ತಿರುವನಂತಪುರಂ (ಕೇರಳ): ಅಂತರ್ಜಾಲದಲ್ಲಿ ಮಕ್ಕಳ ಅಶ್ಲೀಲ ಚಿತ್ರ, ವಿಡಿಯೋ ಹುಡುಕಾಟ, ಸಂಗ್ರಹ ಮತ್ತು ಹಂಚಿಕೊಳ್ಳುವವರ ವಿರುದ್ಧ ಕೇರಳ ಪೊಲೀಸರು ಬೃಹತ್ ಬೇಟೆ ನಡೆಸಿದ್ದಾರೆ. ರಾಜ್ಯಾದ್ಯಂತ ನಡೆಸಿದ ಶೋಧದಲ್ಲಿ ಆರು ಜನರನ್ನು ಬಂಧಿಸಿ, 37 ಪ್ರಕರಣಗಳನ್ನು ದಾಖಲಿಸಲಾಗಿದೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ರಾಜ್ಯ ಪೊಲೀಸ್ ಇಲಾಖೆ, ಪಿ-ಹಂಟ್ ಎಂಬ ಹೆಸರಿನಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಲು ಕಾರ್ಯಾಚರಣೆ ನಡೆಸಲಾಗಿದೆ. ಕಳೆದ ಕೆಲವು ದಿನಗಳಿಂದ ರಾಜ್ಯದ 455 ಸ್ಥಳಗಳ ಮೇಲೆ ದಾಳಿ ಮಾಡಲಾಗಿದೆ. ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದೆ.
ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ, ಮಲಪ್ಪುರಂ, ಕೋಯಿಕೋಡ್, ಕಾಸರಗೋಡು, ಮಲಪ್ಪುರಂ ಜಿಲ್ಲೆಗಳಲ್ಲಿ ಈ ಪೊಲೀಸ್ ಕಾರ್ಯಾಚರಣೆ ನಡೆದಿದೆ. ಇದರಲ್ಲಿ ಅತಿಹೆಚ್ಚು ಪ್ರಕರಣಗಳು ಮಲಪ್ಪುರಂ ಜಿಲ್ಲೆಯಲ್ಲಿ ಪತ್ತೆಯಾಗಿವೆ. ಇಲ್ಲಿನ 60 ಸ್ಥಳಗಳಲ್ಲಿ ನಡೆದ ದಾಳಿಯಲ್ಲಿ 23 ಸಾಧನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಿರುವನಂತಪುರಂ ಗ್ರಾಮಾಂತರ ಪ್ರದೇಶದಲ್ಲಿ ಒಟ್ಟು 39 ಸ್ಥಳಗಳನ್ನು ಶೋಧಿಸಲಾಗಿದೆ. ಇಲ್ಲಿಂದ 29 ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ. ತಿರುವನಂತಪುರಂನಲ್ಲಿ 22 ಕಡೆ ನಡೆದ ತಪಾಸಣೆಯಲ್ಲಿ 5 ಎಲೆಕ್ಟ್ರಾನಿಕ್ ಸಾಧನಗಳು ಸಿಕ್ಕಿವೆ. ಪತ್ತನಂತಿಟ್ಟದಲ್ಲಿ 8, ಆಲಪ್ಪುಳದಲ್ಲಿ 8, ಕೊಲ್ಲಂನಲ್ಲಿ 7, ಕಾಸರಗೋಡಿನಲ್ಲಿ 5, ಪಾಲಕ್ಕಾಡ್ನಲ್ಲಿ 4, ತ್ರಿಶೂರ್ ಗ್ರಾಮಾಂತರ, ತ್ರಿಶೂರ್ ನಗರ ಮತ್ತು ವಯನಾಡ್ನಲ್ಲಿ ತಲಾ 3 ಸಾಧನಗಳನ್ನು ಜಪ್ತಿ ಮಾಡಲಾಗಿದೆ. ತಿರುವನಂತಪುರಂ, ಪತ್ತನಂತಿಟ್ಟ, ಮಲಪ್ಪುರಂ ಮತ್ತು ಕೋಯಿಕೋಡ್ ಜಿಲ್ಲೆಗಳಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಲಯಾಳಂ ಸಿನಿಮಾ ರಂಗದಲ್ಲಿ ನಟಿಯರ ಮೇಲಿನ ಲೈಂಗಿಕ ದೌರ್ಜನ್ಯ ಕೇಸ್ ಕುರಿತು ನ್ಯಾ. ಹೇಮಾ ವರದಿಯು ಸಂಚಲನ ಉಂಟು ಮಾಡಿದ್ದರ ನಡುವೆ, ಮಕ್ಕಳ ಅಶ್ಲೀಲ ಚಿತ್ರಗಳ ಹಂಚಿಕೆ ಜಾಲದ ಪತ್ತೆಯು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ: ಮಲಯಾಳಂ ಚಿತ್ರರಂಗದಲ್ಲಿ ಶಕ್ತಿಕೇಂದ್ರವಿಲ್ಲ, ಸೂಕ್ತ ತನಿಖೆ ನಡೆಯಲಿ: ನಟ ಮಮ್ಮುಟ್ಟಿ - MAMMOOTTY ON HEMA COMMITTEE