ಹೈದರಾಬಾದ್ (ತೆಲಂಗಾಣ): ಹೈದರಾಬಾದ್‌ನ ಹಲವೆಡೆ ಭಾನುವಾರ ಮಧ್ಯಾಹ್ನ ಗುಡುಗು, ಸಿಡಿಲು ಮತ್ತು ಭಾರೀ ಗಾಳಿ ಸಹಿತ ಮಳೆ ಅಬ್ಬರಿಸಿದೆ. ಅಂಬರಪೇಟ್, ಕಾಚಿಗುಡ, ನಲ್ಲಕುಂಟಾ, ಉಪ್ಪಲ್, ನಾಗೋಲ್, ಮನ್ಸೂರಾಬಾದ್, ಮಲ್ಕಾಜಿಗಿರಿ, ತುರ್ಕಯಾಂಜಲ್ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದೆ.
ಎಲ್‌ಬಿನಗರ, ವನಸ್ಥಲಿಪುರಂ, ಹಯತ್‌ನಗರ, ಪೆದ್ದ ಅಂಬರ್‌ಪೇಟ್ ಮತ್ತು ಅಬ್ದುಲ್ಲಾಪುರ್‌ಮೆಟ್‌ನಲ್ಲಿ ಭಾರಿ ಗಾಳಿಯಿಂದಾಗಿ ಮರಗಳು ಮತ್ತು ವಿದ್ಯುತ್ ಕಂಬಗಳು ನೆಲ್ಲಕ್ಕೆ ಅಪ್ಪಳಿಸಿವೆ. ಹೀಗಾಗಿ ನಗರದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಹಯತ್‌ನಗರ ಪ್ರದೇಶದಲ್ಲಿ ಗಾಳಿಯ ರಭಸಕ್ಕೆ ಶೀಟ್ಗಳು, ಗುಡಿಸಲುಗಳು ಹಾರಿಹೋಗಿವೆ.
ವನಸ್ಥಲಿಪುರಂನ ಗಣೇಶ ದೇವಸ್ಥಾನ ಆವರಣ, ಎನ್‌ಜಿಒ ಕಾಲೋನಿ ಮುಖ್ಯರಸ್ತೆ ಮತ್ತು ವನಸ್ಥಲಿಪುರಂನ ರೈತು ಬಜಾರ್ ಬಳಿಯ ಉದ್ಯಾನವನದಲ್ಲಿ ಬೃಹತ್ ಮರಗಳು ಧರೆಗುರುಳಿವೆ. ಜಿಹೆಚ್‌ಎಂಸಿ ಸಿಬ್ಬಂದಿ ಸ್ಥಳಕ್ಕಾಗಮಿಸಿ ರಸ್ತೆಗೆ ಬಿದ್ದಿರುವ ಮರಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದಾರೆ.
ಮರ ಬಿದ್ದು ಇಬ್ಬರು ಸಾವು: ಮೆಡ್ಚಲ್ ಜಿಲ್ಲೆಯ ಕೀಸರ ತಾಲೂಕಿನಲ್ಲೂ ಸಹ ಭಾರೀ ಗಾಳಿ ಮತ್ತು ಮಳೆಗೆ ತಿಮ್ಮಾಯಿಪಲ್ಲಿ-ಸಮೀರ್‌ಪೇಟ್ ರಸ್ತೆಯಲ್ಲಿ ಮರ ಬಿದ್ದು ಇಬ್ಬರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ದ್ವಿಚಕ್ರ ವಾಹನದ ಮೇಲೆ ಮರ ಬಿದ್ದ ಪರಿಣಾಮ ಸವಾರ ನಾಗಿರೆಡ್ಡಿ ರಾಮ್ ರೆಡ್ಡಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಧನಂಜಯ ಗಂಭೀರವಾಗಿ ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ಇಸಿಐಎಲ್‌ನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರನ್ನು ಯಾದಾದ್ರಿ ಜಿಲ್ಲೆಯ ಧರ್ಮರೆಡ್ಡಿಗುಡೆಂ ಗ್ರಾಮದವರು ಎಂದು ಗುರುತಿಸಲಾಗಿದೆ.
ಶೆಡ್ ಬಿದ್ದು ನಾಲ್ವರು ಸಾವು: ನಾಗರಕರ್ನೂಲ್ ಜಿಲ್ಲೆಯ ಇಂದ್ರಕಲ್ನಲ್ಲಿ ನಿರ್ಮಾಣ ಹಂತದಲ್ಲಿದ್ದ ಶೀಟ್ ಶೆಡ್ ಕುಸಿದು ನಾಲ್ವರು ಸಾವನ್ನಪ್ಪಿದ್ದಾರೆ. ಮೃತರಲ್ಲಿ 10 ವರ್ಷದ ಮಗು, ಇಬ್ಬರು ಕಾರ್ಮಿಕರು, ಶೆಡ್ ಮಾಲೀಕ ಮಲ್ಲೇಶ್ ಸಾವನ್ನಪ್ಪಿದ್ದಾರೆ.
ಮುಂದಿನ ಮೂರು ದಿನಗಳ ಕಾಲ ರಾಜ್ಯದಲ್ಲಿ ಒಣಹವೆ ಕಂಡುಬರುವ ಸಾಧ್ಯತೆ ಇದೆ. ಬೆಳಗಿನ ಸಂದರ್ಭದಲ್ಲಿ ತಾಪಮಾನವು ಎರಡರಿಂದ ಮೂರು ಡಿಗ್ರಿಗಳಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಓದಿ: ಪಪುವಾ ನ್ಯೂ ಗಿನಿಯಾ ಭೂಕುಸಿತದಲ್ಲಿ ಮೃತರ ಸಂಖ್ಯೆ 670ಕ್ಕೆ ಏರಿಕೆ - Papua New Guinea landslide