ಅಮರಾವತಿ(ಆಂಧ್ರಪ್ರದೇಶ): ಆಂಧ್ರ ಪ್ರದೇಶದಲ್ಲಿ ತೆಲುಗು ದೇಶಂ ಪಕ್ಷ (ಟಿಡಿಪಿ), ಜನಸೇನಾ ಮತ್ತು ಬಿಜೆಪಿಯನ್ನೊಳಗೊಂಡ ಎನ್ಡಿಎ ಮೈತ್ರಿಕೂಟದ ಸರ್ಕಾರ ಬುಧವಾರ ಅಸ್ತಿತ್ವಕ್ಕೆ ಬರಲಿದೆ. ನೂತನ ಸರ್ಕಾರದ ಮುಖ್ಯಮಂತ್ರಿಯಾಗಿ ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಈ ಬಾರಿಯ ರಾಜ್ಯ ರಾಜಕೀಯ ಮತ್ತು ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಖ್ಯಾತ ನಟ, ಜನಸೇನಾ ಅಧ್ಯಕ್ಷ ಪವನ್ ಕಲ್ಯಾಣ್ ಉಪಮುಖ್ಯಮಂತ್ರಿ ಆಗಿ ಆಯ್ಕೆಯಾಗುವ ನಿರೀಕ್ಷೆ ಇದೆ.
ಆಂಧ್ರಪ್ರದೇಶಲ್ಲಿ ಇತ್ತೀಚೆಗೆ ಲೋಕಸಭೆಯೊಂದಿಗೆ ವಿಧಾನಸಭೆಗೂ ಚುನಾವಣೆ ನಡೆದಿತ್ತು. ಎರಡೂ ಚುನಾವಣೆಯಲ್ಲೂ ಎನ್ಡಿಎ ಮೈತ್ರಿಕೂಟ ದೊಡ್ಡ ಗೆಲುವು ದಾಖಲಿಸಿದೆ. 175 ಸದಸ್ಯ ಬಲದ ವಿಧಾನಸಭೆಯಲ್ಲಿ ಟಿಡಿಪಿ - 135, ಜನಸೇನಾ -21 ಹಾಗೂ ಬಿಜೆಪಿ 8 ಕ್ಷೇತ್ರಗಳಲ್ಲಿ ಜಯ ಸಾಧಿಸಿ ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ನಾಳೆ(ಬುಧವಾರ) ಸಿಎಂ ಆಗಿ ಚಂದ್ರಬಾಬು ನಾಯ್ಡು ಬೆಳಗ್ಗೆ 11.27ಕ್ಕೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನೂತನ ಸಚಿವರ ಆಯ್ಕೆಗಾಗಿ ಮೂರೂ ಮೈತ್ರಿಪಕ್ಷಗಳಿಂದಲೂ ರಾಜಕೀಯ ಹಿನ್ನೆಲೆ, ಜಾತಿ ಸೇರಿದಂತೆ ಎಲ್ಲ ರೀತಿಯ ಲೆಕ್ಕಾಚಾರಗಳು ನಡೆಯುತ್ತಿವೆ.
ಜನಸೇನಾ-ಬಿಜೆಪಿಗೆ 6 ಸಚಿವ ಸ್ಥಾನ?: ಸರ್ಕಾರ ರಚನೆಗೆ ಸಜ್ಜಾಗಿರುವ ಟಿಡಿಪಿ, ಜನಸೇನಾ ಪಕ್ಷವು ಇಂದು ತಮ್ಮ ತಮ್ಮ ಶಾಸಕಾಂಗ ಪಕ್ಷದ ಸಭೆ ನಡೆಸಿವೆ. ನಿರೀಕ್ಷೆಯಂತೆ ಕ್ರಮವಾಗಿ ಶಾಸಕಾಂಗ ಪಕ್ಷದ ನಾಯಕರಾಗಿ ಚಂದ್ರಬಾಬು ನಾಯ್ಡು, ಪವನ್ ಕಲ್ಯಾಣ್ ಆಯ್ಕೆಯಾಗಿದ್ದಾರೆ. ಸರ್ಕಾರದಲ್ಲಿ ತಮ್ಮೊಂದಿಗೆ ಪವನ್ ಕಲ್ಯಾಣ್ ಅವರಿಗೂ ಸಮಾನ ಗೌರವ ಇರುತ್ತದೆ ಎಂದು ಚಂದ್ರಬಾಬು ನಾಯ್ಡು ಸಭೆಯಲ್ಲಿ ತಿಳಿಸಿದ್ದಾರೆ.
ಮತ್ತೊಂದೆಡೆ, ಟಿಡಿಪಿ-ಜನಸೇನಾ-ಬಿಜೆಪಿ ಮೈತ್ರಿಕೂಟವು ಒಂಟಿಯಾಗಿಯೂ ಸಭೆ ನಡೆಸಿದೆ. ವಿಜಯವಾಡದಲ್ಲಿ ನಡೆದ ಎಲ್ಲ ಪಕ್ಷಗಳ ಶಾಸಕರ ಸಭೆಯಲ್ಲಿ ಸಿಎಂ ಆಗಿ ಚಂದ್ರಬಾಬು ಅವರ ಹೆಸರನ್ನು ಪವನ್ ಕಲ್ಯಾಣ್ ಸೂಚಿಸಿದರು. ಈ ಪ್ರಸ್ತಾವನೆಗೆ ಬಿಜೆಪಿ ರಾಜ್ಯಾಧ್ಯಕ್ಷೆ ಪುರಂದೇಶ್ವರಿ ಬೆಂಬಲ ವ್ಯಕ್ತಪಡಿಸಿದರು. ಬಳಿಕ ಮೈತ್ರಿಕೂಟದ ನಾಯಕರು ತಮ್ಮ ಸರ್ವಾನುಮತದ ನಿರ್ಣಯವನ್ನು ರಾಜ್ಯಪಾಲರಿಗೆ ರವಾನಿಸಿದರು. ರಾಜ್ಯಪಾಲರು ಸರ್ಕಾರ ರಚನೆಗೆ ಸಮ್ಮಿಶ್ರ ಸರ್ಕಾರಕ್ಕೆ ಆಹ್ವಾನ ನೀಡಿದ್ದಾರೆ.
ಚಂದ್ರಬಾಬು ಪುತ್ರ ನಾರಾ ಲೋಕೇಶ್‌ಗೆ ಸಚಿವ ಸ್ಥಾನ?: ಸರ್ಕಾರದಲ್ಲಿ ಪವನ್ ಕಲ್ಯಾಣ್ ಅವರ ಜನಸೇನಾ ಹಾಗೂ ಬಿಜೆಪಿಗೆ ಐದಾರು ಸಚಿವ ಸ್ಥಾನಗಳು ಸಿಗಲಿವೆ. ಪವನ್ ಹಾಗೂ ಅವರ ಪಕ್ಷದ ರಾಜಕೀಯ ವ್ಯವಹಾರ ಸಮಿತಿಯ ಅಧ್ಯಕ್ಷ ನಾದೇಂಡ್ಲ ಮನೋಹರ್ ಸಂಪುಟ ಸೇರಲಿದ್ದಾರೆ. ಪವನ್ ಉಪಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ. ಇದೇ ವೇಳೆ, ಚಂದ್ರಬಾಬು ಪುತ್ರ ನಾರಾ ಲೋಕೇಶ್ ಸಹ ಸಂಪುಟ ಸೇರುವ ನಿರೀಕ್ಷೆ ಇದೆ.
ಇದನ್ನೂ ಓದಿ: ನಾಳೆ ಪ್ರಧಾನಿ ಮೋದಿ ಉಪಸ್ಥಿತಿಯಲ್ಲಿ ಆಂಧ್ರ ಸಿಎಂ ಆಗಿ ಚಂದ್ರಬಾಬು ನಾಯ್ಡು ಪ್ರಮಾಣವಚನ