ಲಖೀಂಪುರ ಖೇರಿ(ಉತ್ತರ ಪ್ರದೇಶ): ಯುವಕನೊಬ್ಬ ತನ್ನ ಮದುವೆ ಪ್ರಸ್ತಾಪ ತಿರಸ್ಕರಿಸಿದ ಗೆಳತಿಯ ಎರಡೂ ಕೆನ್ನೆಗಳ ಮೇಲೆ ಕಾದ ಕಬ್ಬಿಣದ ರಾಡ್‌ನಿಂದ ತನ್ನ ಹೆಸರು ಬರೆದು ವಿಕೃತಿ ಮೆರೆದ ಘಟನೆ ಇಲ್ಲಿನ ಲಖೀಂಪುರ ಕೇರಿ ಎಂಬಲ್ಲಿ ನಡೆದಿದೆ.
ಗೆಳತಿ ತನ್ನ ಹೆಸರನ್ನು ಜೀವನ ಪರ್ಯಂತ ಮರೆಯಬಾರದು ಎಂಬ ಕಾರಣಕ್ಕೆ ಆರೋಪಿ ಈ ದುಷ್ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ. ನನ್ನನ್ನು ಆಕೆ ಮದುವೆಯಾಗದಿದ್ದರೆ ಆಕೆಯನ್ನು ಬೇರೆಯವರು ಮದುವೆಯಾಗಲು ಬಿಡುವುದಿಲ್ಲ ಎಂದು ದುರುಳ ಬೆದರಿಕೆ ಹಾಕಿದ್ದಾನೆ. ಈ ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಬಾಲಕಿಯ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ರಕ್ಷಣೆಗೆ ಮನವಿ: ದುರುಳ ಯುವಕನಿಂದ ತನಗಾದ ದೌರ್ಜನ್ಯವನ್ನು ಬಾಲಕಿ ಪೊಲೀಸರಿಗೆ ವಿವರಿಸಿದ್ದಾಳೆ. ಜೊತೆಗೆ ತನಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾಳೆ. "ಆತ ಮದುವೆ ಪ್ರಸ್ತಾಪ ಮುಂದಿಟ್ಟ. ನಾನು ನಿರಾಕರಿಸಿದೆ. ಇದರಿಂದ ಕೊಪಗೊಂಡು ನನ್ನ ಕೈ ಹಿಡಿದು, ಕಾದ ಕಬ್ಬಿಣದಿಂದ ಕೆನ್ನೆಯ ಮೇಲೆ ಆತನ ಹೆಸರು ಬರೆದ. ನೋವಿನಿಂದ ಕಿರುಚುತ್ತಿದ್ದರೂ ಯಾರೂ ಕೂಡ ನನ್ನ ಸಹಾಯಕ್ಕೆ ಬರಲಿಲ್ಲ" ಎಂದು ವಿವರಿಸಿದ್ದಾಳೆ.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರತಿಕ್ರಿಯೆ: ಈ ಕುರಿತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪವನ್ ಕುಮಾರ್ ಗೌತಮ್ ಮಾತನಾಡಿ, "ಧಾರಾ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗೆಳತಿ ತನ್ನನ್ನು ಮದುವೆಯಾಗಲು ನಿರಾಕರಿಸಿದ್ದರಿಂದ ಕೋಪಗೊಂಡ ಯುವಕ ಕಬ್ಬಿಣದ ರಾಡ್ ಬಿಸಿ ಮಾಡಿ ಆಕೆಯ ಕೆನ್ನೆಯ ಮೇಲೆ ತನ್ನ ಹೆಸರಿನ ಇಂಗ್ಲಿಷ್ ಅಕ್ಷರಗಳನ್ನು ಬರೆದಿದ್ದಾನೆ. ಬಾಲಕಿಯ ದೂರಿನ ಮೇರೆಗೆ ಸಂಬಂಧಿತ ವಿವಿಧ ಐಪಿಸಿ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗೆ ಹುಡುಕಾಟ ನಡೆಯುತ್ತಿದೆ. ಆದಷ್ಟು ಬೇಗ ಬಂಧಿಸಲಾಗುವುದು'' ಎಂದರು.
ಇದನ್ನೂ ಓದಿ: ಕಾರ-ಬೈಕ್ ಮಧ್ಯೆ ಭೀಕರ ರಸ್ತೆ ಅಪಘಾತ, ಇಬ್ಬರು ಸಾವು - HORRIBLE ACCIDENT