ನವದೆಹಲಿ: ದೆಹಲಿ ಸರ್ಕಾರದ ಅಬಕಾರಿ ನೀತಿ ಹಗರಣದಲ್ಲಿ ತೆಲಂಗಾಣ ಮಾಜಿ ಸಿಎಂ ಕೆಸಿಆರ್ ಪುತ್ರಿ, ಎಂಎಲ್ಸಿ ಕವಿತಾ ಅವರ ಪಾತ್ರದ ಬಗ್ಗೆ ಕೇಂದ್ರೀಯ ತನಿಖಾ ದಳ(ಸಿಬಿಐ) ಗಂಭೀರ ಆರೋಪ ಮಾಡಿದೆ. ಆಮ್ ಆದ್ಮಿ ಪಕ್ಷಕ್ಕೆ 25 ಕೋಟಿ ರೂಪಾಯಿ ನೀಡುವಂತೆ ಉದ್ಯಮಿ ಶರತ್ಚಂದ್ರ ರೆಡ್ಡಿಗೆ ಬೆದರಿಕೆ ಹಾಕಿದ್ದರು. ಇಲ್ಲವಾದಲ್ಲಿ ಉದ್ಯಮ ನಷ್ಟದ ಎಚ್ಚರಿಕೆ ನೀಡಿದ್ದರು ಎಂದು ಕೋರ್ಟ್ಗೆ ಸಿಬಿಐ ಮಾಹಿತಿ ನೀಡಿದೆ.
ಮದ್ಯ ಹಗರಣದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಬಿಐ, ಕವಿತಾ ಅವರನ್ನು ಎರಡು ದಿನಗಳ ಹಿಂದಷ್ಟೇ ತನ್ನ ವಶಕ್ಕೆ ಪಡೆದಿದೆ. ಬಿಆರ್‌ಎಸ್ ನಾಯಕಿ ಮೇಲೆ ಹಲವು ಆರೋಪಗಳು ಕೇಳಿ ಬಂದಿದ್ದು, ಅದನ್ನು ತನಿಖಾ ಸಂಸ್ಥೆಯು ಕೋರ್ಟ್ಗೆ ಗಮನಕ್ಕೆ ತಂದಿದೆ. ಜೊತೆಗೆ ಕವಿತಾ ಅವರನ್ನು ತನ್ನ ಕಸ್ಟಡಿಗೆ ನೀಡಬೇಕು ಎಂದು ಕೋರಿದೆ.
ಸಿಬಿಐ ವಿಶೇಷ ನ್ಯಾಯಾಧೀಶರಾದ ಕಾವೇರಿ ಬವೇಜಾ ಅವರ ಮುಂದೆ ವಾದ ಮಂಡಿಸಿರುವ ತನಿಖಾಧಿಕಾರಿಗಳು, ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿ ಕವಿತಾ ಅವರ ಒತ್ತಾಯ ಮತ್ತು ಭರವಸೆಯ ಮೇರೆಗೆ ಎಸ್ಸಿ ರೆಡ್ಡಿ ರಾಷ್ಟ್ರ ರಾಜಧಾನಿಯಲ್ಲಿ ಮದ್ಯದ ವ್ಯವಹಾರ ನಡೆಸುತ್ತಿದ್ದರು. ದೆಹಲಿ ಸರ್ಕಾರದಲ್ಲಿ ತನಗೆ ಸಂಪರ್ಕವಿದೆ. ಹೊಸ ಅಬಕಾರಿ ನೀತಿಯ ಅಡಿ ದೆಹಲಿಯಲ್ಲಿ ಮದ್ಯದ ಪರವಾನಗಿ ಕೊಡಿಸುವುದಾಗಿ ರೆಡ್ಡಿಗೆ ಕವಿತಾ ಅವರು ಭರವಸೆ ನೀಡಿದ್ದರು.
ಇದಕ್ಕೆ ಪ್ರತಿಯಾಗಿ ಆಪ್ಗೆ ರೆಡ್ಡಿ 25 ಕೋಟಿ ರೂಪಾಯಿ ಸಗಟು ವ್ಯವಹಾರಕ್ಕೆ ಮತ್ತು ಚಿಲ್ಲರೆ ವ್ಯಾಪಾರಕ್ಕಾಗಿ 5 ಕೋಟಿ ಮುಂಗಡ ಹಣ ಪಾವತಿಸಬೇಕು ಎಂದು ಸೂಚಿಸಿದ್ದರು. ಉದ್ಯಮಿ ರೆಡ್ಡಿಯು ಕವಿತಾ ಅವರ ಆಪ್ತರಾದ ಅರುಣ್ ಆರ್. ಪಿಳ್ಳೈ ಮತ್ತು ಅಭಿಷೇಕ್ ಬೋಯಿನಪಲ್ಲಿ ಅವರಿಗೆ ಹಣ ಪಾವತಿಸಿದ್ದಾರೆ. ಈ ಇಬ್ಬರೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಪ್ರತಿನಿಧಿಯಾಗಿದ್ದ ವಿಜಯ್ ನಾಯರ್ ಅವರೊಂದಿಗೆ ಸಮನ್ವಯ ಸಾಧಿಸಿದ್ದಾರೆ ಎಂದು ಸಿಬಿಐ ತಿಳಿಸಿದೆ.
ಹೋಟೆಲ್ನಲ್ಲಿ ಡೀಲ್: ಹೊಸ ಅಬಕಾರಿ ನೀತಿಯಲ್ಲಿ ತಮ್ಮ ವ್ಯವಹಾರಕ್ಕೆ ಅನುಕೂಲವಾಗುವ ರೀತಿಯಲ್ಲಿ ನಿಯಮಗಳನ್ನು ರೂಪಿಸಲು ದೆಹಲಿಯ ಹೋಟೆಲ್ ಒಬೆರಾಯ್ನಲ್ಲಿ ಮಾತುಕತೆ ನಡೆದಿದೆ. 2021 ರ ಮಾರ್ಚ್ ಮತ್ತು ಮೇ ತಿಂಗಳಲ್ಲಿ ಈ ಸಭೆ ನಡೆದಿದ್ದವು. ಇದರಲ್ಲಿ ಅರುಣ್ ಆರ್ ಪಿಳ್ಳೈ, ಅಭಿಷೇಕ್ ಬೋನಪಲ್ಲಿ ಮತ್ತು ಬುಚ್ಚಿಬಾಬು ಗೋರಂಟ್ಲಾ ಅವರು ಭಾಗಿಯಾಗಿದ್ದರು. ಇವರೆಲ್ಲರೂ ಕವಿತಾ ಅವರ ಆಪ್ತರು ಎಂದು ಸಿಬಿಐ ಹೇಳಿದೆ.
ಇದನ್ನೂ ಓದಿ; ದೆಹಲಿ ಅಬಕಾರಿ ನೀತಿ ಹಗರಣ: ಇಡಿ ವಶದಲ್ಲಿದ್ದ ಬಿಆರ್‌ಎಸ್ ಎಂಎಲ್ಸಿ ಕವಿತಾ ಬಂಧಿಸಿದ ಸಿಬಿಐ - CBI Arrests K Kavitha