ಉಧಂಪುರ(ಜಮ್ಮು ಮತ್ತು ಕಾಶ್ಮೀರ): ಜಮ್ಮು-ಕಾಶ್ಮೀರಕ್ಕೆ ಶೀಘ್ರದಲ್ಲೇ ರಾಜ್ಯ ಸ್ಥಾನಮಾನ ನೀಡುವುದರ ಜತೆಗೆ ವಿಧಾನಸಭಾ ಚುನಾವಣೆಗಳನ್ನು ಕೂಡಾ ನಡೆಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದರು. ಕೇಂದ್ರ ಸಚಿವ ಮತ್ತು ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಜಿತೇಂದ್ರ ಸಿಂಗ್ ಅವರಿಗೆ ಬೆಂಬಲ ಸೂಚಿಸಲು ಉಧಂಪುರದಲ್ಲಿ ಇಂದು ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಅವರು ಮಾತನಾಡಿದರು.
ಭಯೋತ್ಪಾದನೆ, ಮುಷ್ಕರ, ಕಲ್ಲು ತೂರಾಟ ಮತ್ತು ಗಡಿಯಾಚೆಗಿನ ಗುಂಡಿನ ದಾಳಿಯ ಭಯವಿಲ್ಲದೆ ಲೋಕಸಭೆ ಚುನಾವಣೆಗೆ ಸಾಕ್ಷಿಯಾಗಲಿರುವ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನವನ್ನು ಮರುಸ್ಥಾಪಿಸಲು ನಮ್ಮ ಸರ್ಕಾರ ಯೋಚಿಸುತ್ತಿದೆ. ವಿಧಾನಸಭಾ ಚುನಾವಣೆ ಕೂಡ ನಡೆಯಲಿದೆ. ಶೀಘ್ರದಲ್ಲೇ ನಾವೆಲ್ಲರೂ ಇದನ್ನು ನೋಡಲಿದ್ದೇವೆ ಎಂದರು.
ಇಲ್ಲಿ ಕೇವಲ ಒಂದು ದಿನ ಶಾಂತಿಯುತವಾಗಿದ್ದರೆ ಮಾಧ್ಯಮಗಳಲ್ಲಿ ಅದೇ ದೊಡ್ಡ ಸುದ್ದಿಯಾಗುತ್ತಿತ್ತು. ಈಗ ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಬದಲಾಗಿದೆ. ಈ ಚುನಾವಣೆಯು ಸಂಸದರನ್ನು ಮಾತ್ರ ಆಯ್ಕೆ ಮಾಡುವುದಿಲ್ಲ. ಸುಭದ್ರ ಸರ್ಕಾರವನ್ನೂ ಚುನಾಯಿಸುತ್ತದೆ. ಸುಭದ್ರ ಸರ್ಕಾರ ಏನೆಲ್ಲ ಮಾಡಲಿದೆ ಎಂಬುದು ನಿಮಗೆ ತಿಳಿದಿದೆ.
ನಾನು ಉಧಂಪುರಕ್ಕೆ ಹೊಸಬನಲ್ಲ. ಕಳೆದ ಹಲವು ದಶಕಗಳಿಂದ ಈ ಸ್ಥಳಕ್ಕೆ ಆಗಾಗ ಭೇಟಿ ನೀಡುತ್ತಲೇ ಇದ್ದೇನೆ. ಕಳೆದ ಐದು ದಶಕಗಳಿಂದ ನಾನು ಜಮ್ಮು ಮತ್ತು ಕಾಶ್ಮೀರ ಭೂಮಿಗೆ ಭೇಟಿ ನೀಡುತ್ತಿದ್ದೇನೆ. 1992ರಲ್ಲಿ ಏಕತಾ ಯಾತ್ರೆಯ ಸಂದರ್ಭದಲ್ಲಿ ನೀವು ನನಗೆ ಇಲ್ಲಿ ಭವ್ಯ ಸ್ವಾಗತ ಮತ್ತು ಗೌರವ ನೀಡಿದ್ದು ನನಗೆ ನೆನಪಿದೆ. ಆಗ ಇಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವುದು ನಮ್ಮ ಧ್ಯೇಯವಾಗಿತ್ತು. ಇಲ್ಲಿನ ತಾಯಂದಿರು ಮತ್ತು ಸಹೋದರಿಯರು ಆಶೀರ್ವಾದ ನೀಡಿದ್ದರ ಫಲವಾಗಿ ಅದು ಈಡೇರಿದೆ. 2014ರಲ್ಲಿ ಇದೇ ಮೈದಾನದಲ್ಲಿ ಮಾತನಾಡುತ್ತಾ ಜಮ್ಮು ಮತ್ತು ಕಾಶ್ಮೀರವನ್ನು ವಂಶಪಾರಂಪರ್ಯ ಆಡಳಿತದಿಂದ ಮುಕ್ತಗೊಳಿಸುವುದಾಗಿ ನಾನು ಭರವಸೆ ನೀಡಿದ್ದೆ. ಇಂದು ನಿಮ್ಮ ಆಶೀರ್ವಾದದಿಂದ ಆ ಭರವಸೆ ಈಡೇರಿದೆ ಎಂದು ಮೋದಿ ಹೇಳಿದರು.
ಇದೇ ವೇಳೆ ತಮ್ಮ ಪಕ್ಷದ ಸಾಧನೆಗಳ ಬಗ್ಗೆ ಮಾತನಾಡಿ, ನನ್ನನ್ನು ನಂಬಿ. 60 ವರ್ಷಗಳ ಸಮಸ್ಯೆಗಳನ್ನು ನಾನು ಪರಿಹರಿಸುತ್ತೇನೆ. ಎರಡು ಹೊತ್ತಿನ ಊಟದ ಬಗ್ಗೆ ಚಿಂತಿಸದಂತೆ ನಾನು ಇಲ್ಲಿನ ಬಡವರಿಗೆ ಭರವಸೆ ನೀಡಿದ್ದೇನೆ. ಜಮ್ಮು ಮತ್ತು ಕಾಶ್ಮೀರದ ಲಕ್ಷಾಂತರ ಕುಟುಂಬಗಳು ಮುಂದಿನ 5 ವರ್ಷಗಳವರೆಗೆ ಉಚಿತ ಪಡಿತರ ಪಡೆಯಲಿದ್ದಾರೆ. ಇಲ್ಲಿಯವರೆಗೂ ಏನು ನಡೆದಿದೆಯೇ ಅದು ಕೇವಲ ಟ್ರೇಲರ್ ಮಾತ್ರ. ನಾವು ಜಮ್ಮು ಕಾಶ್ಮೀರಕ್ಕೆ ನೂತನ ಹಾಗೂ ಅದ್ಭುತ ಯೋಜನೆ ರೂಪಿಸುತ್ತಿದ್ದೇವೆ ಎಂದು ತಿಳಿಸಿದರು.