ಕೋಝಿಕ್ಕೋಡ್ (ಕೇರಳ): ಅಪಸ್ಮಾರ ರೋಗದಿಂದ ಬಳಲುತ್ತಿದ್ದ ಯುವತಿಗೆ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ವೈದ್ಯರು ತಲೆಬುರುಡೆಗೆ ರಂಧ್ರ ಕೊರೆದು ಯಶಸ್ವಿ ಶಸ್ತ್ರಚಿಕಿತ್ಸೆ(open skull surgery) ನಡೆಸಿದ್ದಾರೆ. ಶಸ್ತ್ರಚಿಕಿತ್ಸೆ ನಡೆಸಿ ಮೆದುಳಿಗೆ ಎಲೆಕ್ಟ್ರೋಕಾರ್ಟಿಕೊಗ್ರಾಫ್ (ಇಸಿಒಜಿ) ಅನ್ನು ಜೋಡಿಸಿದ್ದಾರೆ.
ವೈದ್ಯರ ಪ್ರತಿಕ್ರಿಯೆ ಹೀಗಿದೆ; ಹಲವು ವರ್ಷಗಳಿಂದ ಅಪಸ್ಮಾರ (ಮೂರ್ಛೆ) ರೋಗದಿಂದ ಬಳಲುತ್ತಿದ್ದ 25 ವರ್ಷದ ಯುವತಿಯೊಬ್ಬರಿಗೆ ಈ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಅವರ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ. ಕೇರಳ ರಾಜ್ಯದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಈ ರೀತಿಯ ಶಸ್ತ್ರಚಿಕಿತ್ಸೆ ನಡೆದಿರುವುದು ಇದೇ ಮೊದಲು ಎಂದು ವೈದ್ಯರು ತಿಳಿಸಿದ್ದಾರೆ.
ಯುವತಿಗೆ ಮೊದಲು ಇಇಜಿ, ಎಂಆರ್ಐ, ಪಿಇಟಿ ಸ್ಕ್ಯಾನ್ ಮತ್ತು ನ್ಯೂರೋಸೈಕೋಲಾಜಿಕಲ್ ಪರೀಕ್ಷೆಗಳನ್ನು ನಡೆಸಲಾಯಿತು. ಅಪಸ್ಮಾರ ರೋಗದ ಕೇಂದ್ರಬಿಂದು ಮೆದುಳಿನಲ್ಲಿ ಇದೆ ಎಂದು ದೃಢಪಟ್ಟರೆ ಮಾತ್ರ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ಶಸ್ತ್ರಚಿಕಿತ್ಸೆ ನಡೆಸಿದರೆ ಅದು ಕಣ್ಣುಗಳು ಸೇರಿದಂತೆ ದೇಹದ ಯಾವುದೇ ಪ್ರಮುಖ ಅಂಗಗಳ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆಯೇ ಎಂದು ತಿಳಿದುಕೊಳ್ಳುವುದು ಸಹ ಅಗತ್ಯ ಎಂದು ವೈದ್ಯಕೀಯ ಕಾಲೇಜಿನ ನರಶಸ್ತ್ರಚಿಕಿತ್ಸಾ ವಿಭಾಗದ ಪ್ರಾಧ್ಯಾಪಕ ಡಾ. ವಿ. ಎಂ. ಪವಿತ್ರನ್ 'ಈಟಿವಿ ಭಾರತ'ಕ್ಕೆ ತಿಳಿಸಿದ್ದಾರೆ.
ನರಶಸ್ತ್ರಚಿಕಿತ್ಸಾ ವಿಭಾಗದ ಪ್ರಾಧ್ಯಾಪಕ ಡಾ. ವಿ. ಎಂ. ಪವಿತ್ರನ್, ಅಸೋಸಿಯೇಟ್ ಡಾ. ಪಿ. ಅಬ್ದುಲ್ ಜಲೀಲ್ ಮತ್ತು ನ್ಯೂರೋ ಮೆಡಿಸಿನ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ನೀತಾ ಬಲರಾಮ್ ಅವರನ್ನೊಳಗೊಂಡ ತಂಡದ ನೇತೃತ್ವದಲ್ಲಿ ಸತತ ಆರು ಗಂಟೆ ಶ್ರಮಿಸಿ ಯುವತಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ನರಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಪ್ರಕಾಶನ್, ನ್ಯೂರೋ ಮೆಡಿಸಿನ್ ಮುಖ್ಯಸ್ಥೆ ಡಾ. ಬೀನಾ ವಾಸಂತಿ ಹಾಗೂ ಸಹಾಯಕ ಪ್ರಾಧ್ಯಾಪಕರಾದ ಡಾ. ಸುಷಾ ಮತ್ತು ಡಾ. ಸುಶಿಭಾ ಅವರು ಶಸ್ತ್ರಚಿಕಿತ್ಸೆಯ ಮೇಲ್ವಿಚಾರಣೆ ನಡೆಸಿದ್ದರು.
ಮೆದುಳಿನಲ್ಲಿ ಅಪಸ್ಮಾರಕ್ಕೆ ಕಾರಣವಾದ ಭಾಗವನ್ನು ಪತ್ತೆಹಚ್ಚಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಈ ಚಿಕಿತ್ಸೆಯನ್ನು ಖಾಸಗಿ ಆಸ್ಪತ್ರೆಗಳಲ್ಲಿ ಮಾಡಿಸಿದರೆ ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ. 10 ವರ್ಷಗಳ ಹಿಂದೆ ಕೋಝಿಕ್ಕೋಡ್ ಮೆಡಿಕಲ್ ಕಾಲೇಜಿನಲ್ಲಿ ಡಾ. ಜೇಮ್ಸ್ ಜೋಸ್, ಡಾ. ಜೇಕಬ್ ಆಲಪ್ಪಾಡ್ ಮತ್ತು ಡಾ. ರಾಜೀವ್ ಅವರ ನೇತೃತ್ವದಲ್ಲಿ ಮೂರ್ಛೆ ರೋಗ ಶಸ್ತ್ರಚಿಕಿತ್ಸೆ ನಡೆಸಲು ಆರಂಭಿಸಲಾಗಿತ್ತು. ಸದ್ಯ ಎಲೆಕ್ಟ್ರೋ ಕಾರ್ಟಿಕೋ ಗ್ರಾಮ್ ನೆರವಿನಿಂದ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ ಎಂದು ವೈದ್ಯರು ಮಾಹಿತಿ ನೀಡಿದರು.
ಇದನ್ನೂ ಓದಿ: ಯುವತಿಯ ತಲೆಬುರುಡೆಯಿಂದ ಸುಮಾರು 70 ಸೂಜಿಗಳನ್ನು ಹೊರತೆಗೆದ ಶಸ್ತ್ರಚಿಕಿತ್ಸಕರು - Needles Remove From Girl Skull