ಪುಣೆ: ಅಧಿಕಾರ ದುರ್ಬಳಕೆ ಆರೋಪದ ಮೂಲಕ ಸದ್ದು ಮಾಡಿದ್ದ ಪ್ರೊಬೆಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರ ತಾಯಿ ಮನೋರಮಾ ಖೇಡ್ಕರ್ರನ್ನು ಪೊಲೀಸರು ಬಂಧಿಸಿದ್ದಾರೆ. ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರು ಬಳಿಕ ಅವರನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಿ, ಜುಲೈ 20ರವರೆಗೆ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಭೂ ವಿವಾದದಲ್ಲಿ ಪಿಸ್ತೂಲ್ ಹಿಡಿದು ವ್ಯಕ್ತಿಗೆ ಬೆದರಿಕೆ ಹಾಕಿರುವ ಪ್ರಕರಣದಲ್ಲಿ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.
ಪುಣೆಯ ಮುಲ್ಶಿ ಎಂಬ ಪ್ರದೇಶದಲ್ಲಿ ರೈತನ ಜಮೀನು ಕಬಳಿಸಲು ಅವರಿಗೆ ಪಿಸ್ತೂಲ್ ಹಿಡಿದು ಬೆದರಿಕೆ ಹಾಕಿದ್ದ ಅವರ ವಿಡಿಯೋ ವಾರದ ಹಿಂದೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದಾದ ಬಳಿಕ ಮನೋರಮಾ ನಾಪತ್ತೆಯಾಗಿದ್ದರು. ಇದೀಗ ಅವರನ್ನು ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಮಹಾದ್ನಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಪುಣೆ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮನೋರಮಾ ಮತ್ತು ಅವರ ಪತಿ ದಿಲೀಪ್ ಖೇಡ್ಕರ್ ಹಾಗೂ ಐವರು ಸಹಚರರನ್ನು ಬಂಧಿಸಲು ಪೊಲೀಸರು ಅವರಿಗಾಗಿ ಹುಡುಕಾಟ ನಡೆಸಿದ್ದರು. ಇದಕ್ಕಾಗಿ ಹಲವು ತಂಡಗಳನ್ನು ರಚಿಸಲಾಗಿತ್ತು. ಇವರೆಲ್ಲಾ ರಾಯಗಢ ಜಿಲ್ಲೆಯ ಮಹಾಡ್ ಪಟ್ಟಣದ ಸಮೀಪವಿರುವ ಹೋಂಸ್ಟೇನಲ್ಲಿ ಇದ್ದರು ಎಂಬ ಮಾಹಿತಿ ಆಧಾರದ ಮೇಲೆ ಪುಣೆ ಗ್ರಾಮಾಂತರ ಪೊಲೀಸ್ ತಂಡ ತೆರಳಿ, ಅವರನ್ನು ಬಂಧಿಸಿದ್ದಾರೆ. ಖೇಡ್ಕರ್ ದಂಪತಿ ಮತ್ತು ಇತರ ಐವರ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್‌ಗಳ ಅಡಿಯಲ್ಲಿ 323 ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪೂಜಾ ತಂದೆ ದಿಲೀಪ್ ಖೇಡ್ಕರ್ ಸರ್ಕಾರಿ ನೌಕರಿಯಲ್ಲಿದ್ದು, ಕೋಟ್ಯಂತರ ರೂಪಾಯಿ ಆಸ್ತಿ ಸಂಪಾದಿಸಿದ್ದಾರೆ. ದಿಲೀಪ್ ಅವರಿಗೆ ಅನೇಕ ಆಸ್ತಿಗಳಿವೆ. ಪುಣೆ ಜಿಲ್ಲೆಯ ಮುಲ್ಶಿ ತಾಲೂಕಿನಲ್ಲಿ 25 ಎಕರೆ ಭೂಮಿಯನ್ನು ಖರೀದಿಸಿದ್ದಾರೆ. ಜೊತೆಗೆ ರೈತರ ಭೂಮಿಯನ್ನು ಅತಿಕ್ರಮಿಸಲು ಪ್ರಯತ್ನಿಸಿದ್ದರು ಎಂದು ಮೂಲಗಳು ತಿಳಿಸಿವೆ. ಇದಕ್ಕೆ ಸಂಬಂಧಿಸಿದಂತೆ ಪೂಜಾ ತಾಯಿ ಮನೋರಮಾ ಖೇಡ್ಕರ್ ತಮ್ಮ ಬೌನ್ಸರ್‌ಗಳ ಸಹಾಯದಿಂದ ಮತ್ತು ಪಿಸ್ತೂಲ್ ಬಳಸಿ ರೈತರಿಗೆ ಬೆದರಿಕೆ ಹಾಕಿರುವ ವಿಡಿಯೋ ವೈರಲ್ ಆಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಪಿಸ್ತೂಲ್ಗೆ ನೀಡಿದ ಪರವಾನಗಿಯನ್ನು ಏಕೆ ರದ್ದು ಮಾಡಬಾರದು ಎಂದು ಪ್ರಶ್ನಿಸಿ ಅವರ ಮನೆಗೆ ನೋಟಿಸ್ ಕೂಡ ಅಂಟಿಸಿದ್ದರು.
ಇತ್ತ ಪ್ರೊಬೆಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರ ಸುಳ್ಳು ಪ್ರಮಾಣ ಪತ್ರದ ಹಿನ್ನೆಲೆ ಅವರಿಗೆ ತಕ್ಷಣಕ್ಕೆ ಮಸ್ಸೂರಿಯಲ್ಲಿರುವ ಐಎಎಸ್ ಅಕಾಡೆಮಿ ಎದುರು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ: ಸುಳ್ಳು ದಾಖಲೆ ಆರೋಪ: ಟ್ರೇನಿ IAS ಅಧಿಕಾರಿ ಹುದ್ದೆಯಿಂದ ಪೂಜಾ ಖೇಡ್ಕರ್ ಬಿಡುಗಡೆ, ಮಸ್ಸೂರಿ ಅಕಾಡೆಮಿಗೆ ವಾಪಸ್