ವಯನಾಡು: ಕೇರಳದ ವಯನಾಡು ಜಿಲ್ಲೆಯಲ್ಲಿ ಕರ್ನಾಟಕದ ಕಾಡಾನೆ ದಾಳಿಯಿಂದ ಮೃತಪಟ್ಟಿದ್ದ ಅಜೀಶ್ ಕುಟುಂಬಸ್ಥರು ಸರ್ಕಾರದ 15 ಲಕ್ಷ ರೂ. ಪರಿಹಾರ ತೆಗೆದುಕೊಳ್ಳದಿರಲು ತೀರ್ಮಾನಿಸಿದ್ದಾರೆ. ಮೃತರ ಕುಟುಂಬಕ್ಕೆ ನೆರವಾಗುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲಹೆಯ ಮೇರೆಗೆ ಕರ್ನಾಟಕದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಪರಿಹಾರ ಘೋಷಿಸಿದ್ದರು.
ಇದರ ಬೆನ್ನೆಲ್ಲೇ ಕಾಂಗ್ರೆಸ್ ಸರ್ಕಾರ ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದರು. ವಿಧಾನಸೌಧದಲ್ಲಿ ಮಾತನಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಯನಾಡಿನಲ್ಲಿ ಆನೆ ತುಳಿತಕ್ಕೊಳಗಾಗಿ ಮೃತಪಟ್ಟ ವ್ಯಕ್ತಿಗೆ ರಾಜ್ಯ ಸರ್ಕಾರವು ಕೇರಳದ ಸಂಸದರೂ ಆಗಿರುವ ರಾಹುಲ್ ಗಾಂಧಿ ಆದೇಶ ಮೇರೆಗೆ ಪರಿಹಾರ ನೀಡಿದ್ದಾರೆ ಎಂದು ಆರೋಪಿಸಿದ್ದರು. ಒಂದೆಡೆ ಸರ್ಕಾರ ರೈತರಿಗೆ ಬರಗಾಲ ಸಂದರ್ಭದಲ್ಲಿ ಹೆಕ್ಟೇರ್ಗೆ 2 ಸಾವಿರ ರೂ ಭಿಕ್ಷೆಯಂತೆ ಕೊಡ್ತಿದೆ. ಯಾರನ್ನು ಕೇಳಿ ಈ ನಿರ್ಧಾರ ತೆಗೆದಕೊಂಡಿದ್ದೀರಿ?. ಹೇಳೋರು, ಕೇಳೋರೂ ಯಾರು ಇಲ್ವಾ? ಎಂದು ಕಿಡಿಕಾರಿದ್ದರು.
ಇನ್ನೊಂದೆಡೆ, ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಪ್ರತಿಭಟಿಸಲು ನಿರ್ಧಾರ ಮಾಡಿದ್ದರು. ಈ ವಿಷಯ ತಿಳಿದ ಮೃತ ಅಜೀಶ್ ಕುಟುಂಬಸ್ಥರು ಬೇಸರ ವ್ಯಕ್ತಪಡಿಸಿ, ಪರಿಹಾರ ಘೋಷಿಸಿದ್ದಕ್ಕೆ ಕೃತಜ್ಞರಾಗಿರುತ್ತೇವೆ. ಆದರೆ ಪರಿಹಾರ ಸ್ವೀಕರಿಸಲು ಬಯಸುವುದಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಆನೆ ದಾಳಿಯಿಂದ ಮೃತಪಟ್ಟ ಕೇರಳ ವ್ಯಕ್ತಿಗೆ ರಾಜ್ಯದಿಂದ ಪರಿಹಾರ: ಬಿ.ವೈ ವಿಜಯೇಂದ್ರ ಕಿಡಿ