ರುದ್ರಪ್ರಯಾಗ (ಉತ್ತರಾಖಂಡ): ವಿಶ್ವವಿಖ್ಯಾತ ಕೇದಾರನಾಥ ದೇವಸ್ಥಾನದ ಬಾಗಿಲು ಇಂದು (ಶುಕ್ರವಾರ) ಬೆಳಗ್ಗೆ 7.15ಕ್ಕೆ ವಿವಿಧ ಧಾರ್ಮಿಕ ಆಚರಣೆಗಳೊಂದಿಗೆ ಭಕ್ತರ ದರ್ಶನಕ್ಕಾಗಿ ತೆರೆಯಲಾಗಿದೆ. ದೇವಸ್ಥಾನವನ್ನು 24 ಕ್ವಿಂಟಾಲ್ ಹೂವಿನಿಂದ ಅಲಂಕರಿಸಲಾಗಿದ್ದು, ಭಕ್ತರು ದರ್ಶನ ಪಡೆಯುತ್ತಿದ್ದಾರೆ. ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ, ಕೇದಾರನಾಥ ರಾವಲ್ ಭೀಮಾಶಂಕರಲಿಂಗ, ಪ್ರಧಾನ ಅರ್ಚಕ ಶಿವಶಂಕರಲಿಂಗ, ಆಡಳಿತ ಮಂಡಳಿ, ಬಿಕೆಟಿಸಿ ಅಧಿಕಾರಿಗಳು ಹಾಗೂ ನೂರಾರು ಯಾತ್ರಾರ್ಥಿಗಳ ಸಮ್ಮುಖದಲ್ಲಿ ಬಾಗಿಲು ತೆರೆಯಲಾಯಿತು.
ಕೇದಾರನಾಥ ದೇಗುಲದ ಬಾಗಿಲು ಓಪನ್: ಮೊದಲನೆಯದಾಗಿ ಆಡಳಿತ ಮಂಡಳಿಯ ಸಮ್ಮುಖದಲ್ಲಿ ಮುಖ್ಯದ್ವಾರದ ಬೀಗ ತೆರೆಯಲಾಯಿತು. ಇದಾದ ನಂತರ ಗರ್ಭಗುಡಿಯ ಬಾಗಿಲು ತೆರೆಯಲಾಯಿತು. ಪ್ರಧಾನ ಅರ್ಚಕರಿಂದ ನಡೆದ ಪೂಜೆಯೊಂದಿಗೆ, ಗರ್ಭಗುಡಿಯಲ್ಲಿ ಸಾಮಾನ್ಯ ದರ್ಶನ ಪ್ರಾರಂಭಿಸಲಾಯಿತು. ಮೊದಲ ದಿನ ಬೆಳಗ್ಗೆಯಿಂದ ಸಂಜೆ 5ರ ವರೆಗೆ ನಿರಂತರವಾಗಿ ದೇವರ ದರ್ಶನ ಮುಂದುವರಿಯಲಿದೆ. ಮೇ 11 ರ ಶನಿವಾರದಂದು ಕೇದಾರನಾಥ ದೇವಾಲಯದಲ್ಲಿ ಬಾಬಾ ಕೇದಾರನ ಆರತಿ ಮತ್ತು ಭೋಗ್ ಪ್ರಸಾದ ವ್ಯವಸ್ಥೆಗಳು ಪ್ರಾರಂಭವಾಗುತ್ತವೆ.
ಕೇದಾರನಾಥ ಪಂಚಮುಖಿ ಡೋಲಿ: ಮೇ 9 ರಂದು ವಿಶ್ವ ಪ್ರಸಿದ್ಧ 11 ನೇ ಜ್ಯೋತಿರ್ಲಿಂಗವಾದ ಭಗವಾನ್ ಕೇದಾರನಾಥನ ಚಲಿಸಬಲ್ಲ ವಿಗ್ರಹವಾದ ಪಂಚಮುಖಿ ಡೋಲಿ ಕೇದಾರನಾಥ ಧಾಮವನ್ನು ತಲುಪಿತು. ಅಲ್ಲಿ ಭಕ್ತರು 'ಓಂ ನಮಃ ಶಿವಾಯ' ಮತ್ತು 'ಜೈ ಬಾಬಾ ಕೇದಾರ' ಘೋಷಣೆಗಳೊಂದಿಗೆ ಡೋಲಿಯನ್ನು ಸ್ವಾಗತಿಸಿದರು. ಈ ವೇಳೆ ಸೇನೆಯ 6 ಗ್ರೆನೇಡಿಯರ್ ರೆಜಿಮೆಂಟ್‌ನ ಬ್ಯಾಂಡ್‌ನ ಭಕ್ತಿ ಗೀತೆಯೊಂದಿಗೆ ಡೋಲಿಯನ್ನು ಸ್ವಾಗತಿಸಲಾಯಿತು. ಬಾಬಾ ಕೇದಾರರ ಸಂಚಾರ ಮೂರ್ತಿ ಪಂಚಮುಖಿ ಡೋಲಿ ನಾಲ್ಕು ದಿನಗಳ ಕಾಲ್ನಡಿಗೆಯ ಬಳಿಕ ಗುರುವಾರ ಮಧ್ಯಾಹ್ನ 3ಕ್ಕೆ ಕೇದಾರನಾಥ ಧಾಮ ತಲುಪಿತು.
ಧಾಮ ತಲುಪಿದ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಮಹಾರಾಜ್: ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಮಹಾರಾಜ್ ಅವರು ಬದರಿಕೇದಾರಕ್ಕೆ ನಾಲ್ಕು ದಿನಗಳ ಧಾರ್ಮಿಕ ಯಾತ್ರೆಯ ಮೊದಲ ದಿನ ಕೇದಾರನಾಥ ಧಾಮ ತಲುಪಿದರು. ಕೇದಾರ ಸಭಾದ ಅರ್ಚಕರು ಮತ್ತು ಜ್ಯೋತಿರ್ಮಠದ ಪ್ರಭಾರಿ ಮುಕುಂದಾನಂದ ಬ್ರಹ್ಮಚಾರಿ ಸ್ವಾಮಿ ಅವಿಮುಕ್ತೇಶ್ವರಾನಂದರನ್ನು ಸ್ವಾಗತಿಸಿದರು. ಸ್ವಾಮಿ ಅವಿಮುಕ್ತೇಶ್ವರಾನಂದರು ಕೇದಾರನಾಥ ದೇವಾಲಯದ ಬಾಗಿಲು ತೆರೆಯುವುದನ್ನು ವೀಕ್ಷಿಸಿದರು. ಭಗವಾನ್ ಕೇದಾರನಾಥನ ದರ್ಶನದ ನಂತರ ಅವರು ಬದರಿನಾಥ ಧಾಮಕ್ಕೆ ತೆರಳುತ್ತಾರೆ. ಬದರಿನಾಥ ಧಾಮದ ಬಾಗಿಲು ತೆರೆಯುವ ಸಂದರ್ಭದಲ್ಲಿ ಅವರು ಸಹ ಉಪಸ್ಥಿತರಿರುತ್ತಾರೆ.
ದೇವರ ದರ್ಶನ ಪಡೆದ ಸಿಎಂ ಧಾಮಿ: ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ದೇವಸ್ಥಾನದ ಬಾಗಿಲು ತೆರೆಯುವ ಸಂದರ್ಭದಲ್ಲಿ ಕೇದಾರನಾಥ ಧಾಮ ತಲುಪಿದರು. ಬಳಿಕ ಸಿಎಂ ಧಾಮಿ ಬಾಬಾ ಕೇದಾರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಭಕ್ತರಿಗೆ ಅನುಕೂಲವಾಗುವಂತೆ ಮಾಡಲಾಗಿರುವ ಸಿದ್ಧತೆಗಳ ಕುರಿತು ಸ್ಥಳ ಪರಿಶೀಲನೆ ನಡೆಸಿದರು.
ಪ್ಲಾಸ್ಟಿಕ್ ತ್ಯಾಜ್ಯ ಸ್ವಚ್ಛಗೊಳಿದ ಡಿಎಂ: ಡಿಎಂ ಸೌರಭ್ ಗಹರ್ವಾರ್ ಅವರು, ಪ್ಲಾಸ್ಟಿಕ್ ತ್ಯಾಜ್ಯವನ್ನು ಸ್ವಚ್ಛಗೊಳಿಸುವ ಮೂಲಕ ಉತ್ತಮ ಸಂದೇಶ ಸಾರಿದರು. ರುದ್ರಪ್ರಯಾಗ ಡಿಎಂ ಸೌರಭ್ ಗಹರ್ವಾರ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ವಿಶಾಖ ಭಾದನೆ ಅವರು, ಬಾಗಿಲು ತೆರೆಯುವ ಮೊದಲು ಕೇದಾರನಾಥಕ್ಕೆ ತಲುಪಿ ಪ್ರಯಾಣದ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಡಿಎಂ ನೇತೃತ್ವದಲ್ಲಿ ಕೇದಾರಪುರಿಯಲ್ಲಿ ಮಂದಾಕಿನಿ ಮತ್ತು ಸರಸ್ವತಿ ನದಿ ಸೇರಿದಂತೆ ಘಾಟ್‌ಗಳಲ್ಲಿ ವಿಶೇಷ ಸ್ವಚ್ಛತಾ ಅಭಿಯಾನವನ್ನು ನಡೆಸಲಾಯಿತು.
ಡಿಎಂ ಸೌರಭ್ ಗಹರ್ವಾರ್ ಅವರು, ಕೇದಾರಪುರಿ ತಲುಪಿದ ತಕ್ಷಣ ಪ್ರಯಾಣದ ವ್ಯವಸ್ಥೆಗಳನ್ನು ಪರಿಶೀಲಿಸಲು ಪ್ರಾರಂಭಿಸಿದರು. ಹೆಲಿಪ್ಯಾಡ್, ಮುಖ್ಯರಸ್ತೆ, ಆಸ್ತಾಪಥ, ಅತಿಥಿ ಗೃಹ, ಮಂದಾಕಿನಿ-ಸರಸ್ವತಿ ಘಾಟ್, ಕೇದಾರನಾಥ ದೇವಾಲಯದ ಸಂಕೀರ್ಣ, ಶಿವ ಉದ್ಯಾನವನ, ಆಸ್ಪತ್ರೆ ಮತ್ತು ಇತರ ನಿರ್ಮಾಣ ಕಾಮಗಾರಿಗಳು ಮತ್ತು ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಯಾತ್ರೆಯ ಮಾರ್ಗದಲ್ಲಿ ಸ್ವಚ್ಛತೆಯ ಬಗ್ಗೆ ವಿಶೇಷ ಕಾಳಜಿ ವಹಿಸುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಿ ನಿರಂತರ ಸ್ವಚ್ಛತೆ ಕೈಗೊಳ್ಳುವಂತೆ ಸೂಚಿಸಿದರು.
ಯಶಸ್ವಿ ಪ್ರಯಾಣಕ್ಕಾಗಿ ಯಾತ್ರಾ ಮಾರ್ಗ ವಿಂಗಡಣೆ: ಈ ಬಾರಿ ಯಶಸ್ವಿ ಪ್ರಯಾಣಕ್ಕಾಗಿ ಜಿಲ್ಲಾ ಕೇಂದ್ರದಿಂದ ಸೋನಪ್ರಯಾಗದವರೆಗೆ ಯಾತ್ರಾ ಮಾರ್ಗವನ್ನು 2 ಸೂಪರ್ ಜೋನ್, 3 ವಲಯ ಮತ್ತು 11 ಸೆಕ್ಟರ್‌ಗಳಾಗಿ ವಿಂಗಡಿಸಲಾಗಿದೆ. ಚಾರ್ಧಾಮ್ ಯಾತ್ರೆಗೆ ಸಂಬಂಧಿಸಿದಂತೆ, ಪೊಲೀಸ್ ಅಧೀಕ್ಷಕ ವಿಶಾಖ ಅಶೋಕ್ ಭಡಾನೆ ಅವರು ಸಂಚಾರ ವ್ಯವಸ್ಥೆಯನ್ನು ನಿರ್ವಹಿಸಲು ಸೂಚನೆಗಳನ್ನು ನೀಡಿದರು. ಎಲ್ಲಾ ಇಲಾಖೆಗಳೊಂದಿಗೆ ಪರಸ್ಪರ ಸಮನ್ವಯ ಸಾಧಿಸಿ ಯಾತ್ರೆಯನ್ನು ಯಶಸ್ವಿಯಾಗಿ ನಡೆಸುವಂತೆ ಪೊಲೀಸ್ ಸಿಬ್ಬಂದಿಗೆ ಎಸ್ಪಿ ಭಡಾನೆ ತಿಳಿಸಿದರು.