ಶ್ರೀನಗರ: ರಷ್ಯಾ-ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಕಾಶ್ಮೀರಿ ವ್ಯಕ್ತಿಯೊಬ್ಬ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಇದರಿಂದ ಆತಂಕಕ್ಕೊಳಗಾದ ಅವರ ಕುಟುಂಬಸ್ಥರು ಕೇಂದ್ರ ಸರ್ಕಾರದ ಮೊರೆ ಹೋಗಿದ್ದಾರೆ. ಪುಲ್ವಾಮಾ ಜಿಲ್ಲೆಯ ತ್ರಾಲ್‌ನ ಪೋಶ್ವಾನ್ ಗ್ರಾಮದ ಆಜಾದ್ ಯೂಸುಫ್ ಕುಮಾರ್ ರಷ್ಯಾದ ಗಡಿಯಲ್ಲಿ ಹತ್ತಾರು ಇತರ ದೇಶವಾಸಿಗಳೊಂದಿಗೆ ಇದ್ದಾರೆ.
ಯೂಸುಫ್ ನಾಲ್ಕು ತಿಂಗಳ ಗಂಡು ಮಗುವಿನ ತಂದೆ. ಅವರು ಯಾವುದೇ ಸಂಬಂಧವಿಲ್ಲದ ಇದೀಗ ಯುದ್ಧದಲ್ಲಿ ಹೋರಾಡುತ್ತಿದ್ದಾರೆ. ಬಾಬಾ ವ್ಲಾಗ್ಸ್ ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿರುವ ಮುಂಬೈನ ಯೂಟ್ಯೂಬರ್ ಫೈಸಲ್ ಖಾನ್ ಎಂಬವರು ದುಬೈನಲ್ಲಿ ಉದ್ಯೋಗಕ್ಕಾಗಿ ಆಜಾದ್ ಕುಟುಂಬಕ್ಕೆ ಆಮಿಷ ಒಡ್ಡಿದ್ದರಂತೆ. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಆಜಾದ್ ತನ್ನ ಕುಟುಂಬಕ್ಕೆ ದುಬೈನಲ್ಲಿ ಉದ್ಯೋಗಾವಕಾಶದ ಬಗ್ಗೆ ತಿಳಿಸಿದ್ದರು. ದುಬೈನಲ್ಲಿ ಉದ್ಯೋಗ ಇರುವುದಕ್ಕೆ ಕುಟುಂಬಸ್ಥರು ಸಹ ಒಪ್ಪಿಗೆ ಸೂಚಿಸಿದ್ದರು. ಆ ಬಳಿಕ ಆಜಾದ್ ದುಬೈಗೆ ಪ್ರಯಾಣ ಬೆಳೆಸಿದ್ದರು ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ಸಹೋದರ ಸಜಾದ್ ಅಹ್ಮದ್ ಕುಮಾರ್ ಈ ಕುರಿತು ಪ್ರತಿಕ್ರಿಯಿಸಿ, "ನಮ್ಮ ಸಹೋದರ ಆಜಾದ್ ಕಳೆದ ವರ್ಷ ಡಿಸೆಂಬರ್‌ನಲ್ಲಿ ಪ್ರಯಾಣ ಬೆಳೆಸಿದ್ದರು. ಡಿಸೆಂಬರ್ 14ರಂದು ಅವರು ನಮ್ಮನ್ನು ಸಂಪರ್ಕಿಸಿ, ದುಬೈನಲ್ಲಿದ್ದೇನೆ ಎಂದಿದ್ದರು. ಆ ಬಳಿಕ ರಷ್ಯಾದಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅವರು ಅಲ್ಲಿಗೆ ಪ್ರಯಾಣ ಬೆಳೆಸುತ್ತಿದ್ದಾರೆ ಎಂದು ನಮಗೆ ಹೇಳಿರಲಿಲ್ಲ. ಒಂದು ವೇಳೆ ಹೇಳಿದ್ದರೆ ನಾವು ರಷ್ಯಾಗೆ ತೆರಳದಂತೆ ಹೇಳುತ್ತಿದ್ದೆವು" ಎಂದು 'ಈಟಿವಿ ಭಾರತ್'ಗೆ ತಿಳಿಸಿದರು.
"ಕೆಲವು ದಿನಗಳ ಹಿಂದೆ ಆಜಾದ್ ಪಾದಕ್ಕೆ ಗುಂಡೇಟು ಬಿದ್ದಿದೆ. ಉಕ್ರೇನ್ ಸೇನೆ ಗುಂಡು ಹಾರಿಸಿದ್ದರಿಂದ ಗಾಯಗೊಂಡಿದ್ದೇನೆ ಎಂದು ನಮಗೆ ತಿಳಿಸಿದ್ದರು. ಆಜಾದ್ ಮತ್ತು ಇತರ ಭಾರತೀಯರು ರಷ್ಯಾ ಮತ್ತು ಉಕ್ರೇನ್ ಗಡಿಯಲ್ಲಿ ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ" ಎಂದು ಸಜಾದ್ ಹೇಳಿದರು.
"ಯುದ್ಧಪೀಡಿತ ದೇಶದಲ್ಲಿ ಸಿಲುಕಿರುವ ಮಗನಿಗಾಗಿ ಸಹಾಯ ಮಾಡುವಂತೆ ಆಜಾದ್ ಕುಟುಂಬವು ಭಾರತ ಸರ್ಕಾರ ಮತ್ತು ವಿದೇಶಾಂಗ ಸಚಿವರನ್ನು ಒತ್ತಾಯಿಸಿದೆ. ರಷ್ಯಾ ಎಲ್ಲಿದೆ ಎಂದು ನನಗೆ ತಿಳಿದಿಲ್ಲ. ನಾನು ಎಂದಿಗೂ ಆ ಹೆಸರು ಕೇಳಿಲ್ಲ. ಆ ದೇಶಕ್ಕೂ ನನ್ನ ಮಗನಿಗೂ ಏನು ಸಂಬಂಧ?. ಮಗನನ್ನು ಮನೆಗೆ ಹಿಂದಿರುಗಿಸಲು ಸಹಾಯ ಮಾಡುವಂತೆ ನಾನು ಪ್ರಧಾನಿ ಮೋದಿ ಅವರಿಗೆ ಮನವಿ ಮಾಡುತ್ತೇನೆ" ಎಂದು ಆಜಾದ್ ತಾಯಿ ರಾಜಾ ತಿಳಿಸಿದರು.
ಪ್ರಕರಣದ ಸತ್ಯಾಸತ್ಯತೆ ತಿಳಿಯಲು ಸ್ಥಳೀಯ ಪೊಲೀಸ್ ಅಧಿಕಾರಿಗಳು ಆಜಾದ್ ಕುಟುಂಬವನ್ನು ಸಂಪರ್ಕಿಸಿದ್ದಾರೆ. ಪೊಲೀಸರು ಪುಲ್ವಾಮಾ ಜಿಲ್ಲೆಯ ಪೊಲೀಸ್ ಅಧಿಕಾರಿಗಳನ್ನು ಭೇಟಿಯಾಗಲು ತಿಳಿಸಿದ್ದಾರೆ. "ಆಜಾದ್ ಕುಮಾರ್ ಕೆಲಸಕ್ಕಾಗಿ ರಷ್ಯಾಕ್ಕೆ ತೆರಳಿದ್ದಾರೆ ಎಂಬ ಬಗ್ಗೆ ನಮಗೆ ಯಾವುದೇ ಮಾಹಿತಿ ಇರಲಿಲ್ಲ. ಈಗ ಸರ್ಕಾರಕ್ಕೆ ಪ್ರಕರಣವನ್ನು ತಿಳಿಸುವ ಅಧಿಕಾರಿಗಳನ್ನು ಭೇಟಿ ಮಾಡುವಂತೆ ಕುಟುಂಬಕ್ಕೆ ತಿಳಿಸಿದ್ದೇವೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಜಮ್ಮು-ಕಾಶ್ಮೀರ ಸರ್ಕಾರದ ಹಿರಿಯ ಅಧಿಕಾರಿಗಳು ರಷ್ಯಾದಲ್ಲಿ ಸಿಲುಕಿರುವ ಇಬ್ಬರು ಕಾಶ್ಮೀರಿಗಳ ಸಮಸ್ಯೆಯ ಬಗ್ಗೆ ಪ್ರತಿಕ್ರಿಯಿಸಲಿಲ್ಲ. ಅಲ್ಲದೆ, ಕುಪ್ವಾರಾ ಜಿಲ್ಲೆಯ ಕರ್ನಾಹ್‌ನ ಹಂಜಿನಾರ್ ಗ್ರಾಮದ ಜಹೂರ್ ಅಹ್ಮದ್ ಎಂಬ ಮತ್ತೊಬ್ಬ ಯುವಕ ಆಜಾದ್ನಂತೆಯೇ ಆತ ಸಹ ಬಾಬಾ ವ್ಲಾಗ್‌ಗಳಿಂದ ಆಮಿಷಕ್ಕೆ ಒಳಗಾಗಿ ರಷ್ಯಾದಲ್ಲಿ ಸಿಲುಕಿಕೊಂಡಿದ್ದಾನೆ. ಗುಜರಾತ್, ಕರ್ನಾಟಕ ಸೇರಿದಂತೆ ಇತರ ರಾಜ್ಯಗಳ ಅನೇಕ ಭಾರತೀಯ ಯುವಕರೂ ರಷ್ಯಾದ ಸೈನ್ಯಕ್ಕೆ ಭದ್ರತಾ ಸಹಾಯಕರಾಗಿ ನೇಮಕಗೊಂಡಿದ್ದಾರೆ. ರಷ್ಯಾ-ಉಕ್ರೇನ್ ಗಡಿಯಲ್ಲಿ ಉಕ್ರೇನ್ ಸೇನೆಯ ವಿರುದ್ಧ ಹೋರಾಡಲು ಒತ್ತಾಯಿಸಲಾಗುತ್ತಿದೆ ಎಂದು ಮಾಧ್ಯಮ ವರದಿಗಳು ಉಲ್ಲೇಖಿಸಿವೆ.
ರಷ್ಯಾ ಸರ್ಕಾರವು ಅವರ ಪಾಸ್‌ಪೋರ್ಟ್ ಮತ್ತು ವೀಸಾ ಕಸಿದುಕೊಂಡಿದೆ. ಹೀಗಾಗಿ ಅವರು ಮನೆಗೆ ಮರಳಲು ಸಾಧ್ಯವಾಗುತ್ತಿಲ್ಲ ಎಂದು ಕಾರ್ಮಿಕರು ಹೇಳಿದ್ದಾರೆ. ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಸಂಸದ ಅಸಾದುದ್ದೀನ್ ಓವೈಸಿ, ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರಿಗೆ ಜನವರಿ 25ರಂದು ಈ ಭಾರತೀಯರನ್ನು ವಾಪಾಸ್ ಕರೆತರುವಂತೆ ಪತ್ರ ಬರೆದಿದ್ದರು.
ಇದನ್ನೂ ಓದಿ: 'ನಾವು ಭಾರತವನ್ನು ಜಾಗತಿಕ ರಫ್ತು ಕೇಂದ್ರವಾಗಿ ಪರಿವರ್ತಿಸುತ್ತೇವೆ': ಭಾರತ್ ಟೆಕ್ಸ್ 2024ನಲ್ಲಿ ಪ್ರಧಾನಿ ಮೋದಿ