ಭೋಪಾಲ್: ಕಾಂಗ್ರೆಸ್ ಕಟ್ಟಾಳು, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರು ತಮ್ಮ ಕೆಲವು ಬೆಂಬಲಿಗರೊಂದಿಗೆ ಬಿಜೆಪಿ ಸೇರಲಿದ್ದಾರೆ ಎಂಬ ಊಹಾಪೋಹಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಮಾತೃ ಪಕ್ಷ ತೊರೆಯುವ ಎಲ್ಲ ಲಕ್ಷಣಗಳು ಕಾಣಿಸುತ್ತಿದೆ. ತಮ್ಮ ಪೂರ್ವ ನಿಯೋಜಿತ ಕಾರ್ಯಕ್ರಮಗಳನ್ನು ರದ್ದುಪಡಿಸಿದ್ದರಿಂದ ಹರಿದಾಡುತ್ತಿರುವ ವದಂತಿಗಳಿಗೆ ರೆಕ್ಕೆಪುಕ್ಕ ಬಂದಿವೆ. ದೆಹಲಿಯಲ್ಲಿ ಬಿಜೆಪಿಯ ರಾಷ್ಟ್ರೀಯ ಸಮಾವೇಶ ನಡೆಯುತ್ತಿದ್ದು, ಕಮಲ್ ನಾಥ್ ಅವರು ಛಿಂದ್ವಾರಾದಲ್ಲಿ ನಡೆಯಲಿರುವ ಸಮಾವೇಶ ಮತ್ತು ಫೆಬ್ರವರಿ 18 ರಂದು ತಮಿಯಾದಲ್ಲಿ ನಡೆಯಲಿರುವ ಸಮಾವೇಶವನ್ನು ರದ್ದುಪಡಿಸಿದ್ದಾರೆ ಎಂದು ಅವರ ಆಪ್ತ ಮೂಲಗಳು ಖಚಿತಪಡಿಸಿವೆ.
ಈ ವದಂತಿಗಳ ನಡುವೆ ಪುತ್ರ ನಕುಲ್ ನಾಥ್ ಜೊತೆಗೆ 10 ಮಂದಿ ಕಾಂಗ್ರೆಸ್ ಶಾಸಕರು ಮತ್ತು ಬೆಂಬಲಿಗರು ಯಾವಾಗ ಬೇಕಾದರೂ ಬಿಜೆಪಿ ಸೇರಬಹುದು ಎಂದು ಹೇಳಲಾಗುತ್ತಿದೆ. ''2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವಲ್ಲಿ ವಿಫಲರಾದ ಕಮಲ್ ನಾಥ್, ಒಂದು ವೇಳೆ ಬಿಜೆಪಿ ಸೇರಿದ್ದೇ ಆದಲ್ಲಿ ಏಕಾಂಗಿಯಾಗಿ ಹೋಗುವುದಿಲ್ಲ'' ಎಂದು ಹಿರಿಯ ಪತ್ರಕರ್ತ ಮತ್ತು ರಾಜಕೀಯ ವಿಶ್ಲೇಷಕ ಪ್ರಕಾಶ್ ಭಟ್ನಾಗರ್ ಭವಿಷ್ಯ ನುಡಿದಿದ್ದಾರೆ.
ಮಧ್ಯಪ್ರದೇಶದ ರಾಜ್ಯ ರಾಜಕೀಯ ವಲಯದಲ್ಲಿ ಹರಿದಾಡುತ್ತಿರುವ ಊಹಾಪೋಹಗಳಿಗೆ ಸಂಬಂಧಿಸಿದಂತೆ, ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಅವರು ಶುಕ್ರವಾರ ರಾತ್ರಿ ಕಮಲ್ ನಾಥ್ ಅವರೊಂದಿಗೆ ಮಾತನಾಡಿದ್ದಾರೆ. ''ನೆಹರು-ಗಾಂಧಿ ಕುಟುಂಬದೊಂದಿಗೆ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದ ವ್ಯಕ್ತಿಯಿಂದ ನಾವು ಇದನ್ನು ಹೇಗೆ ನಿರೀಕ್ಷಿಸಬಹುದು'' ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ''ನಾವು ಅಂತಹದನ್ನು ನಿರೀಕ್ಷಿಸಲೂಬಾರದು. ಅವರು ಸೋನಿಯಾ ಗಾಂಧಿ ಮತ್ತು ರಾಹುಲ್ ಅವರನ್ನು ಬಿಡುವುದಿಲ್ಲ ಎಂಬ ವಿಶ್ವಾಸ ಇದೆ. ಆ ವಿಚಾರವನ್ನು ಅವರು ಸಹ ವ್ಯಕ್ತಪಡಿಸಿದ್ದಾರೆ. ದೆಹಲಿಗೆ ತೆರಳುತ್ತಿಲ್ಲ, ಅವರು ತಮ್ಮ ಕುಟುಂಬದೊಂದಿಗೆ ಸ್ವಕ್ಷೇತ್ರ ಛಿಂದ್ವಾರಾದಲ್ಲಿದ್ದಾರೆ'' ಎಂದು ಹೇಳಿದ್ದಾರೆ.
ಇತ್ತೀಚೆಗಷ್ಟೇ ರಾಮಮಂದಿರ ಉದ್ಘಾಟನೆ ವಿಚಾರವಾಗಿ ತಮ್ಮದೇ ಕಾಂಗ್ರೆಸ್ ಪಕ್ಷವನ್ನು ಟೀಕಿಸಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದಕ್ಕೆ ಉತ್ತರ ಪ್ರದೇಶ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಯಿತು. ಆಗಿನಿಂದ ಕಮಲ್ ನಾಥ್ ಮತ್ತು ನಕುಲ್ ನಾಥ್ ಬಿಜೆಪಿ ಸೇರಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇನ್ನು ಅವರ ಪುತ್ರ ನಕುಲ್ ನಾಥ್ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಬಯೋದಿಂದ ಕಾಂಗ್ರೆಸ್ ಅನ್ನು ಕೈಬಿಟ್ಟಿದ್ದು ಊಹಾಪೋಹಗಳಿಗೆ ಮತ್ತಷ್ಟು ರೆಕ್ಕೆಪುಕ್ಕ ಬಂದಿವೆ. ಕಮಲ್ ನಾಥ್ ಇಂದು ದೆಹಲಿಗೆ ತೆರಳಲಿದ್ದಾರೆ. ಬಿಜೆಪಿ ನಾಯಕರೊಂದಿಗೆ ಅವರು ಸಭೆ ನಡೆಸಲಿದ್ದಾರೆ ಎಂಬ ಸುದ್ದಿ ಕೂಡ ಇದೆ.
ದೆಹಲಿಯಲ್ಲಿ ಕಮಲ್ ನಾಥ್: ಈ ವದಂತಿ ಬೆನ್ನಲ್ಲೇ ಕಮಲ್ ನಾಥ್ ಅವರು ಶನಿವಾರ ಮಧ್ಯಾಹ್ನ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲಿಯ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಕಮಲ್ ನಾಥ್, ಅಂತಹದ್ದೇನಾದರೂ ಇದ್ದರೆ, ನಾನು ಮೊದಲು ನಿಮಗೆ(ಮಾಧ್ಯಮದವರಿಗೆ) ತಿಳಿಸುತ್ತೇನೆ ಎಂದು ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸಾಧ್ಯತೆ: ಇತ್ತೀಚೆಗಷ್ಟೇ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಅವರು ಬಿಜೆಪಿಗೆ ಸೇರುವ ಮೂಲಕ ಶಾಕ್ ನೀಡಿದರು. ನಾಲ್ಕು ದಶಕಗಳ ಕಾಲ ಕಾಂಗ್ರೆಸ್‌ನೊಂದಿಗೆ ಸಂಬಂಧ ಹೊಂದಿದ್ದ ಚೌವಾಣ್ ಅವರು ಎಲ್ಲ ಪಕ್ಷದ ಹುದ್ದೆಗಳಿಗೆ ಮತ್ತು ಶಾಸಕ ಸ್ಥಾನಕ್ಕೆ ಫೆಬ್ರವರಿ 12 ರಂದು ರಾಜೀನಾಮೆ ನೀಡಿದರು. ಮರುದಿನವೇ, ಬಿಜೆಪಿ ಸೇರಿದರು. ಫೆಬ್ರವರಿ 15 ರಂದು ಅವರು ರಾಜ್ಯಸಭಾ ಚುನಾವಣೆಗೆ ನಾಮಪತ್ರ ಕೂಡ ಸಲ್ಲಿಸಿದರು. ಅಶೋಕ್ ಚೌವಾಣ್ ಅವರಿಗೂ ಮುನ್ನ ಮಹಾರಾಷ್ಟ್ರದ ಹಿರಿಯ ಕಾಂಗ್ರೆಸ್ ನಾಯಕರಾದ ಬಾಬಾ ಸಿದ್ದಿಕ್ ಮತ್ತು ಮಿಲಿಂದ್ ದಿಯೋರಾ ಅವರು ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದರು. ಇವರಿಗೂ ಮುನ್ನ ಹಿರಿಯ ಫೈರ್‌ಬ್ರಾಂಡ್ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ 2020 ರಲ್ಲಿ ಕಾಂಗ್ರೆಸ್ ತೊರೆದ ಬಿಜೆಪಿ ಸೇರಿದ್ದಾರೆ. ಅವರ ಬಳಿಕ ಹಲವು ಘಟನಾವಳಿಗಳು ಕಾಂಗ್ರೆಸ್ ತೊರೆಯುತ್ತಲೇ ಇದ್ದಾರೆ. ಈ ಬೆಳವಣಿಗೆಯಿಂದ ಮುಂಬರುವ ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಜಾರ್ಖಂಡ್ ಸಚಿವರ ಬದಲಿಗೆ ಪಟ್ಟು: ಬಲಪ್ರದರ್ಶನಕ್ಕೆ 12 ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ ಬರುವ ಸಾಧ್ಯತೆ