ನವದೆಹಲಿ: ಗ್ಯಾಂಗ್ಸ್ಟರ್ ಹಿಮಾಂಶು ಭಾವು ಸಹಚರೆ 19 ವರ್ಷದ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ. ಪಶ್ಚಿಮ ದೆಹಲಿ ರಜೌರಿ ಗಾರ್ಡನ್ ಪ್ರದೇಶದಲ್ಲಿ ಬರ್ಗರ್ ಕಿಂಗ್‌ನಲ್ಲಿ ನಡೆದ ವ್ಯಕ್ತಿಯ ಹತ್ಯೆಗೆ ಸಂಬಂಧಿಸಿದಂತೆ ಈ ಬಂಧನ ಮಾಡಲಾಗಿದೆ.
ಲೇಡಿ ಡಾನ್ ಎಂದೇ ಪರಿಚಿತಳಾಗಿದ್ದ ಅನ್ನು ಧನಕರ್ ಬಂಧಿತ ಯುವತಿ. ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಭಾರತ ನೇಪಾಳ ಗಡಿಯ ಬಳಿ ಇವರನ್ನು ಬಂಧಿಸಲಾಗಿದೆ. ಜೂನ್ 18ರ ನಂತರ ಕೊಲೆ ಬಳಿಕ ಈಕೆ ಪೊಲೀಸರ ಕಣ್ಣುತಪ್ಪಿಸಿ, ವಿದೇಶಕ್ಕೆ ಹೋಗಲು ತಯಾರಿ ನಡೆಸಿದ್ದಳು. ಧನಕರ್ ಹರಿಯಾಣದ ರೋಹ್ಟಕ್ ನಿವಾಸಿಯಾಗಿದ್ದು, ಬರ್ಗರ್ ಕಿಂಗ್ ರೆಸ್ಟೋರೆಂಟ್‌ನಲ್ಲಿ ಅಮನ್ ಎಂಬಾತನ ಕೊಲೆಯಲ್ಲಿ ಭಾಗಿಯಾಗಿದ್ದಳು ಎಂದು ಡಿಎಸ್ಪಿ ಅಮಿತ್ ಕೌಶಿಕ್ ತಿಳಿಸಿದ್ದಾರೆ.
ಜೂನ್ 18ರಂದು ರಾತ್ರಿ ಸುಮಾರು 9.30ಕ್ಕೆ ರಾಜೌರಿ ಗಾರ್ಡನ್ಗೆ ಮೂವರು ಬೈಕ್ ಮೇಲೆ ಬಂದಿದ್ದರು. ಇವರಲ್ಲಿ ಒಬ್ಬ ಹೊರಗೆ ನಿಂತಿದ್ದು, ಇನ್ನಿಬ್ಬರು ಒಳಗೆ ಹೋಗಿ ಅಮನ್ ಎಂಬ ವ್ಯಕ್ತಿಯನ್ನು 20 - 25 ಬಾರಿ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದರು. ಈ ವೇಳೆ, ಸ್ಥಳದಲ್ಲಿ ಅನ್ನು ಕೂಡ ಇದ್ದಳು. ಸಾಮಾಜಿಕ ಜಾಲತಾಣದ ಮೂಲಕ ಅಮನ್ ಅವರನ್ನು ಸೆಳೆದು ಆತನ ಹತ್ಯೆಯಲ್ಲಿ ಅನ್ನು ಭಾಗಿಯಾಗಿದ್ದಳು. ಆತನ ಹತ್ಯೆ ವೇಳೆ ಸ್ಥಳದಲ್ಲೇ ಅನ್ನು ಇದ್ದಳು ಎಂಬುದು ತನಿಖೆಯಲ್ಲಿ ಬಯಲಾಗಿತ್ತು.
ಖಚಿತ ಮಾಹಿತಿ ಮೇರೆಗೆ ಬಂಧನ: ಅಕ್ಟೋಬರ್ 24ರಂದು ಯುಪಿಯ ಲಖಿಂಪುರ ಖೇರಿಯಲ್ಲಿರುವ ಇಂಡೋ-ನೇಪಾಳ ಗಡಿಯಲ್ಲಿ ಈಕೆ ಚಲನವಲನದ ಕುರಿತು ಮಾಹಿತಿ ಪಡೆದ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ತನಿಖೆ ವೇಳೆ ಗಡಿದಾಟಲು ಕೆಗೆ ಹಿಮಾಂಶು ಭಾವು ಮತ್ತು ಸಾಹಿಲ್ ರಿಟೋಲಿಯಾ ಸಹಾಯ ಮಾಡಿದ್ದರು. ಅವರು ಅಮೆರಿಕಕ್ಕೆ ಹೋಗಲು ವೀಸಾ ಸೇರಿದಂತೆ ಸಕಲ ವ್ಯವಸ್ಥೆ ಮಾಡಿಕೊಡುವ ಭರವಸೆ ನೀಡಿದ್ದರು.
ಈ ಪ್ರಕರಣ ಮಾತ್ರವಲ್ಲದೇ, ಗೋಹಾನಾದಲ್ಲಿನ ಮಾಟು ರಾಮ್ ಹಲ್ವಾಯಿ ಅಂಗಡಿಯಲ್ಲಿ ನಡೆದ ಗುಂಡಿನ ದಾಳಿಯಲ್ಲೂ ಆಕೆ ಹೆಸರು ಕೇಳಿ ಬಂದಿತ್ತು. ಇದಾದ ಬಳಿಕ ಹಿಮಾಂಶು ಸೂಚನೆಯಂತೆ ಈಕೆ ಅಮಾನ್ ಗೆಳತಿಯಂತೆ ಆತನನ್ನು ಮೋಸ ಮಾಡಿ ಹತ್ಯೆಗೆ ಸಹಾಯ ಮಾಡಿದ್ದಳು ಎಂಬುದು ತಿಳಿದು ಬಂದಿದೆ.
ಈ ಹತ್ಯೆ ಬಳಿಕ ಆಕೆ ಮುಖರ್ಜಿ ನಗರ್ ಪಿಜಿಗೆ ತೆರಳಿ ತನ್ನ ವಸ್ತುಗಳನ್ನೆಲ್ಲ ಪಡೆದು ಐಎಸ್ಪಿಟಿ ಕಾಶ್ಮೀರ ಗೇಟ್ ಮೂಲಕ ಚಂಡೀಗಢಕ್ಕೆ ಬಸ್ನಲ್ಲಿ ತೆರಳಿ ನಂತರ ಕತ್ರಾ ಮೂಲಕ ಅಮೃತ್ಸರ್ ಪ್ರಯಾಣಿಸಿದ್ದಳು. ಕತ್ರಾದಲ್ಲಿ ಗೈಸ್ಹೌಸ್ನಲ್ಲಿದ್ದು, ಇದಾದ ಬಳಿಕ ಜಲಂದರ್ಗೆ ಟ್ರೈನ್ ಮೂಲಕ ಸಾಗಿ ಹರಿದ್ವಾರ ತಲುಪಿದಳು. ಅಲ್ಲಿ ಮೂರ್ನಾಲ್ಕು ದಿನ ಇದ್ದು ಬಳಿಕ ಕೋಟಾಗೆ ಪ್ರಯಾಣಿಸಿದ್ದಳು. ಭಾವು ಈಕೆಗೆ ಹಣ ಕಳುಹಿಸುತ್ತಿದ್ದ ಅಲ್ಲದೇ ಆಕೆಗೆ ದುಬೈ ಮೂಲಕ ಅಮೆರಿಕಕ್ಕೆ ಕಳುಹಿಸುವ ವ್ಯವಸ್ಥೆ ಮಾಡಲು ಮುಂದಾಗಿದ್ದ ಎಂದು ತನಿಖೆ ವೇಳೆ ತಿಳಿದು ಬಂದಿದೆ. (ಪಿಟಿಐ)
ಇದನ್ನೂ ಓದಿ: ಬಾಬಾ ಸಿದ್ದಿಕಿ ಕೊಲೆ ಪ್ರಕರಣದಲ್ಲಿ ಬೇಕಾಗಿದ್ದ ಮತ್ತೊಬ್ಬ ಪ್ರಮುಖ ಆರೋಪಿ ಬಂಧನ