ನವದೆಹಲಿ: ಲೋಕಸಭೆ ಮತ್ತು ರಾಜ್ಯ ವಿಧಾನಸಭೆ ಚುನಾವಣೆ ವೇಳಾಪಟ್ಟಿ ಶನಿವಾರ ಪ್ರಕಟಿಸಲಾಗುವುದು ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ. ನಾಳೆ ಮಧ್ಯಾಹ್ನ ಚುನಾವಣಾ ಆಯೋಗವು ಸುದ್ದಿಗೋಷ್ಟಿ ನಡೆಸಿ, ಮತದಾನ ಮತ್ತು ಮತ ಎಣಿಕೆ ದಿನಾಂಕ ಜೊತೆ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಲಿದೆ.
ಚುನಾವಣಾ ಆಯೋಗವು ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದೆ. ಲೋಕಸಭೆ ಚುನಾವಣೆ ಮತ್ತು ಕೆಲವು ರಾಜ್ಯ ವಿಧಾನಸಭೆಗಳ ವೇಳಾಪಟ್ಟಿಯನ್ನು ಪ್ರಕಟಿಸಲು ಶನಿವಾರ ಮಧ್ಯಾಹ್ನ 3 ಗಂಟೆಗೆ ಪತ್ರಿಕಾಗೋಷ್ಟಿ ನಡೆಯಲಿದೆ.
4 ವಿಧಾನಸಭೆ ಚುನಾವಣೆಗಳ ದಿನಾಂಕ: ಲೋಕಸಭೆ ಚುನಾವಣೆ ಜೊತೆ ನಾಲ್ಕು ವಿಧಾನಸಭೆ ಚುನಾವಣೆಗಳ ದಿನಾಂಕಗಳನ್ನು ಸಹ ಘೋಷಿಸಲಾಗುವುದು. ಅರುಣಾಚಲ ಪ್ರದೇಶ, ಆಂಧ್ರಪ್ರದೇಶ, ಒಡಿಶಾ ಮತ್ತು ಸಿಕ್ಕಿಂ ಸೇರಿ ನಾಲ್ಕು ರಾಜ್ಯಗಳಲ್ಲಿ ಏಪ್ರಿಲ್/ ಮೇ ತಿಂಗಳಲ್ಲಿ ಮತದಾನ ನಡೆಯಲಿದೆ. ಅಲ್ಲದೆ, ಮಹಾರಾಷ್ಟ್ರ, ಹರಿಯಾಣ ಮತ್ತು ಜಾರ್ಖಂಡ್ ಕೂಡ ಈ ವರ್ಷದ ಕೊನೆಯಲ್ಲಿ ಚುನಾವಣಾ ಪೂರ್ವ ಪ್ರಕ್ರಿಯೆಗಳು ಆರಂಭವಾಗಲಿವೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಪ್ರಸ್ತುತ ಲೋಕಸಭೆಯ ಅವಧಿ ಜೂನ್ 16ಕ್ಕೆ ಕೊನೆಗೊಳ್ಳಲಿದ್ದು, ಅದಕ್ಕೂ ಮುನ್ನ ಹೊಸ ಸರ್ಕಾರ ರಚನೆಯಾಗಬೇಕಿದೆ. ಕಳೆದ ಬಾರಿ ಲೋಕಸಭೆ ಚುನಾವಣೆಯನ್ನು ಮಾರ್ಚ್ 10 ರಂದು ಘೋಷಿಸಲಾಗಿತ್ತು. ಮತ್ತು ಏಪ್ರಿಲ್ 11ರಿಂದ ಏಳು ಹಂತಗಳಲ್ಲಿ ನಡೆಸಲಾಗಿತ್ತು. ಮೇ 23 ರಂದು ಮತ ಎಣಿಕೆ ಮಾಡಲಾಗಿತ್ತು.
ಇಬ್ಬರು ಚುನಾವಣಾ ಆಯುಕ್ತರಾಗಿ ಅಧಿಕಾರ ಸ್ವೀಕಾರ: ಕೇಂದ್ರ ನೂತನ ಚುನಾವಣಾ ಆಯುಕ್ತರಾಗಿ ನೇಮಕವಾದ ಜ್ಞಾನೇಶ್ ಕುಮಾರ್ ಮತ್ತು ಸುಖ್‌ಬೀರ್ ಸಿಂಗ್ ಸಂಧು ಶುಕ್ರವಾರ ಅಧಿಕಾರ ಸ್ವೀಕರಿಸಿದರು. ಸಿಇಸಿ ರಾಜೀವ್ ಕುಮಾರ್ ಅವರು, ನೂತನ ಚುನಾವಣಾ ಆಯುಕ್ತರನ್ನು ಸ್ವಾಗತಿಸಿದರು.
ಫೆಬ್ರವರಿ 14 ರಂದು ಅನುಪ್ ಚಂದ್ರ ಪಾಂಡೆ ನಿವೃತ್ತಿ ಮತ್ತು ಮಾರ್ಚ್ 8 ರಂದು ಅರುಣ್ ಗೋಯೆಲ್ ಅವರು ಹಠಾತ್ ರಾಜೀನಾಮೆ ನೀಡಿದ ನಂತರ ಚುನಾವಣಾ ಆಯೋಗದಲ್ಲಿ ಹುದ್ದೆಗಳು ಖಾಲಿಯಾಗಿದ್ದವು.
1988ರ ಬ್ಯಾಚ್‌ನ ಭಾರತೀಯ ಆಡಳಿತ ಸೇವೆ (IAS) ಅಧಿಕಾರಿಗಳಾದ ಜ್ಞಾನೇಶ್ ಕುಮಾರ್ ಮತ್ತು ಸಂಧು ಕ್ರಮವಾಗಿ ಕೇರಳ ಮತ್ತು ಉತ್ತರಾಖಂಡ್ ಕೇಡರ್‌ಗೆ ಸೇರಿದವರು.
ಇದನ್ನೂ ಓದಿ: ಚುನಾವಣಾ ಬಾಂಡ್‌ಗಳ ಮಾಹಿತಿ ಬಹಿರಂಗ ಪಡಿಸಿದ ಎಲೆಕ್ಷನ್ ಕಮಿಷನ್