ಹೈದರಾಬಾದ್ (ತೆಲಂಗಾಣ): ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಬಂಧನದ ಬಳಿಕ ರಾಜಕೀಯ ಪಲ್ಲಟಕ್ಕೆ ಕಾರಣವಾಗಿರುವ ಜಾರ್ಖಂಡ್ನಲ್ಲಿ ನಾಳೆ (ಸೋಮವಾರ) ವಿಶ್ವಾಸಮತಯಾಚನೆ ನಡೆಯಲಿದ್ದು, ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಚಂಪೈ ಸೊರೆನ್ ಅಗ್ನಿಪರೀಕ್ಷೆಯಲ್ಲಿ ಜಯಿಸಲಿದ್ದಾರಾ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರದ ಸಿಎಂ ಆಗಿ ಜಾರ್ಖಂಡ್ ಹುಲಿ ಎಂದೇ ಖ್ಯಾತಿಯಾಗಿರುವ ಚಂಪೈ ಸೊರೆನ್ ಆಯ್ಕೆಯಾಗಿದ್ದಾರೆ. ಫೆಬ್ರವರಿ 5 ರಂದು ವಿಧಾನಸಭೆಯಲ್ಲಿ ಅವರು ತಮ್ಮ ಶಾಸಕರಿಂದ ವಿಶ್ವಾಸ ಸಾಬೀತು ಮಾಡಲು ರಾಜ್ಯಪಾಲರು ಅವಕಾಶ ನೀಡಿದ್ದಾರೆ. ಅದರಂತೆ ಫೆಬ್ರವರಿ 5, 6 ರಂದು ಎರಡು ದಿನ ವಿಧಾನಸಭೆ ವಿಶೇಷ ಅಧಿವೇಶನ ಕರೆಯಲಾಗಿದೆ. ನಾಳೆ ಬೆಳಗ್ಗೆ 10 ಗಂಟೆಯಿಂದ ವಿಶ್ವಾಸ ಮತಯಾಚನೆ ನಡೆಯಲಿದೆ.
ಜಾರ್ಖಂಡ್ನತ್ತ ಶಾಸಕರು: ಚಂಪೈ ಸೊರೆನ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ, ವಿಶ್ವಾಸಮತ ಯಾಚನೆಗೂ ಮೊದಲು 'ಕುದುರೆ ವ್ಯಾಪಾರ' ತಡೆಯಲು ಜೆಎಂಎಂ ಮತ್ತು ಮೈತ್ರಿ ಕಾಂಗ್ರೆಸ್ ಶಾಸಕರನ್ನು ಹೈದರಾಬಾದ್ನ ರೆಸಾರ್ಟ್ಗೆ ಕರೆತರಲಾಗಿತ್ತು. ಮೂರು ದಿನಗಳಿಂದ ಇಲ್ಲಿಯೇ ಉಳಿದುಕೊಂಡಿದ್ದ ಶಾಸಕರು, ನಾಳೆ ಫ್ಲೋರ್ ಟೆಸ್ಟ್ ಕಾರಣ ಜಾರ್ಖಂಡ್ನತ್ತ ಮುಖ ಮಾಡಿದ್ದಾರೆ.
ಭಾನುವಾರ ಸಂಜೆ ಇಲ್ಲಿನ ರೆಸಾರ್ಟ್ನಿಂದ ಶಂಶಾಬಾದ್ ವಿಮಾನ ನಿಲ್ದಾಣಕ್ಕೆ ಎಲ್ಲ ಶಾಸಕರನ್ನು ಬಸ್ ಮೂಲಕ ಕರೆತರಲಾಗಿದೆ. ಶಾಸಕರನ್ನು ಇಂದೇ ಜಾರ್ಖಂಡ್ಗೆ ಕರೆದೊಯ್ಯುವ ಸಾಧ್ಯತೆ ಇದೆ ಎಂಬ ಮಾಹಿತಿ ಸಿಕ್ಕಿದೆ.
81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಯಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ 29 ಸ್ಥಾನಗಳನ್ನು ಹೊಂದಿದೆ. ಮಿತ್ರಪಕ್ಷ ಕಾಂಗ್ರೆಸ್ 17 ಮತ್ತು ಆರ್‌ಜೆಡಿ ಮತ್ತು ಸಿಪಿಐ (ಎಂಎಲ್) 1 ಸ್ಥಾನವನ್ನು ಹೊಂದಿದೆ. 43 ಶಾಸಕರ ಬೆಂಬಲವಿರುವ ಮೈತ್ರಿ ಸರ್ಕಾರವನ್ನು ಉರುಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ಪ್ರಣವ್ ಝಾ ಭಾನುವಾರ ಆರೋಪಿಸಿದ್ದಾರೆ.
ಭೂ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ನಡೆಸಿದ ಆರೋಪದ ಮೇಲೆ ಹೇಮಂತ್ ಸೊರೆನ್ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) 10 ಬಾರಿ ಸಮನ್ಸ್ ಜಾರಿ ಮಾಡಿತ್ತು. ಪ್ರತಿ ಬಾರಿಯೂ ವಿಚಾರಣೆಗೆ ಗೈರಾಗಿದ್ದ ಅವರನ್ನು ಜನವರಿ 31 ರಂದು ಇಡಿ 7 ಗಂಟೆ ವಿಚಾರಣೆಗೆ ಒಳಪಡಿಸಿದ ಬಳಿಕ ಬಂಧಿಸಿತು. ಇದರ ನಂತರ ಹೇಮಂತ್ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೂಡ ನೀಡಬೇಕಾಯಿತು.
ಇದನ್ನೂ ಓದಿ: ಜಾರ್ಖಂಡ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಚಂಪೈ ಸೊರೆನ್