ನವದೆಹಲಿ: ಭಾರತದಲ್ಲಿ ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸಲು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿಯು 'ಒಂದು ರಾಷ್ಟ್ರ, ಒಂದು ಚುನಾವಣೆ' ಪರಿಕಲ್ಪನೆಯನ್ನು ಶಿಫಾರಸು ಮಾಡಿದೆ.
ಸಮಿತಿ ಕೇಂದ್ರ ಸರ್ಕಾರಕ್ಕೆ ಈ ಶಿಫಾರಸು ಮಾಡುವ ಮೊದಲು ವಿಶ್ವದ ಏಳು ದೇಶಗಳ ಚುನಾವಣಾ ಪ್ರಕ್ರಿಯೆಯನ್ನು ಅಧ್ಯಯನ ಮಾಡಿದೆ ಎಂಬುದು ವಿಶೇಷ. ಮಾಜಿ ರಾಷ್ಟ್ರಪತಿಗಳ ಮುಂದಾಳತ್ವದ ಉನ್ನತ ಮಟ್ಟದ ಸಮಿತಿಯು ದಕ್ಷಿಣ ಆಫ್ರಿಕಾ, ಸ್ವೀಡನ್, ಬೆಲ್ಜಿಯಂ, ಜರ್ಮನಿ, ಜಪಾನ್, ಇಂಡೋನೇಷ್ಯಾ ಮತ್ತು ಫಿಲಿಪ್ಪೀನ್ಸ್‌ಗಳಲ್ಲಿನ ಚುನಾವಣೆಗಳ ಪ್ರಕ್ರಿಯೆಯನ್ನು ಪರಿಶೀಲಿಸಿದೆ.
ಈ ರಾಷ್ಟ್ರಗಳಲ್ಲಿ ಚುನಾವಣೆ ಹೇಗಿದೆ?: ದಕ್ಷಿಣ ಆಫ್ರಿಕಾದಲ್ಲಿ ಮೇ 29ರಂದು ಸಾರ್ವತ್ರಿಕ ಚುನಾವಣೆ ನಡೆಯುತ್ತದೆ. ಮತದಾರರು ರಾಷ್ಟ್ರೀಯ ಅಸೆಂಬ್ಲಿ (ಲೋಕಸಭೆ) ಮತ್ತು ಪ್ರಾಂತೀಯ ಶಾಸಕಾಂಗಗಳಿಗೆ(ವಿಧಾನಸಭೆಗಳು) ಏಕಕಾಲದಲ್ಲಿ ಮತ ಚಲಾಯಿಸುತ್ತಾರೆ. ಬಳಿಕ ಸ್ಥಳೀಯ ಸಂಸ್ಥೆಗಳಿಗೆ ಅವುಗಳ ಅವಧಿ ಅನುಸರಿಸಿ ಚುನಾವಣೆ ನಡೆಯುತ್ತದೆ.
ಸ್ವೀಡನ್ನಲ್ಲಿ ಸ್ಥಳೀಯ ಸಂಸ್ಥೆಗಳಿಂದ ಹಿಡಿದು ರಾಷ್ಟ್ರೀಯ ಚುನಾವಣೆಗಳು ಏಕಕಾಲದಲ್ಲಿ ನಡೆಯುತ್ತವೆ. ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಸಂಸತ್, ರಾಜ್ಯಗಳ ಚುನಾವಣೆಯು ಸೆಪ್ಟೆಂಬರ್ ತಿಂಗಳ ಎರಡನೇ ಭಾನುವಾರದಂದು ನಡೆಯುತ್ತವೆ. ಅದೇ ರೀತಿ, ಸ್ಥಳೀಯ ಸಂಸ್ಥೆಗಳಿಗೆ ಐದು ವರ್ಷಗಳಿಗೊಮ್ಮೆ ಸೆಪ್ಟೆಂಬರ್ ತಿಂಗಳ ಎರಡನೇ ಭಾನುವಾರದಂದು ಮತದಾನ ನಡೆಯುತ್ತವೆ.
ಸಮಿತಿಯ ಸದಸ್ಯರಾದ ಸುಭಾಷ್ ಸಿ.ಕಶ್ಯಪ್ ಅವರು ದೇಶದ ನಾಯಕನ ನೇಮಕ ಮತ್ತು ಅವಿಶ್ವಾಸ ಮತದ ವಿಶಿಷ್ಟ ರಚನೆಯನ್ನು ಹೊಂದಿರುವ ಜರ್ಮನ್ ಮಾದರಿಯನ್ನು ಭಾರತದಲ್ಲಿ ಅನುಷ್ಠಾನಕ್ಕೆ ತರಲು ಸಲಹೆ ನೀಡಿದ್ದಾರೆ.
ಜಪಾನ್ ಮತ್ತು ಜರ್ಮನಿಯಲ್ಲಿ ಪ್ರಧಾನಮಂತ್ರಿಯನ್ನು ಸಂಸತ್ ಆಯ್ಕೆ ಮಾಡಿದ ಬಳಿಕ, ರಾಷ್ಟ್ರದಲ್ಲಿ ಏಕಕಾಲದಲ್ಲಿ ಚುನಾವಣೆಗಳು ನಡೆಯುತ್ತವೆ. ಇಲ್ಲಿ ಆಯ್ಕೆಯಾಗುವ ಪಕ್ಷವು ತನ್ನ ಅಭ್ಯರ್ಥಿಯನ್ನು ಪ್ರಧಾನಿಯನ್ನಾಗಿ ನೇಮಿಸುತ್ತವೆ. ಇದು ಭಾರತಕ್ಕೆ ಪ್ರಯೋಜನಕಾರಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮುಸ್ಲಿಂ ಬಾಹುಳ್ಯದ ರಾಷ್ಟ್ರದಲ್ಲೂ ಒನ್ಟೈಮ್ ಎಲೆಕ್ಷನ್: ಮುಸ್ಲಿಂ ಬಾಹುಳ್ಯ ರಾಷ್ಟ್ರವಾದ ಇಂಡೋನೇಷ್ಯಾವೂ 2019ರಿಂದ ಏಕಕಾಲದ ಚುನಾವಣೆ ಪದ್ಧತಿಯನ್ನು ಅನುಸರಿಸುತ್ತಿದೆ. ಇಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ರಾಷ್ಟ್ರೀಯ ಮತ್ತು ಪ್ರಾದೇಶಿಕ ಶಾಸಕಾಂಗ ಸಂಸ್ಥೆಗಳ ಸದಸ್ಯರನ್ನು ಒಂದೇ ದಿನದಲ್ಲಿ ಚುನಾಯಿಸಲಾಗುತ್ತದೆ.
ಈ ವರ್ಷದ ಫೆಬ್ರವರಿ 14ರಂದು ಇಂಡೋನೇಷ್ಯಾ ಯಶಸ್ವಿಯಾಗಿ ಏಕಕಾಲಿಕ ಚುನಾವಣೆಗಳನ್ನು ನಡೆಸಿತು. ಇದು ವಿಶ್ವದಲ್ಲಿಯೇ ಒಂದೇ ದಿನದಲ್ಲಿ ನಡೆದ ಅತಿದೊಡ್ಡ ಚುನಾವಣೆಯಾಗಿದೆ. ಸುಮಾರು 200 ಮಿಲಿಯನ್ ಜನರು ಅಧ್ಯಕ್ಷ, ಉಪಾಧ್ಯಕ್ಷ, ಸಂಸತ್ ಸದಸ್ಯರು, ರಾಜ್ಯ ಅಸೆಂಬ್ಲಿಗಳ ಸದಸ್ಯರು ಮತ್ತು ಮುನ್ಸಿಪಲ್ಗಳಿಗೆ ಮತದಾನ ಹಾಕಿದ್ದಾರೆ.
ಕೇಂದ್ರ ಸಚಿವ ಸಂಪುಟ ಅಂಗೀಕಾರ: ರಾಮನಾಥ್ ಕೋವಿಂದ್ ಅವರ ಸಮಿತಿಯು ಶಿಫಾರಸು ಮಾಡಿರುವ ಒಂದು ರಾಷ್ಟ್ರ ಒಂದು ಚುನಾವಣೆ ಪ್ರಸ್ತಾವದ ವಿಧೇಯಕವನ್ನು ಕೇಂದ್ರ ಸಚಿವ ಸಂಪುಟ ಗುರುವಾರ ಅಂಗೀಕರಿಸಿದೆ ಎಂದು ಮೂಲಗಳು ತಿಳಿಸಿವೆ. ಸದ್ಯ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಕರಡು ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವ ಸಾಧ್ಯತೆಯಿದೆ.
ಇದನ್ನೂ ಓದಿ: 'ಒಂದು ರಾಷ್ಟ್ರ, ಒಂದು ಚುನಾವಣೆ' ವಿಧೇಯಕಕ್ಕೆ ಕೇಂದ್ರ ಸಚಿವ ಸಂಪುಟ ಅಸ್ತು: ಮೂಲಗಳು