ಗುರುಗ್ರಾಮ್(ಹರಿಯಾಣ): ವಿದೇಶದಿಂದಲೇ ಭೀಮ್ ಸೇನಾ ಮುಖ್ಯಸ್ಥ ಸತ್ಪಾಲ್ ತನ್ವಾರ್ ಎಂಬವರಿಗೆ ಜೀವ ಬೆದರಿಕೆ ಹಾಕಿದ ಆರೋಪದಡಿ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ ಸಹೋದರ ಅನ್ಮೊಲ್ ಬಿಷ್ಣೋಯಿ ವಿರುದ್ಧ ಗುರುಗ್ರಾಮ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜಿಂಬಾಬ್ವೆ ಮತ್ತು ಕೀನ್ಯಾ ದೇಶಗಳ ಸಂಖ್ಯೆಗಳನ್ನು ಬಳಸಿಕೊಂಡು ಯುಎಸ್ಎ ಮತ್ತು ಕೆನಡಾದಿಂದ ಬೆದರಿಕೆ ಕರೆಗಳನ್ನು ಮಾಡುತ್ತಿದ್ದಾನೆ ಎಂದು ಆರೋಪಿಸಲಾಗಿದೆ. ಈ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಗಾಗಿ ಎಸ್‌ಟಿಎಫ್, ಕ್ರೈಂ ಮತ್ತು ಸೈಬರ್ ಕ್ರೈಂ ಘಟಕಗಳ ಸದಸ್ಯರ ತಂಡ ರಚಿಸಿದ್ದಾರೆ. ಅನ್ಮೋಲ್ ಬಿಷ್ಣೋಯಿಯನ್ನು ಭಾರತಕ್ಕೆ ಕರೆತರಲು ಪ್ರಯತ್ನಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಅಕ್ಟೋಬರ್ 30ರಂದು ಸತ್ಪಾಲ್ ತನ್ವಾರ್ಗೆ ಕರೆ ಮಾಡಿ, ಆತನನ್ನು ತುಂಡು ತುಂಡಾಗಿ ಕತ್ತರಿಸುವುದಾಗಿ ಬೆದರಿಕೆ ಹಾಕಿದ್ದಾರೆ. 6 ನಿಮಿಷ 41 ಸೆಕೆಂಡ್ಗಳ ಕಾಲ ಕರೆ ಮಾಡಲಾಗಿದ್ದು, ಮೊದಲಿಗೆ ತನ್ವರ್ ಅವರ ಮಹಿಳಾ ಸೆಕ್ರೆಟರಿ ಫೋನ್ ಸ್ವೀಕರಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸೆಕ್ಟರ್ 37 ಪೊಲೀಸ್ ಠಾಣೆಯಲ್ಲಿ ಅನ್ಮೋಲ್ ಬಿಷ್ಣೋಯಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಅಡಿ ಪ್ರಕರಣ ದಾಖಲಿಸಲಾಗಿದೆ.
ಅಮೆರಿಕದಲ್ಲಿ ತಲೆಮರೆಸಿಕೊಂಡಿರುವ ಅನ್ಮೋಲ್ ಬಿಷ್ಣೋಯಿ ಸುಳಿವು ನೀಡಿದವರಿಗೆ/ಆತನನ್ನು ಸೆರೆ ಹಿಡಿಯಲು ಸಹಾಯ ಮಾಡಿದವರಿಗೆ 10 ಲಕ್ಷ ರೂ ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ ಘೋಷಿಸಿದೆ.(ಪಿಟಿಐ)
ಇದನ್ನೂ ಓದಿ: ಚಲಿಸುತ್ತಿದ್ದ ಖಾಸಗಿ ಸ್ಲೀಪರ್ ಬಸ್‌ನಲ್ಲಿ ಬೆಂಕಿ; ಕಿಟಕಿಯಿಂದ ಹಾರಿ ಪ್ರಯಾಣಿಕರು ಬಚಾವ್