ರಾಂಚಿ: ಜಾರ್ಖಂಡ್ ಗ್ರಾಜುಯೇಟ್ ಲೆವೆಲ್ ಕಂಬೈಂಡ್ ಸ್ಪರ್ಧಾತ್ಮಕ ಪರೀಕ್ಷೆಯನ್ನು (ಜೆಜಿಜಿಎಲ್ಸಿಸಿಇ) ಮುಕ್ತ ಮತ್ತು ನ್ಯಾಯ ಸಮ್ಮುತವಾಗಿ ನಡೆಸುವ ಉದ್ದೇಶದಿಂದ ಜಾರ್ಖಂಡ್ ಸರ್ಕಾರ ರಾಜ್ಯದಲ್ಲಿ ಸ್ಥಗಿತಗೊಳಿಸಿ ಆದೇಶ ಹೊರಡಿಸಿದೆ.
ಇಂದು ಮತ್ತು ನಾಳೆ (ಸೆಪ್ಟೆಂಬರ್ 21 ಮತ್ತು 22) ರಾಜ್ಯದಲ್ಲಿ ಈ ಪರೀಕ್ಷೆಗೆ ನಡೆಸುತ್ತಿದ್ದು, ಯಾವುದೇ ಅಕ್ರಮ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯದಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ. ಈ ಸಂಬಂಧ ಸೂಚನೆಯನ್ನು ನೀಡಲಾಗಿದೆ.
ಶನಿವಾರ ಮತ್ತು ಭಾನುವಾರ ಬೆಳಗ್ಗೆ 8 ರಿಂದ 1.30ರ ವರೆಗೆ ಮೊಬೈಲ್ ಇಂಟರ್ನೆಟ್ ಸೇವೆ ಸ್ಥಗಿತಗೊಂಡಿದೆ. ಪರೀಕ್ಷೆಯ ಸಮಯದಲ್ಲಿ ಯಾವುದೇ ಅವ್ಯವಹಾರ ನಡೆಯದಂತೆ ಕ್ರಮವಹಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಿದೆ.
ಈ ಕುರಿತು ಮಾತನಾಡಿರುವ ಮುಖ್ಯಮಂತ್ರಿ ಹೇಮಂತ್ ಸೊರೆನ್, ಪರೀಕ್ಷೆಯ ಸಿದ್ಧತೆ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಯಾವುದೇ ಪರಿಸ್ಥಿತಿಯಲ್ಲೂ ನಿರ್ಲಕ್ಷ್ಯವನ್ನು ಸಹಿಸಲು ಸಾಧ್ಯವಿಲ್ಲ, ಯಾರಾದರೂ ಪರೀಕ್ಷೆ ಸಮಯದಲ್ಲಿ ತಪ್ಪು ಎಸಗಲು ಪ್ರಯತ್ನಿಸಿದರೆ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಜಾರ್ಖಂಡ್ ಸಿಬ್ಬಂದಿ ನೇಮಕಾತಿ ಆಯೋಗ ರಾಜ್ಯದ 823 ಕೇಂದ್ರದಲ್ಲಿ ಈ ಪರೀಕ್ಷೆ ನಡೆಸಯತ್ತಿದ್ದು, ಈ ಪರೀಕ್ಷೆಗೆ 6.39 ಲಕ್ಷ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಜೆಎಸ್ಎಸ್ಸಿ ಅಧಿಕಾರಿಗಳು ತಿಳಿಸಿದ್ದಾರೆ.
ಮುಕ್ತ, ನ್ಯಾಯ ಸಮ್ಮತ ಮತ್ತು ಪಾರದರ್ಶಕವಾಗಿ ಪರೀಕ್ಷೆಯನ್ನು ನಡೆಸುವ ಉದ್ದೇಶದಿಂದ ಪರೀಕ್ಷಾ ಸಮಯದಲ್ಲಿ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಲಾಗಿದೆ. ಈ ಹಿಂದೆ ಇಂಟರ್‌ನೆಟ್, ವೈ-ಫೈ ಸಂಪರ್ಕವನ್ನು ಬಳಕೆ ಮಾಡಿಕೊಂಡು ಫೇಸ್‌ಬುಕ್, ವಾಟ್ಸಾಪ್, ಎಕ್ಸ್ , ಟೆಲಿಗ್ರಾಮ್ ಮತ್ತು ಯೂಟ್ಯೂಬ್‌ನಂತಹ ವಿವಿಧ ಮೊಬೈಲ್ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ಕೆಲವರು ಅಕ್ರಮ ಎಸಗಿದ್ದಿದ್ದು ಬೆಳಕಿಗೆ ಬಂದ ಹಿನ್ನೆಲೆ ಈ ಕ್ರಮಕ್ಕೆ ಮುಂದಾಗಲಾಗಿದೆ ಎಂದಿದ್ದಾರೆ.
ಪರೀಕ್ಷಾ ಪ್ರಕ್ರಿಯೆಯಲ್ಲಿ ಯಾವುದೇ ಲೋಪದೋಷ ಆಗದಂತೆ ನೋಡಿಕೊಳ್ಳಲಾಗುತ್ತಿದೆ. ನೇಮಕಾತಿ ಪ್ರಕ್ರಿಯೆಯ ಪಾರದರ್ಶಕತೆ ಬಗ್ಗೆ ಸಾರ್ವಜನಿಕ ಮನಸ್ಸಿನಲ್ಲಿ ಯಾವುದೇ ಅನುಮಾನ ಮೂಡದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಜಾರ್ಖಂಡ್ ಸರ್ಕಾರ ಕೂಲಂಕಷವಾಗಿ ಪರಿಸ್ಥಿತಿ ಮೌಲ್ಯಮಾಪನ ಮಾಡಿದೆ. ಈ ನಿಟ್ಟಿನಲ್ಲಿ ಮುಕ್ತ ನ್ಯಾಯಸಮ್ಮತ ಮತ್ತು ಪಾರದರ್ಶಕವಾಗಿ ಸಾರ್ವಜನಿಕ ಪರೀಕ್ಷೆಯನ್ನು ನಡೆಸಲು ಮೊಬೈಲ್ ಇಂಟರ್ನೆಟ್, ಮೊಬೈಲ್ ಡೇಟಾ ಮತ್ತು ಮೊಬೈಲ್ ಅನ್ನು ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸಸಲಾಗುತ್ತಿದೆ ಎಂದು ಸಿಎಂ ತಿಳಿಸಿದ್ದಾರೆ.
ಇದನ್ನೂ ಓದಿ: 'ಒಂದು ರಾಷ್ಟ್ರ, ಒಂದು ಚುನಾವಣೆ' ವಿರುದ್ಧ ಬೆಂಬಲ ಕ್ರೋಢೀಕರಿಸುತ್ತಿರುವ ಕಾಂಗ್ರೆಸ್