ಹುಬ್ಬಳ್ಳಿ: ಅತ್ತಿಗೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಮೈದುನನನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ. ನಾಸಿರ್ ಬಂಧಿತ ಆರೋಪಿ.
ಈ ಕುರಿತು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾತನಾಡಿ, ತನಗಿಂತ ಅತ್ತಿಗೆ ಹಾಗೂ ಅಣ್ಣ ಚೆನ್ನಾಗಿ ಬಾಳಿ ಬದುಕುತ್ತಿದ್ದಾರೆಂಬ ಮಾತ್ಸರ್ಯದಿಂದ ನಾಸಿರ್, ಕುಡಿದ ಮತ್ತಿನಲ್ಲಿ ಅತ್ತಿಗೆಯನ್ನು ಕೊಲೆ ಮಾಡಿ ಪರಾರಿಯಾಗಿದ್ದ. ಐವರು ಮಕ್ಕಳಿದ್ದರೂ ನಾಸಿರ್ ಅಣ್ಣ ಸಾಧಿಕ್ ಚೆನ್ನಾಗಿ ಜೀವನ ನಡೆಸುತ್ತಿದ್ದ. ಈ ವಿಚಾರ ಇಟ್ಟುಕೊಂಡು ನಾಸಿರ್ಗೆ ಪತ್ನಿ ಆಗಾಗ ಬೈಯುತ್ತಿದ್ದಳು ಎಂದರು.
ಪತ್ನಿ ತನಗೆ ಬೈಯಲು ಇವರೇ ಕಾರಣ ಎಂದು ಕುಪಿತಗೊಂಡಿದ್ದ ನಾಸಿರ್, ಕೊಲೆ ಮಾಡಲೆಂದು ಚಾಕು ತಂದು ಜಗಳ ಶುರು ಮಾಡಿದ್ದ. ಮೊದಲು ತನ್ನ ಸಹೋದರ ಸಾಧಿಕ್ ಮೇಲೆ ದಾಳಿ ಮಾಡಿದ್ದಾನೆ. ಅಡ್ಡ ಬಂದ ಅತ್ತಿಗೆ ಸಾಜೀದಾ ನಾಲಬಂದ ಕತ್ತಿಗೆ ಚಾಕುವಿನಿಂದ ಇರಿದಿದ್ದಾನೆ. ನಂತರ ಎದುರಿಗೆ ಸಿಕ್ಕವರ ಮೇಲೆ ಚಾಕುವಿನಿಂದ ದಾಳಿ ಮಾಡಿ ಪರಾರಿಯಾಗಿದ್ದಾನೆ ಎಂದು ತಿಳಿಸಿದರು.
ಕೊಲೆ ಮಾಡಿದ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದ ನಂತರ ಹಣಕ್ಕಾಗಿ ಮತ್ತೆ ಹುಬ್ಬಳ್ಳಿಗೆ ವಾಪಸ್ ಆಗಿದ್ದ ಖಚಿತ ಮಾಹಿತಿ ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಪುಂಡರ ಹೆಡೆಮುರಿ ಕಟ್ಟಲು ಮುಂದಾದ ಹು - ಧಾ ಪೊಲೀಸರು: ಮತ್ತೊಂದೆಡೆ, ಅವಳಿ ನಗರದಲ್ಲಿ ಪುಂಡ - ಪೋಕರಿಗಳಿಂದ ಯುವತಿಯರು, ಮಹಿಳೆಯರ ರಕ್ಷಣೆಗೆ ಪೊಲೀಸ್ ಇಲಾಖೆ ಮುಂದಾಗಿದೆ. ಒಟ್ಟು 17 ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯರು, ಮಕ್ಕಳು, ವಿದ್ಯಾರ್ಥಿನಿಯರಿಗೆ ಕಿರುಕುಳ ಕೊಟ್ಟ ಸುಮಾರು 536 ಜನರನ್ನು ಗುರುತಿಸಿದೆ.
ಅವಳಿನಗರದ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಕೊಲೆ, ಪೋಕ್ಸೋ, ರೇಪ್ ಪ್ರಕರಣದ 203 ಜನರ ಪರೇಡ್ ನಡೆಸಲಾಯಿತು. ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಹಾಗೂ ಕಾನೂನು ಸುವ್ಯಸ್ಥೆ ಡಿಸಿಪಿ ಮಹಾನಿಂಗ ನಂದಗಾವಿ, ರವೀಶ್ ಆರ್ ಹಾಗೂ ಎಸಿಪಿಗಳು ಆರೋಪಗಳನ್ನು ವಿಚಾರಣೆ ನಡೆಸಿದರು.
ಹುಬ್ಬಳ್ಳಿಯ ಹಳೇ ಸಿಎಆರ್ ಮೈದಾನದಲ್ಲಿ ನಡೆದ ಪರೇಡ್ಗೆ ಬಂದ ರೌಡಿಗಳ ಹಿನ್ನೆಲೆ ಪರಿಶೀಲನೆ ನಡೆಸಿದರು. ವಶಕ್ಕೆ ಪಡೆದವರ ಪೂರ್ವಾಪರ ವಿಚಾರಿಸಿ ಪುಂಡರಿಗೆ ಪೊಲೀಸ್ ಆಯುಕ್ತ ಶಶಿಕುಮಾರ್ ಖಡಕ್ ವಾರ್ನಿಂಗ್ ಕೊಟ್ಟರು. ಗಂಭೀರ ಪ್ರಕರಣಗಳ ಆರೋಪಿಗಳ ಮೇಲೆ ರೌಡಿಶೀಟರ್ ಓಪನ್ ಮಾಡುವುದಲ್ಲದೇ ಗಡಿಪಾರು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ವಿದ್ಯಾರ್ಥಿನಿಯರು ಇರುವ ಸ್ಥಳಗಳನ್ನು ಹಾಟ್ಸ್ಪಾಟ್ ಎಂದು ಗುರುತು ಮಾಡುತ್ತೇವೆ. ಕಾಲೇಜ್, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಮಾರ್ಕೆಟ್ ಹಾಟ್ಸ್ಪಾಟ್ಗಳಾಗಿವೆ. ಅವಳಿನಗರದ ಪ್ರತಿ ಠಾಣೆಗಳಲ್ಲೂ ಏಳೆಂಟು ಹಾಟ್ಸ್ಪಾಟ್ ಸಿದ್ಧ ಮಾಡಲಾಗಿದ್ದು, ಹೊಯ್ಸಳ ಬೀಟ್, ಇತರ ಬೀಟ್ಗಳನ್ನು ಹೆಚ್ಚಳ ಮಾಡಲಾಗುವುದು. ಹಳೆ ಹುಬ್ಬಳ್ಳಿ ವ್ಯಾಪ್ತಿಯಲ್ಲಿ ಪೋಕ್ಸೋ ಕಾಯ್ದೆಯಡಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಇಬ್ಬರು ಪುಂಡರನ್ನ ಗಡಿಪಾರು ಮಾಡಲು ಸಿದ್ಧತೆ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದರು.
ಇದನ್ನೂ ಓದಿ: ಉಡುಪಿ: ಎನ್ಕೌಂಟರ್ನಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡ ಹತ