ಕೋಟಾ: ಮುಂದೆ ಓದಲು ಇಷ್ಟವಿಲ್ಲ. ಇನ್ನು ಐದು ವರ್ಷ ನಿಮ್ಮ ಸಂಪರ್ಕಕ್ಕೆ ಸಿಗುವುದಿಲ್ಲ ಎಂದು ತಿಳಿಸಿ ನಾಪತ್ತೆಯಾಗಿದ್ದ ಕೋಟಾದಲ್ಲಿ ನೀಟ್ ಕೊಚಿಂಗ್ ಪಡೆಯುತ್ತಿದ್ದ ಯುವಕನನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಈತ 24 ದಿನಗಳ ಬಳಿಕ ಗೋವಾದ ಮಡ್ಗಾವ್ನಲ್ಲಿ ಪತ್ತೆಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜಸ್ಥಾನದ ಗಂಗಾಪುರದ ನಿವಾಸಿ 19 ವರ್ಷದ ರಾಜೇಂದ್ರ ಮೀನಾ, ಕೋಟಾದಲ್ಲಿ ವೈದ್ಯಕೀಯ ಪ್ರವೇಶ ಶಿಕ್ಷಣ ನೀಟ್ಗೆ ಕೋಚಿಂಗ್ ಪಡೆಯುತ್ತಿದ್ದ. ನೀಟ್ನಲ್ಲಿ ಉತ್ತಮ ಫಲಿತಾಂಶ ಸಾಧಿಸದ ಹಿನ್ನೆಲೆಯಲ್ಲಿ ಮೇ 6ರಂದು ಪತ್ರ ಬರೆದು ನಾಪತ್ತೆಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಾಗಿತ್ತು.
ಈ ಕುರಿತು ಮಾತನಾಡಿರುವ ರಾಜಸ್ಥಾನದ ವಿಜ್ಞಾನ ನಗರ ಪೊಲೀಸ್ ಅಧಿಕಾರಿ ಸತೀಶ್ ಚಂದ್ರ ಚೌಧರಿ, ರಾಜೇಂದ್ರನ ಚಲನವಲನಗಳು ಮಡ್ಗಾವ್ ರೈಲ್ವೆ ಸ್ಟೇಷನ್ನ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಇದರ ಆಧಾರದ ಮೇಲೆ ಪತ್ತೆ ಮಾಡಲಾಗಿದೆ ಎಂದರು.
ಕೋಟಾದಲ್ಲಿಯೇ ಸಿಮ್ ಮುರಿದು ಹಾಕಿದ ರಾಜೇಂದ್ರ, ಮೊಬೈಲ್ ಮಾರಾಟ ಮಾಡಿ, ಅದರಿಂದ ಬಂದ ಹಣದಿಂದ ಅಲೆದಾಟ ನಡೆಸುತ್ತಿದ್ದ. ಸಿಸಿಟಿವಿ ಫುಟೇಜ್ನಲ್ಲಿ ರಾಜೇಂದ್ರನನ್ನು ಆತನ ತಂದೆ ಪತ್ತೆ ಮಾಡಿದ್ದು, ಇದು ಆತನ ಹುಡುಕಲು ಸಹಾಯ ಮಾಡಿತು. ರಾಜೇಂದ್ರ ರೈಲು ನಿಲ್ದಾಣದಲ್ಲಿ ಅಥವಾ ರೈಲುಗಳಲ್ಲಿಯೇ ರಾತ್ರಿಯನ್ನು ಕಳೆಯುತ್ತಾ ಅಲ್ಲಿಯೇ ಸುತ್ತಮುತ್ತ ಅಲೆದಾಟ ನಡೆಸುತ್ತಿದ್ದ.
ನಾಪತ್ತೆಯಾದ ಬಳಿಕ ರಾಜೇಂದ್ರ ತನ್ನ ಫಲಿತಾಂಶದಿಂದ ಮತ್ತಷ್ಟು ಒತ್ತಡಕ್ಕೆ ಒಳಗಾಗಿದ್ದ. ಆತನ ಮೊದಲು ಪುಣೆಗೆ ತೆರಳಿದ್ದ. ಅಲ್ಲಿಂದ ಜಮ್ಮುವಿನ ವೈಷ್ಣೋದೇವಿ ದರ್ಶನ ಮಾಡಿ, ಬಳಿಕ ಗೋವಾ ತಲುಪಿದ್ದಾನೆ ಎಂದು ಪೊಲೀಸರು ವಿವರಣೆ ನೀಡಿದರು.
ರಾಜೇಂದ್ರ ಕಳೆದ ಮೂರು ವರ್ಷದಿಂದ ನೀಟ್ಗೆ ಕೋಟಾದಲ್ಲಿ ಕೋಚಿಂಗ್ ಪಡೆಯುತ್ತಿದ್ದ. ಈ ಬಾರಿ ಕೂಡ ನೀಟ್ ಫಲಿತಾಂಶದಲ್ಲಿ ಫೇಲ್ ಆದ ಹಿನ್ನೆಲೆಯಲ್ಲಿ ಆತ, ಯಾರೂ ನನ್ನನ್ನು ಸಂಪರ್ಕಿಸಬೇಡಿ, ನನಗೆ ಓದಲು ಇಚ್ಛೆ ಇಲ್ಲ. ನಾನು ಸಿಮ್ ಒಡೆದು, ಮೊಬೈಲ್ ಮಾರಲಿದ್ದೇನೆ. ನಾನು ಯಾವುದೆ ಅನಾಹುತದ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಐದು ವರ್ಷದ ಬಳಿಕ ಮನೆಗೆ ಬರುತ್ತೇನೆ. ನನ್ನ ಬಳಿ ಎಲ್ಲರ ಮೊಬೈಲ್ ನಂಬರ್ ಇದೆ. ಅಗತ್ಯವಿದ್ದಾಗ ಕರೆ ಮಾಡುತ್ತೇನೆ. ವರ್ಷಕ್ಕೆ ಒಂದು ಬಾರಿ ತಪ್ಪದೇ ಕರೆ ಮಾಡುತ್ತದೆ ಎಂದು ಸಂದೇಶ ರವಾನಿಸಿ, ಈತ ನಾಪತ್ತೆಯಾಗಿದ್ದ. ಈ ಸಂಬಂಧ ಆತನ ತಂದೆ ಜಗದೀಶ್ ಮೀನಾ ಕೋಟಾದಲ್ಲಿ ಪ್ರಕರಣ ದಾಖಲಿಸಿದ್ದರು.
ಇದನ್ನೂ ಓದಿ: ಕೋಟಾದಿಂದ ಮತ್ತೆ ಸುಸೈಡ್ ಸುದ್ದಿ: ನೀಟ್ ಆಕಾಂಕ್ಷಿ ಆತ್ಮಹತ್ಯೆ