ಪಾಟ್ನಾ (ಬಿಹಾರ) : ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ 2025ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಕಟ್ಟುವ ಮೂಲಕ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ. ಮಾಜಿ ಐಪಿಎಸ್ ಆನಂದ್ ಮಿಶ್ರಾ, ಕರ್ಪೂರಿ ಠಾಕೂರ್ ಅವರ ಮೊಮ್ಮಗಳು ಸೇರಿದಂತೆ ಆರ್‌ಜೆಡಿ ಮತ್ತು ಜೆಡಿಯುನ ಅನೇಕ ನಾಯಕರು ಅವರ ಪ್ರಚಾರಕ್ಕೆ ಸೇರುತ್ತಿದ್ದಾರೆ. ಪ್ರಶಾಂತ್ ಕಿಶೋರ್ ಅವರ ಈ ಕ್ರಿಯಾಶೀಲತೆಯು ಇತರ ರಾಜಕೀಯ ಪಕ್ಷಗಳಿಗೆ ದೊಡ್ಡ ಹೊಡೆತವನ್ನು ಉಂಟುಮಾಡಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
ಭಾನುವಾರ ಪಾಟ್ನಾದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಶಾಂತ್ ಕಿಶೋರ್ ಅವರ ಜನ್ ಸೂರಜ್ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ಈ ಅಭಿಯಾನದಲ್ಲಿ ತೊಡಗಿಸಿಕೊಂಡಿರುವ ನೂರಾರು ಜನರನ್ನು ಮುಂದಿನ ವಿಧಾನಸಭೆಯಲ್ಲಿ ನೋಡಲಾಗುವುದು ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ಪ್ರಶಾಂತ್ ಕಿಶೋರ್ ಶಕ್ತಿ ಪ್ರದರ್ಶನ : ರಾಜಧಾನಿ ಪಾಟ್ನಾದ ಬಾಪು ಆಡಿಟೋರಿಯಂನಲ್ಲಿ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ತಮ್ಮ ಶಕ್ತಿ ಪ್ರದರ್ಶಿಸಿದರು. ಸಾವಿರಾರು ಜನರ ಗುಂಪು ಅಲ್ಲಿ ನೆರೆದಿತ್ತು. ಬಾಪು ಸಭಾಂಗಣವು ಕಾರ್ಮಿಕರಿಂದ ತುಂಬಿ ತುಳುಕುತ್ತಿತ್ತು. ರಾಷ್ಟ್ರೀಯ ಜನತಾ ದಳದ ಹಲವು ದೊಡ್ಡ ನಾಯಕರು ಪ್ರಶಾಂತ್ ಕಿಶೋರ್ ಅವರ ತಂಡದ ಭಾಗವಾದರು. ಬಕ್ಸರ್ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿದ್ದ ಮಾಜಿ ಐಪಿಎಸ್ ಆನಂದ್ ಮಿಶ್ರಾ ಕೂಡ ಜನ್ ಸೂರಜ್ ಪ್ರಚಾರದಲ್ಲಿ ಪಾಲ್ಗೊಂಡಿದ್ದರು.
"ಮೊದಲು ನಾನು ಏಕಾಂಗಿಯಾಗಿ ಹೋರಾಡುತ್ತಿದ್ದೆ. ಆದರೆ ಈಗ ನಾನು ಜನ್ ಸೂರಜ್ ಅಭಿಯಾನಕ್ಕೆ ಸೇರಿಕೊಂಡಿದ್ದೇನೆ. ಪ್ರಶಾಂತ್ ಕಿಶೋರ್ ಜಿ ಅವರೊಂದಿಗೆ ಸೇರಿಕೊಳ್ಳುವ ಮೂಲಕ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗುತ್ತದೆ ಮತ್ತು ಬಿಹಾರದ ಪರವಾಗಿ ಏನಾದರೂ ಮಾಡಬೇಕೆಂಬ ನನ್ನ ಆಸೆ ಈಡೇರುತ್ತದೆ" ಎಂದು ಮಾಜಿ ಐಪಿಎಸ್ ಅಧಿಕಾರಿ ಆನಂದ್ ಮಿಶ್ರಾ ತಿಳಿಸಿದ್ದಾರೆ.
ಆರ್‌ಜೆಡಿ, ಜೆಡಿಯು ಮುಖಂಡರ ಸೇರ್ಪಡೆ : ಆನಂದ್ ಮಿಶ್ರಾ ಅವರಲ್ಲದೇ ರಾಷ್ಟ್ರೀಯ ಜನತಾ ದಳದ ಮಾಜಿ ಶಾಸಕ ದುರ್ಗಾ ಪ್ರಸಾದ್, ರಾಷ್ಟ್ರೀಯ ಜನತಾ ದಳದ ಮಾಜಿ ಶಾಸಕ ರಾಂಬಾಲಿ ಚಂದ್ರವಂಶಿ, ಜೆಡಿಯು ಮಾಜಿ ಸಂಸದ ಮೊನಜೀರ್ ಹಸನ್ ಅವರು ಪ್ರಶಾಂತ್ ಕಿಶೋರ್ ಪಕ್ಷ ಸೇರುವ ಇಚ್ಛೆ ವ್ಯಕ್ತಪಡಿಸಿದರು. ಜನ್ ಸೂರಜ್ ಅಭಿಯಾನದಲ್ಲಿ ಕರ್ಪೂರಿ ಠಾಕೂರ್ ಅವರ ಮೊಮ್ಮಗಳು ಡಾ. ಜಾಗೃತಿ ಕೂಡ ಸೇರಿಕೊಂಡಿದ್ದರು. ಜಾಗೃತಿ ಅವರು ಮಾತನಾಡಿ,' ನಾನು ಹಿಮಾಚಲ ಪ್ರದೇಶದಲ್ಲಿ ವಾಸಿಸುತ್ತಿದ್ದೇನೆ. ಬಿಹಾರದ ಸ್ಥಿತಿ ಕಂಡು ಚಿಂತಾಕ್ರಾಂತಳಾಗಿದ್ದೆ. ನಾನು ಈಗ ಪ್ರಚಾರದಲ್ಲಿ ತೊಡಗಿಕೊಂಡು ಬಿಹಾರಕ್ಕಾಗಿ ಸಕ್ರಿಯವಾಗಿ ಕೆಲಸ ಮಾಡುತ್ತೇನೆ' ಎಂದು ತಿಳಿಸಿದ್ದಾರೆ.
"ಪ್ರಶಾಂತ್ ಕಿಶೋರ್ ಬಿಹಾರದ ರಾಜಕೀಯದಲ್ಲಿ ಸದೃಢವಾಗಿ ಮುನ್ನಡೆಯುತ್ತಿದ್ದಾರೆ. ಜನ ಅವರ ಜೊತೆ ಸೇರುತ್ತಿರುವ ರೀತಿ ನೋಡಿದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ಇತರ ರಾಜಕೀಯ ಪಕ್ಷಗಳಿಗೆ ಸಮಸ್ಯೆ ಸೃಷ್ಟಿಸುತ್ತಾರೆ ಎಂಬುದು ಸ್ಪಷ್ಟವಾಗಿದೆ" ಎಂದು ರಾಜಕೀಯ ವಿಶ್ಲೇಷಕ ಡಾ. ಸಂಜಯ್ ಕುಮಾರ್ ತಿಳಿಸಿದ್ದಾರೆ.
ಪ್ರಶಾಂತ್ ಕಿಶೋರ್ ಯಾರು? : ಪ್ರಶಾಂತ್ ಕಿಶೋರ್ ಅವರನ್ನು ಪ್ರಸಿದ್ಧ ರಾಜಕೀಯ ತಂತ್ರಜ್ಞ ಎಂದು ಪರಿಗಣಿಸಲಾಗಿದೆ. ಸದ್ಯ ಬಿಹಾರದಲ್ಲಿ ಜನ್ ಸೂರಜ್ ಎಂಬ ಹೆಸರಿನಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಈ ಮೂಲಕ ಸಾರ್ವಜನಿಕರು ಯಾವ ರೀತಿಯ ಸರ್ಕಾರವನ್ನು ಆಯ್ಕೆ ಮಾಡಿಕೊಳ್ಳಬೇಕು, ಅಲ್ಲದೇ ಸರ್ಕಾರ ಅವರಿಗಾಗಿ ಹೇಗೆ ಕೆಲಸ ಮಾಡಬೇಕು ಎಂಬ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಇದೀಗ ಬಿಹಾರದಲ್ಲಿ ಹೊಸ ಪಕ್ಷ ಸ್ಥಾಪನೆಗೆ ಸಿದ್ಧತೆ ನಡೆದಿದೆ. ಈ ಮೊದಲು ಅವರು ಜೆಡಿಯು ಜೊತೆ ಗುರುತಿಸಿಕೊಂಡಿದ್ದರು. ನಿತೀಶ್ ಕುಮಾರ್ ಅವರ ಉತ್ತರಾಧಿಕಾರಿ ಎಂದು ಪರಿಗಣಿಸಲಾಗಿದೆ.
ಇದನ್ನೂ ಓದಿ : ಒಂದೇ ಕುಟುಂಬದಲ್ಲಿ 110 ಮತದಾರರು: ಮನ ಗೆಲ್ಲಲು ಮನೆಯ ಸುತ್ತಲೂ ರಾಜಕಾರಣಿಗಳ ಗಿರಕಿ! - 110 Voters in One Family