಧ್ಯೆಯಿಂದ ಬಿಜೆಪಿ ಸೋಲು ಕಂಡಿದ್ದೇಕೆ ಎಂಬುದು ಈಗ ಎಲ್ಲೆಡೆ ಚರ್ಚೆಯ ವಿಷಯ. ಬಿಜೆಪಿಯ ಈ ಸೋಲಿಗೆ ಹಲವು ವಿಚಾರಗಳನ್ನು ಪಟ್ಟಿ ಮಾಡಲಾಗುತ್ತಿದೆ. ಈ ಪೈಕಿ ಒಬಿಸಿ, ದಲಿತರು, ಮುಸ್ಲಿಮರ ಒಳಏಟು ಪ್ರಮುಖವು.
ಲೋಕಸಭೆಯ ಒಟ್ಟು 543 ಕ್ಷೇತ್ರಗಳಲ್ಲಿ ಉತ್ತರ ಪ್ರದೇಶ ಅತೀ ಹೆಚ್ಚು ಅಂದರೆ 80 ಕ್ಷೇತ್ರಗಳನ್ನು ಹೊಂದಿರುವ ರಾಜ್ಯ. ಈ ರಾಜ್ಯದಿಂದ ಹೆಚ್ಚು ಕ್ಷೇತ್ರಗಳನ್ನು ಗೆದ್ದರೆ ಕೇಂದ್ರದಲ್ಲಿ ಸರ್ಕಾರ ರಚನೆಯ ಕಸರತ್ತು ಸುಲಭ. ಹಾಗಾಗಿ ರಾಜಕೀಯ ಪಕ್ಷಗಳು ಉತ್ತರ ಪ್ರದೇಶದಿಂದ ಹೆಚ್ಚು ಸ್ಥಾನಗಳನ್ನು ಪಡೆಯುವಲ್ಲಿ ಪ್ರಯತ್ನ ನಡೆಸುತ್ತಿರುತ್ತವೆ. ಅದರ ಭಾಗವಾಗಿ 2014 ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 80 ಕ್ಷೇತ್ರಗಳ ಪೈಕಿ ಕ್ರಮವಾಗಿ 71 ಮತ್ತು 62 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಇದರ ಪರಿಣಾಮ, ಅಂದುಕೊಂಡಂತೆ ಕೇಂದ್ರದಲ್ಲಿ ಅಧಿಕಾರದ ಗದ್ದುಗೆಗೇರಿತ್ತು.
ಆದರೆ, ಪ್ರಸ್ತುತ ಚುನಾವಣೆಯಲ್ಲಿ ಶ್ರೀರಾಮನ ನೆಲೆವೀಡು ಅಯೋಧ್ಯೆ ಇರುವ ಫೈಜಾಬಾದ್ ಲೋಕಸಭಾ ಕ್ಷೇತ್ರವೂ ಸೇರಿದಂತೆ ರಾಜ್ಯದ ಹಲವು ಕ್ಷೇತ್ರಗಳಲ್ಲಿ ಬಿಜೆಪಿಗೆ ಆಘಾತಕಾರಿ ಸೋಲಾಗಿದೆ. ರಾಮ ಮಂದಿರ ನಿರ್ಮಾಣವಾದ ಕೇವಲ ನಾಲ್ಕು ತಿಂಗಳಲ್ಲೇ ಈ ಕ್ಷೇತ್ರದಲ್ಲಿ ಬಿಜೆಪಿ ಸೋತಿದೆ. ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಲಲ್ಲು ಸಿಂಗ್ ಅವರನ್ನು ಸಮಾಜವಾದಿ ಪಕ್ಷದ ಅವಧೇಶ್ ಪ್ರಸಾದ್ 54,567 ಮತಗಳಿಂದ ಸೋಲಿಸಿದ್ದಾರೆ. ಅವಧೇಶ್ 554,289 ಮತಗಳನ್ನು ಪಡೆದರೆ ಲಲ್ಲು 4,99,722 ಮತಗಳನ್ನು ಪಡೆದರು. ಲಲ್ಲು ಸಿಂಗ್ 2014 ಮತ್ತು 2019ರಲ್ಲಿ ಸತತ ಎರಡು ಬಾರಿ ಈ ಕ್ಷೇತ್ರ ಗೆದ್ದಿದ್ದರು.
ಆದರೆ, ಈ ಬಾರಿ ಬಿಜೆಪಿ ಅತಿಯಾದ ಆತ್ಮವಿಶ್ವಾಸ, ಬೇಡದ ಹೇಳಿಕೆಗಳು ಹಾಗು ಅಭಿವೃದ್ಧಿ ಹೆಸರಲ್ಲಿ ಮಾಡಿದ ಯಡವಟ್ಟುಗಳು ಸೋಲಿಗೆ ಕಾರಣವಾಗಿವೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇದಷ್ಟೇ ಅಲ್ಲದೇ, ಫೈಜಾಬಾದ್‌ನಲ್ಲಿನ ಜಾತಿ ಸಮೀಕರಣ ಬಿಜೆಪಿ ಸೋಲಿಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಅಯೋಧ್ಯೆ ಅತೀ ಹೆಚ್ಚು ಒಬಿಸಿ ಮತದಾರರನ್ನು ಹೊಂದಿದೆ. ಯಾದವರು, ದಲಿತ ಮತ್ತು ಮುಸ್ಲಿಂ ಸಮುದಾಯ ಇಲ್ಲಿ ನಿರ್ಣಾಯಕ. ದಲಿತರ ಪೈಕಿ ಪಾಸಿ ಸಮುದಾಯ ಗರಿಷ್ಠ ಮತದಾರರನ್ನು ಹೊಂದಿದೆ. ಗೆದ್ದ ಅಭ್ಯರ್ಥಿ ಅವಧೇಶ್ ಪ್ರಸಾದ್ ಪಾಸಿ ಸಮುದಾಯದಿಂದ ಬಂದವರು. ಈ ಸಮುದಾಯಗಳು ತಮ್ಮನ್ನು ಕೈ ಹಿಡಿಯುತ್ತವೆ ಎಂಬ ಲೆಕ್ಕಾಚಾರದಿಂದ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ತಮ್ಮ ಆಪ್ತ ಅವಧೇಶ್ ಪ್ರಸಾದ್ ಅವರನ್ನೇ ಈ ಕ್ಷೇತ್ರದಿಂದ ಕಣಕ್ಕಿಳಿಸಿದ್ದರು. ಫೈಜಾಬಾದ್ ಅಷ್ಟೇ ಅಲ್ಲದೇ, ಸುತ್ತಮುತ್ತಲಿನ ಒಂಭತ್ತು ಕ್ಷೇತ್ರಗಳಲ್ಲೂ ಅಖಿಲೇಶ್ ಯಾದವ್ ಆಪ್ತರೇ ಸ್ಪರ್ಧಿಸಿದ್ದು ಅವರಿಗೆ ಇನ್ನೂ ವರದಾನವಾಗಿದೆ. ಈ ಪೈಕಿ ನಾಲ್ವರು ಮುಸ್ಲಿಮ್ ಮತ್ತು ಐದು ಯಾದವ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಆದರೆ, ಯಾದವೇತರ ಮತದಾರರನ್ನು ಗೆಲ್ಲಲು ಅಮಿತ್ ಶಾ ಹಾಕಿಕೊಂಡ ಯೋಜನೆ ಕೈ ಹಿಡಿಯದೇ ಇರುವುದು ಮತ್ತು ಅತಿಯಾದ ಆತ್ಮವಿಶ್ವಾಸ ಬಿಜೆಪಿಯ ಸೋಲಿಗೆ ಪ್ರಮುಖ ಕಾರಣ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.
ಮೀಸಲಾತಿರಹಿತ ಸ್ಥಾನದಲ್ಲಿ ದಲಿತ ಅಭ್ಯರ್ಥಿಯನ್ನು ಕಣಕ್ಕಿಳಿಸಿದ ಸಮಾಜವಾದಿ ಪಕ್ಷದ ನಿರ್ಧಾರ ಕೆಲಸ ಮಾಡಿದೆ ಎನ್ನುತ್ತಾರೆ ಗಿರಿ ಇನ್‌ಸ್ಟಿಟ್ಯೂಟ್ ಆಫ್ ಡೆವಲಪ್‌ಮೆಂಟ್ ಸ್ಟಡೀಸ್‌ನ ಅಸೋಸಿಯೇಟ್ ಪ್ರೊಫೆಸರ್ ಪ್ರಶಾಂತ್ ತ್ರಿವೇದಿ.
ಬಿಜೆಪಿಗೆ 400ಕ್ಕೂ ಹೆಚ್ಚು ಸ್ಥಾನಗಳು ಬಂದರೆ ಸಂವಿಧಾನ ಬದಲಿಸುತ್ತೇವೆ ಎಂದು ಬಿಜೆಪಿ ಅಭ್ಯರ್ಥಿ ಲಲ್ಲು ಸಿಂಗ್ ಹೇಳಿದ್ದರು. ಈ ವಿಚಾರವನ್ನು ಅವಧೇಶ್ ಪ್ರಸಾದ್ ತಮ್ಮ ಚುನಾವಣಾ ಪ್ರಚಾರದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡರು.
ಇದಲ್ಲದೇ, ಅಯೋಧ್ಯೆಯ ಅಭಿವೃದ್ಧಿಗಾಗಿ ಜಮೀನು ಒತ್ತುವರಿ, ಮನೆಗಳನ್ನು ಕೆಡವಿದ್ದು, ನಾಗರಿಕರು ಮತ್ತು ವ್ಯಾಪಾರಿಗಳ ಸ್ಥಳಾಂತರ, ಪ್ರಶ್ನೆ ಪತ್ರಿಕೆಗಳ ಸೋರಿಕೆ, ನಿರುದ್ಯೋಗ, ಅಯೋಧ್ಯೆಗೆ ಭೇಟಿ ನೀಡಿದವರಿಗೆ ವಿಶೇಷ ಸವಲತ್ತುಗಳನ್ನು ನೀಡದಿರುವುದು, ಹೊರಗಿನಿಂದ ಬರುವ ಉದ್ಯಮಿಗಳು ಲಾಭ ಪಡೆಯುತ್ತಿದ್ದಾರೆಂಬ ಚರ್ಚೆಗಳು ಸ್ಥಳೀಯರನ್ನು ಚಿಂತೆಗೀಡು ಮಾಡಿದ್ದವು. ಬಹುಪಾಲು ಯುವ ಮತದಾರರು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸೋರಿಕೆಯಾದ ಪ್ರಶ್ನೆಪತ್ರಿಕೆಯಿಂದ ಬೇಸತ್ತು ಹೋಗಿದ್ದರು. ದೇವಸ್ಥಾನ ಮತ್ತು ವಿಮಾನ ನಿಲ್ದಾಣದ ಸುತ್ತಮುತ್ತ ನಡೆಯುತ್ತಿರುವ ಭೂಸ್ವಾಧೀನದ ವಿರುದ್ಧ ಅಯೋಧ್ಯೆಯ ಸುತ್ತಮುತ್ತಲಿನ ಹಲವು ಗ್ರಾಮಗಳಿಂದ ಆಕ್ರೋಶ ವ್ಯಕ್ತವಾಗಿತ್ತು. ಇವೆಲ್ಲವೂ ಬಿಜೆಪಿ ಸೋಲಿಗೆ ಕಾರಣಗಳೆಂದು ವಿಶ್ಲೇಷಿಸಲಾಗುತ್ತಿದೆ.