ಕಾರಂಜಿ (ಮಹಾರಾಷ್ಟ್ರ): ಪ್ರೀತಿ-ಪ್ರೇಮ ಒಂದು ಸುಮಧುರ ಭಾವ. ಭಾವಿಸಿದವರಿಗೆ, ಅನುಭವಿಸಿದವರಿಗೇನೇ ಗೊತ್ತು ಪ್ರೇಮ ಪರಿ ಏನು ಅನ್ನೋದು. ಫೆಬ್ರವರಿ 14 - ವ್ಯಾಲಂಟೈನ್ಸ್ ಡೇ. ವಿಶ್ವಾದ್ಯಂತ ಹಲವೆಡೆ, ಹಲವರು ತಮ್ಮದೇ ಆದ ರೀತಿಯಲ್ಲಿ ಪ್ರೇಮ ದಿನವನ್ನು ಆಚರಿಸಿ ಸಂಭ್ರಮಿಸಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಪ್ರೀತಿಪಾತ್ರರೊಂದಿಗಿನ ಪ್ರೇಮಭರಿತ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಇದೀಗ, ಪ್ರೇಮ ವಿವಾಹಗಳಿಗೆ ಹೆಸರುವಾಸಿಯಾಗಿರುವ ಮಹಾರಾಷ್ಟ್ರದ ಗ್ರಾಮವೊಂದು ಗಮನ ಸೆಳೆದಿದೆ.
ಚಂದ್ರಾಪುರದ ಕಾರಂಜಿ ಗ್ರಾಮ ಪ್ರೇಮ ವಿವಾಹಗಳಿಗೆ ಹೆಸರುವಾಸಿಯಾಗಿದೆ. ಕಾರಂಜಿ ಗ್ರಾಮದಲ್ಲಿ ಕಳೆದ ನಾಲ್ಕು ದಶಕಗಳಲ್ಲಿ 200ಕ್ಕೂ ಹೆಚ್ಚು ಪ್ರೇಮ ವಿವಾಹಗಳು ನಡೆದಿವೆ. ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಜಯ್ ವಡೆತ್ತಿವಾರ್ ಕೂಡ ಇದೇ ಗ್ರಾಮದ ನಿವಾಸಿ. ಅವರದ್ದೂ ಕೂಡ ಪ್ರೇಮ ವಿವಾಹ ಎನ್ನುತ್ತಾರೆ ಗ್ರಾಮಸ್ಥರು. 11 ಸದಸ್ಯ ಬಲದ ಗ್ರಾ.ಪಂ.ನಲ್ಲಿ ಸರ್ಪಂಚ್, ಉಪ ಸರ್ಪಂಚ್ ಸೇರಿದಂತೆ ಆರು ಮಂದಿ ಪ್ರೇಮ ವಿವಾಹವಾಗಿದ್ದಾರೆ.
ನಾವು ಅದೆಷ್ಟೇ ಆಧುನಿಕತೆಗೆ ಒಗ್ಗಿಕೊಂಡರೂ ಕೂಡ ಹಲವೆಡೆ ಇಂದಿಗೂ ಪ್ರೇಮ ವಿವಾಹಗಳಿಗೆ ಸಾಮಾಜಿಕ ಮನ್ನಣೆ ಸಿಗುತ್ತಿಲ್ಲ. ಹಾಗಾಗಿಯೇ ಮರ್ಯಾದಾ ಹತ್ಯೆ ವಿಚಾರ ಇಂದಿಗೂ ಜೀವಂತವಾಗಿದೆ. ಆದ್ರೆ ಚಂದ್ರಾಪುರ ಜಿಲ್ಲೆಯ ಗೊಂಡಪಿಂಪ್ರಿ ತಾಲೂಕಿನ ಕಾರಂಜಿ ಗ್ರಾಮವು ಇದಕ್ಕೆ ತದ್ವಿರುದ್ಧವಾಗಿದೆ. ಕಳೆದ 40 ವರ್ಷಗಳಲ್ಲಿ ಈ ಗ್ರಾಮದಲ್ಲಿ 200ಕ್ಕೂ ಹೆಚ್ಚು ಪ್ರೇಮ ವಿವಾಹಗಳು ನಡೆದಿವೆ. ಮೊದಲು ಈ ಗ್ರಾಮ ಅಪರಾಧ ಪ್ರಕರಣಗಳಿಂದ ಕುಖ್ಯಾತಿ ಪಡೆದುಕೊಂಡಿತ್ತು. ಇದೀಗ ಪ್ರೀತಿಗೆ ಹೆಸರುವಾಸಿಯಾಗಿದೆ.
ಪ್ರೇಮವಿವಾಹದಲ್ಲಿ ಹಲವು ಸವಾಲುಗಳು ಎದುರಾಗುತ್ತವೆ. ಆದರೆ, ಪ್ರೀತಿ ಮೂಲಕ ಪ್ರೇಮವಿವಾಹದ ಸಮಸ್ಯೆಗಳನ್ನು ಬಗೆಹರಿಸಿದ್ದಾರೆ. ಈ ಹಿನ್ನೆಲೆ, ಸಮಾಜ, ಗುಂಪು ಅಥವಾ ಕುಟುಂಬಗಳಲ್ಲಿ ಯಾವುದೇ ತರನಾದ ಉದ್ವಿಗ್ನತೆ ಉದ್ಭವಿಸಲಿಲ್ಲ. ಇದರಿಂದ ಗ್ರಾಮದಲ್ಲಿ ಸದಾ ಶಾಂತಿ, ಸುವ್ಯವಸ್ಥೆ ಹಾಗೂ ಸಂತಸದ ವಾತಾವರಣವಿದೆ.
ಒಂದೆಡೆ ಪ್ರೇಮವಿವಾಹಗಳಿಗೆ ಸಾಮಾಜಿಕ ಮನ್ನಣೆ ಸಿಗುತ್ತಿಲ್ಲ, ಇನ್ನೊಂದೆಡೆ ಪ್ರೇಮವಿವಾಹಗಳ ಸಂಖ್ಯೆ ಹೆಚ್ಚುತ್ತಿದೆ. ಈ ಗ್ರಾಮವು ಚಂದ್ರಾಪುರದಿಂದ 50 ಕಿ.ಮೀ ದೂರದಲ್ಲಿದೆ. ಕಳೆದ 4 ದಶಕಗಳಲ್ಲಿ 200ಕ್ಕೂ ಹೆಚ್ಚು ಜೋಡಿಗಳ ಪ್ರೇಮ ವಿವಾಹವಾಗಿವೆ. ಈ ಪೈಕಿ ಹೆಚ್ಚಿನವು ಅಂತರ್ಜಾತಿ ವಿವಾಹಗಳು.
ಇದನ್ನೂ ಓದಿ: ಯಶ್ ರಾಧಿಕಾ ವ್ಯಾಲಂಟೈನ್ ಡೇ: ಅಭಿಮಾನಿಗಳ ಮನಮುಟ್ಟಿದ ಫ್ಯಾಮಿಲಿ ಫೋಟೋಗಳಿವು
ಈ ಗ್ರಾಮವು ಹಿಂದೆ ಅಪರಾಧ ಚಟುವಟಿಕೆಗಳಿಂದ ಗುರುತಿಸಿಕೊಂಡಿತ್ತು. ಆದರೆ ನಿಧಾನವಾಗಿ ಈ ಗ್ರಾಮ ಪ್ರೀತಿಯ ಹಾದಿ ಹಿಡಿಯಿತು. ಸದ್ಯ ಸಮಿತಿಗಳ ಮೂಲಕ ಗ್ರಾಮದಲ್ಲಿನ ಹಲವು ವಿವಾದಗಳನ್ನು ಬಗೆಹರಿಸಲಾಗಿದೆ. ಪ್ರೀತಿ ಇದ್ದರೆ, ಎರಡೂ ಕುಟುಂಬಸ್ಥರನ್ನು ಒಪ್ಪಿಸಬಹುದು. ಒಪ್ಪಿಗೆಯ ನಂತರ, ಮದುವೆಯನ್ನು ಗ್ರಾಮದ ದೇವಸ್ಥಾನ ಅಥವಾ ಗ್ರಾಮ ಪಂಚಾಯಿತಿಯಲ್ಲಿ ಮಾಡಲಾಗುತ್ತದೆ. ಇದು ಎರಡೂ ಕುಟುಂಬಗಳಿಗೆ ಸಹಾಯಕವಾಗುತ್ತದೆ.
ಇದನ್ನೂ ಓದಿ: ಎತ್ತ ಕಣ್ಣಾಯಿಸಿದರೂ ಹಿಮರಾಶಿ: ಹಿಮಪಾತಕ್ಕೆ ನಡುಗಿದ ಅಮೆರಿಕ ಜನತೆ
ಈ ಕುರಿತು ಸ್ಥಳೀಯರೋರ್ವರು ಮಾತನಾಡಿ, ವಿದ್ಯಾಭ್ಯಾಸದ ಸಂದರ್ಭ ಪಕ್ಕದ ಮನೆಯ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದೆ. ನಾವೀಗ ದಾಂಪತ್ಯ ಜೀವನ ನಡೆಸುತ್ತಿದ್ದೇವೆ. ಮದುವೆಯಾಗಿ 27 ವರ್ಷಗಳಾಗಿವೆ. ಇಬ್ಬರು ಮಕ್ಕಳಿದ್ದು, ಸಂತೋಷದಿಂದ ಜೀವನ ನಡೆಸುತ್ತಿದ್ದೇವೆ ಎಂದು ತಿಳಿಸಿದರು. ಗ್ರಾಮಪಂಚಾಯಿತಿ ಸದಸ್ಯರೋರ್ವರು ಮಾತನಾಡಿ, ನಾವು ಅಂತರ್ಜಾತಿ ಪ್ರೇಮ ವಿವಾಹ ಮಾಡಿಕೊಂಡಿದ್ದೇವೆ. 2011ರಿಂದ ನಾವು ನೆಮ್ಮದಿಯಿಂದ ಬದುಕುತ್ತಿದ್ದೇವೆ ಎಂದು ತಿಳಿಸಿದ್ದಾರೆ.