ನವದೆಹಲಿ: ಇಲ್ಲಿನ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟವು (ಜೆಎನ್‌ಯುಎಸ್‌ಯು) ಸುಮಾರು ಮೂರು ದಶಕಗಳ ನಂತರ ಎಡಪಕ್ಷ ಬೆಂಬಲಿತ ಮೊದಲ ದಲಿತ ಅಧ್ಯಕ್ಷರನ್ನು ಭಾನುವಾರ ಆಯ್ಕೆ ಮಾಡಿತು. ಯುನೈಟೆಡ್ ಲೆಫ್ಟ್ ಪ್ಯಾನೆಲ್ ಚುನಾವಣೆಯಲ್ಲಿ ಕ್ಲೀನ್ ಸ್ವೀಪ್ ಸಾಧಿಸಿದೆ. ಪ್ರತಿಸ್ಪರ್ಧಿ ಆರ್‌ಎಸ್‌ಎಸ್-ಸಂಯೋಜಿತ ಎಬಿವಿಪಿ ಸೋಲು ಅನುಭವಿಸಿತು.
ನಾಲ್ಕು ವರ್ಷಗಳ ವಿರಾಮದ ನಂತರ ನಡೆದ ಚುನಾವಣೆಯಲ್ಲಿ ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ನ (ಎಐಎಸ್‌ಎ) ಧನಂಜಯ್ 2,598 ಮತಗಳನ್ನು ಪಡೆಯುವ ಮೂಲಕ ಜೆಎನ್‌ಯುಎಸ್‌ಯು ಅಧ್ಯಕ್ಷ ಸ್ಥಾನಕ್ಕೇರಿದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ (ಎಬಿವಿಪಿ) ಉಮೇಶ್ ಸಿ.ಅಜ್ಮೀರಾ 1,676 ಮತಗಳನ್ನು ಗಳಿಸಿದರು.
ಧನಂಜಯ್ ಬಿಹಾರದ ಗಯಾ ಮೂಲದವರು. 1996-97ರಲ್ಲಿ ಚುನಾಯಿತರಾಗಿದ್ದ ಬಟ್ಟಿ ಲಾಲ್ ಬೈರ್ವಾ ಅವರ ನಂತರ ಇವರು ಎಡಪಕ್ಷದಿಂದ ಆಯ್ಕೆಯಾದ ಮೊದಲ ದಲಿತ ಅಧ್ಯಕ್ಷರಾಗಿದ್ದಾರೆ.
ಗೆಲುವಿನ ನಂತರ ಮಾತನಾಡಿದ ಧನಂಜಯ್, "ಈ ಗೆಲುವು ಜೆಎನ್‌ಯು ವಿದ್ಯಾರ್ಥಿಗಳು ದ್ವೇಷ ಮತ್ತು ಹಿಂಸಾಚಾರದ ರಾಜಕೀಯವನ್ನು ತಿರಸ್ಕರಿಸುವ ಜನಾಭಿಪ್ರಾಯ. ವಿದ್ಯಾರ್ಥಿಗಳು ಮತ್ತೊಮ್ಮೆ ನಮ್ಮ ಮೇಲೆ ವಿಶ್ವಾಸ ತೋರಿಸಿದ್ದಾರೆ. ನಾವು ಅವರ ಹಕ್ಕುಗಳಿಗಾಗಿ ಹೋರಾಟವನ್ನು ಮುಂದುವರಿಸುತ್ತೇವೆ. ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸಮಸ್ಯೆಗಳ ಮೇಲೆ ಕೆಲಸ ಮಾಡುತ್ತೇವೆ. ಕ್ಯಾಂಪಸ್‌ನಲ್ಲಿ ಮಹಿಳೆಯರ ಸುರಕ್ಷತೆ, ನಿಧಿ ಕಡಿತ, ವಿದ್ಯಾರ್ಥಿ ವೇತನ ಹೆಚ್ಚಳ, ಮೂಲಸೌಕರ್ಯ ಮತ್ತು ನೀರಿನ ಸಮಸ್ಯೆಗಳ ಪರಿಹಾರಕ್ಕೆ ವಿದ್ಯಾರ್ಥಿ ಒಕ್ಕೂಟ ಪ್ರಮುಖ ಆದ್ಯತೆ ನೀಡುತ್ತದೆ" ಎಂದು ತಿಳಿಸಿದರು.
'ಲಾಲ್ ಸಲಾಂ' ಮತ್ತು 'ಜೈ ಭೀಮ್' ಘೋಷಣೆಗಳ ನಡುವೆ ವಿಜೇತ ವಿದ್ಯಾರ್ಥಿಗಳನ್ನು ಅವರ ಬೆಂಬಲಿಗರು ಶ್ಲಾಘಿಸಿದರು. ಅಭ್ಯರ್ಥಿಗಳ ಗೆಲುವಿಗಾಗಿ ವಿದ್ಯಾರ್ಥಿಗಳು ಕೆಂಪು, ಬಿಳಿ ಮತ್ತು ನೀಲಿ ಬಾವುಟಗಳನ್ನು ಪ್ರದರ್ಶಿಸಿದರು. ಭಾರತೀಯ ವಿದ್ಯಾರ್ಥಿ ಒಕ್ಕೂಟದ (ಎಸ್‌ಎಫ್‌ಐ) ಅವಿಜಿತ್ ಘೋಷ್ ಅವರು ಎಬಿವಿಪಿಯ ದೀಪಿಕಾ ಶರ್ಮಾ ಅವರನ್ನು 927 ಮತಗಳಿಂದ ಸೋಲಿಸಿ ಉಪಾಧ್ಯಕ್ಷ ಸ್ಥಾನಕ್ಕೇರಿದ್ದಾರೆ. ಶರ್ಮಾ ಅವರು ಪಡೆದ 1,482 ಮತಗಳ ವಿರುದ್ಧ ಘೋಷ್ 2,409 ಮತಗಳನ್ನು ಪಡೆದರು.
ಎಡಪಕ್ಷಗಳ ಬೆಂಬಲಿತ ಬಿರ್ಸಾ ಅಂಬೇಡ್ಕರ್ ಫುಲೆ ವಿದ್ಯಾರ್ಥಿಗಳ ಸಂಘದ (ಬಾಪ್ಸಾ) ಅಭ್ಯರ್ಥಿ ಪ್ರಿಯಾಂಶಿ ಆರ್ಯ ಅವರು ಎಬಿವಿಪಿಯ ಅರ್ಜುನ್ ಆನಂದ್ ಅವರನ್ನು 926 ಮತಗಳಿಂದ ಸೋಲಿಸುವ ಮೂಲಕ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಆರ್ಯ 2,887 ಮತಗಳನ್ನು ಪಡೆದರೆ, ಆನಂದ್ 1961 ಮತಗಳನ್ನು ಪಡೆದರು.
ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಎಡಪಕ್ಷಗಳ ಮೊಹಮ್ಮದ್ ಸಾಜಿದ್ ಅವರು ಎಬಿವಿಪಿಯ ಗೋವಿಂದ ಡಾಂಗಿ ಅವರನ್ನು 508 ಮತಗಳಿಂದ ಸೋಲಿಸಿದರು. ಎಲ್ಲಾ ನಾಲ್ಕು ವಿಜೇತರಲ್ಲಿ ಇವರದು ಅತ್ಯಂತ ಕಡಿಮೆ ಅಂತರದ ಗೆಲುವು.
12 ವರ್ಷಗಳಲ್ಲೇ ಅತೀ ಹೆಚ್ಚು ಮತದಾನ: ಶುಕ್ರವಾರ ನಡೆದ ಚುನಾವಣೆಯಲ್ಲಿ ಕಳೆದ 12 ವರ್ಷಗಳಲ್ಲೇ ಅತೀ ಹೆಚ್ಚು (ಶೇ.73ರಷ್ಟು) ಮತದಾನವಾಗಿದೆ.
ಇದನ್ನೂ ಓದಿ: ಬಿಜೆಪಿ ಸೇರಿದ ಕೈಗಾರಿಕೋದ್ಯಮಿ ನವೀನ್ ಜಿಂದಾಲ್‌ಗೆ ಕುರುಕ್ಷೇತ್ರದಿಂದ ಬಿಜೆಪಿ ಟಿಕೆಟ್ - Naveen Jindal