ಹೈದರಾಬಾದ್: ಧಾರ್ಮಿಕ ಕ್ಷೇತ್ರಗಳಾದ ಅಯೋಧ್ಯೆ, ಕಾಶಿ, ಮಥುರಾ, ವಾರಾಣಸಿಗಳಲ್ಲಿ ಹೆಚ್ಚಿನ ಸಸ್ಯಾಹಾರಿಗಳು ಇದ್ದಾರೆ ಎಂಬುದು ನಮ್ಮ ಭಾವನೆ. ಆದರೆ, ದೇಶದಲ್ಲಿಯೇ ಅತಿ ಹೆಚ್ಚು ಸಸ್ಯಾಹಾರವನ್ನು ಬಳಸುತ್ತಿರುವುದು ಕರ್ನಾಟಕದ ಬೆಂಗಳೂರು ನಗರ. ಅಚ್ಚರಿಯೆಂದರೆ, ಟಾಪ್ ಮೂರು ಸಸ್ಯಾಹಾರ ನಗರಗಳ ಪಟ್ಟಿಯಲ್ಲಿ ಹೈದಾರಾಬಾದ್ ಮೂರನೇ ಸ್ಥಾನದಲ್ಲಿದೆ.
ಇಂಥದ್ದೊಂದು ವರದಿಯನ್ನು ಆನ್ಲೈನ್ ಮೂಲಕ ಆಹಾರ ವಿತರಣೆ ಮಾಡುವ ಸ್ವಿಗ್ಗಿ (SWIGGY) ಕಂಪನಿ ಬಿಡುಗಡೆ ಮಾಡಿದೆ. ತಾನು ಯಾವ ನಗರಗಳಿಂದ ಅತಿಹೆಚ್ಚು ವೆಜ್ ಆರ್ಡರ್ಗಳನ್ನು ಪಡೆದಿದೆ ಎಂಬ ಮಾಹಿತಿಯನ್ನು ಜುಲೈ 31ರಂದು ಬಿಡುಗಡೆ ಮಾಡಿದೆ.
ಬೆಂಗಳೂರಿಗರು ಹೆಚ್ಚು ಬಳಸುವ ಭಕ್ಷ್ಯಗಳಿವು: ವರದಿಯ ಪ್ರಕಾರ, ಭಾರತದಲ್ಲಿ ಪ್ರತಿ ಮೂರು ಸಸ್ಯಾಹಾರಿ ಆರ್ಡರ್‌ಗಳಲ್ಲಿ ಒಂದನ್ನು ಮಸಾಲಾ ದೋಸೆ, ಪನ್ನೀರ್ ಬಿರಿಯಾನಿ ಮತ್ತು ಪನ್ನೀರ್ ಬಟರ್ ಮಸಾಲಾ ಇರುತ್ತದೆ. ಈ ಜನಪ್ರಿಯ ಭಕ್ಷ್ಯವನ್ನು ಬೆಂಗಳೂರಿನ ಜನರು ಅತಿಯಾಗಿ ಬಳಸುತ್ತಾರೆ. ಈ ನಗರ ದೇಶದಲ್ಲಿಯೇ ಅತಿಹೆಚ್ಚು ಆರ್ಡರ್ಗಳನ್ನು ನೀಡುತ್ತದೆ ಎಂದು ತಿಳಿಸಿದೆ.
ಮುಂಬೈ ಮಂದಿಯ ಫೇವರಿಟ್ ಇವು: ಎರಡನೇ ಸಸ್ಯಾಹಾರ ಆರ್ಡರ್ ಮಾಡುವ ನಗರವಾಗಿ ಮಹಾರಾಷ್ಟ್ರದ ಮುಂಬೈ ಸ್ಥಾನ ಪಡೆದಿದೆ. ಇಲ್ಲಿ ದಾಲ್ ಖಿಚಡಿ, ಮಾರ್ಗರಿಟಾ ಪಿಜ್ಜಾ ಮತ್ತು ಪಾವ್ ಭಾಜಿಯನ್ನು ಜನರು ಯಥೇಚ್ಚವಾಗಿ ಬಳಸುತ್ತಾರೆ.
ಮೂರನೇ ಸ್ಥಾನದಲ್ಲಿರುವ ಹೈದರಾಬಾದ್ ಮಸಾಲಾ ದೋಸೆ ಮತ್ತು ಇಡ್ಲಿಗೆ ಹೆಚ್ಚಿನ ಬೇಡಿಕೆಯನ್ನು ಹೊಂದಿದೆ ಎಂದು ಸ್ವಿಗ್ಗಿ ಅಂಕಿಅಂಶ ಹಂಚಿಕೊಂಡಿದೆ.
ಮಾಂಸಹಾರಿ ನಗರದಲ್ಲಿ ಸಸ್ಯಾಹಾರಕ್ಕೂ ಬೇಡಿಕೆ: ಹೈದರಾಬಾದ್ನಲ್ಲಿ ಬಿರಿಯಾನಿ (ಮಾಂಸ) ಫೇಮಸ್. ಈ ರುಚಿಕರ ಆಹಾರ ಖಾದ್ಯ ದೇಶ-ವಿದೇಶದಲ್ಲಿ ಹೆಸರುವಾಸಿ. ಇದರ ನಡುವೆ ಹೈದರಾಬಾದ್ ನಗರದಲ್ಲಿ ಸಸ್ಯಾಹಾರಕ್ಕೂ ಬೇಡಿಕೆ ಇದೆ ಎಂಬುದು ವಿಶೇಷ. ತೆಲಂಗಾಣದ ರಾಜಧಾನಿಯ ಗಲ್ಲಿ ಗಲ್ಲಿಗಳಲ್ಲಿ ಮಾಂಸಾಹಾರದ ಅಂಗಡಿಗಳೇ ಅಧಿಕ. ಇದರ ನಡುವೆ ಜನರೂ ಸಸ್ಯಾಹಾರಿ ಖಾದ್ಯಗಳನ್ನು ಆರ್ಡರ್ ನೀಡುತ್ತಿದ್ದಾರೆ.
ದೇಶದಲ್ಲಿ ಸಸ್ಯಾಹಾರಿ ಆಹಾರವನ್ನು ಗೌರವಿಸುವ ಮತ್ತು ಉತ್ತೇಜಿಸುವ ಸಲುವಾಗಿ ಸ್ವಿಗ್ಗಿ ಕಂಪನಿಯು 'ಗ್ರೀನ್ ಡಾಟ್ ಅವಾರ್ಡ್' ಘೋಷಿಸಿತ್ತು. ಇದರ ಅಡಿಯಲ್ಲಿಯೇ ಈ ವರದಿಯನ್ನು ತಯಾರಿಸಿದೆ. Swiggy ತಾನು ಪಡೆಯುವ ಆರ್ಡರ್‌ಗಳಲ್ಲಿ ಶೇಕಡಾ 90 ರಷ್ಟು ಉಪಾಹಾರ ಆರ್ಡರ್‌ಗಳು ಸಸ್ಯ ಆಧರಿತವಾಗಿವೆ. ಉಪಾಹಾರವು ಸಸ್ಯಾಹಾರಿಗಳಿಗೆ ಉತ್ತಮ ಆಯ್ಕೆಯಾಗಿದೆ. ರಾಷ್ಟ್ರದಾದ್ಯಂತ, ಬೆಳಗಿನ ತಿಂಡಿಯಲ್ಲಿ ಇಡ್ಲಿ, ಪೊಂಗಲ್, ವಡಾ ಮತ್ತು ಮಸಾಲೆ ದೋಸೆ ಮೊದಲಿವೆ. ಬಳಿಕ ಮಾರ್ಗರಿಟಾ ಪಿಜ್ಜಾ, ಸಮೋಸಾ ಮತ್ತು ಪಾವ್ ಭಾಜಿಯನ್ನು ಜನರು ಇಷ್ಟಪಡುತ್ತಾರೆ ಎಂದಿದೆ.
ದೇಶದಲ್ಲಿ 60 ಸಾವಿರಕ್ಕೂ ಅಧಿಕ ಸಸ್ಯಾಹಾರಿ ಸಲಾಡ್ಗಳ ಆರ್ಡರ್‌ಗಳು ಬರುತ್ತಿವೆ. ಇದು ಆರೋಗ್ಯಕರ ಆಹಾರ ಪದ್ಧತಿಯನ್ನು ಜನರು ಅನುಸರಿಸುತ್ತಿದ್ದಾರೆ ಎಂಬುದು ತೋರಿಸುತ್ತದೆ. ದೇಶದ ಟಾಪ್ 10 ಹೆಚ್ಚು ಆರ್ಡರ್ ಮಾಡಿದ ಆಹಾರಗಳ ಪೈಕಿ ಆರು ಭಕ್ಷ್ಯಗಳು ಸಸ್ಯಾಹಾರವಾಗಿರುತ್ತದೆ ಎಂದು ವರದಿ ಹೇಳಿದೆ.