ನವದೆಹಲಿ: ಬುಧವಾರ ಕುವೈತ್‌ನ ಕಟ್ಟವೊಂದರಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಮೃತಪಟ್ಟ ಭಾರತೀಯರ ಮೃತ ದೇಹಗಳನ್ನು ಆದಷ್ಟು ಬೇಗ ಸ್ವದೇಶಕ್ಕೆ ಕಳುಹಿಸಿಕೊಡುವಂತೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಕುವೈತ್‌ನ ವಿದೇಶಾಂಗ ಸಚಿವ ಅಬ್ದುಲ್ಲಾ ಅಲಿ ಅಲ್-ಯಾಹ್ಯಾ ಅವರಿಗೆ ಮನವಿ ಮಾಡಿದ್ದಾರೆ.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಅಬ್ದುಲ್ಲಾ ಅಲಿ ಅಲ್-ಯಾಹ್ಯಾ ಅವರೊಂದಿಗೆ ಘಟನೆ ಸಂಬಂಧ ಚರ್ಚೆ ನಡೆಸಲಾಗಿದೆ. ಘಟನೆಯಲ್ಲಿ ಸಾವನ್ನಪ್ಪಿರುವ ಭಾರತೀಯ ಮೂಲದ ಪ್ರಜೆಗಳ ಪಾರ್ಥಿವ ಶರೀರವನ್ನು ಶೀಘ್ರವಾಗಿ ಹಿಂದಿರುಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ. ಇದಕ್ಕೆ ಒಪ್ಪಿಗೆ ಸೂಚಿಸಿರುವ ಅವರು ಘಟನೆಯ ಬಗ್ಗೆಯೂ ಸಂಪೂರ್ಣ ತನಿಖೆ ನಡೆಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಗಾಯಾಳುಗಳಿಗೆ ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕುವೈತ್‌ಗೆ ಕೀರ್ತಿ ವರ್ಧನ್ ಸಿಂಗ್: ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಅವರು ಪ್ರಧಾನ ಮೋದಿಯವರ ನಿರ್ದೇಶನದ ಮೇರೆಗೆ ತಕ್ಷಣವೇ ಕುವೈತ್‌ಗೆ ಪ್ರಯಾಣಿಸುತ್ತಿದ್ದಾರೆ. ಮೃತರನ್ನು ಸ್ವದೇಶಕ್ಕೆ ತರಲು ಮತ್ತು ಗಾಯಗೊಂಡವರಿಗೆ ಸಹಾಯಕ್ಕಾಗಿ ಅವರು ಅಲ್ಲಿಗೆ ತೆರಳಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
2 ಲಕ್ಷ ಪರಿಹಾರ ಘೋಷಣೆ: ಪ್ರಧಾನಿ ಮೋದಿ ಅವರು ಕುವೈತ್‌ನ ಅಗ್ನಿ ದುರಂತದಲ್ಲಿ ಮೃತಪಟ್ಟ ಭಾರತೀಯರ ಕುಟುಂಬಗಳಿಗೆ ತಲಾ 2 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.
ಏನಿದು ಘಟನೆ?: ದಕ್ಷಿಣ ಕುವೈತ್‌ನ ಮಂಗಾಫ್ ನಗರದಲ್ಲಿ ನಿನ್ನೆ ಬೆಳಗ್ಗೆ ಕಾರ್ಮಿಕರು ವಾಸವಿದ್ದ ಕಟ್ಟಡವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿ 49 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದರಲ್ಲಿ 40 ಜನ ಭಾರತೀಯರು ಎಂದು ಗುರತಿಸಲಾಗಿದೆ. ಇನ್ನೂ 50 ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.
ಗಾಯಾಗಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಆರು ಅಂತಸ್ತಿನ ಕಟ್ಟಡದ ಅಡುಗೆಮನೆಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ಕಟ್ಟಡದಲ್ಲಿ ಸುಮಾರು 160 ಜನರು ವಾಸಿಸುತ್ತಿದ್ದರು. ಸಾವನ್ನಪ್ಪಿದವರ ಪೈಕಿ 35 ಜನರನ್ನು ಸ್ಥಳದಲ್ಲೇ ಪತ್ತೆ ಮಾಡಲಾಗಿದೆ. ಇನ್ನೂ ನಾಲ್ವರು ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಇದರಲ್ಲಿ ಭಾರತೀಯರ ಸಂಖ್ಯೆ ಹೆಚ್ಚಿದೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದರು.
ದುರ್ಘಟನೆಯ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಕುವೈತ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮಾಹಿತಿಗಾಗಿ ತುರ್ತು ಸಹಾಯವಾಣಿ ಸಂಖ್ಯೆ: +965-65505246 ಅನ್ನು ಆರಂಭಿಸಿದೆ. ಸಂಬಂಧಿಸಿದವರು ಈ ಸಹಾಯವಾಣಿಯನ್ನು ಸಂಪರ್ಕಿಸಬಹುದು. ಭಾರತೀಯರಿಗೆ ಎಲ್ಲ ನೆರವು ನೀಡಲಾಗುವುದು ಎಂದು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದೆ.
ಕುವೈತ್‌ನ ಒಟ್ಟು ಜನಸಂಖ್ಯೆಯಲ್ಲಿ ಭಾರತೀಯರೇ ಶೇಕಡಾ 21 ರಷ್ಟಿದ್ದಾರೆ. ಅಲ್ಲಿನ ಉದ್ಯೋಗಿಗಳ ಪೈಕಿ ಶೇಕಡಾ 30 ರಷ್ಟಿದ್ದಾರೆ.