ಜಮ್ಮು(ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದ ರಿಯಾಸಿಯಲ್ಲಿ 9 ಯಾತ್ರಾರ್ಥಿಗಳ ಮಾರಣಹೋಮ ನಡೆಸಿದ ಭಯೋತ್ಪಾದಕರಿಗೆ ಭಾರೀ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಶಿವ ಖೋರಿ ದೇವಸ್ಥಾನದಿಂದ ಕಟ್ರಾದ ಮಾತಾ ವೈಷ್ಣೋದೇವಿ ದೇಗುಲಕ್ಕೆ ತೆರಳುತ್ತಿದ್ದ ಯಾತ್ರಿಕರ ಬಸ್ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದರಿಂದ ಬಸ್ ಆಳ ಕಮರಿಗೆ ಬಿದ್ದು ಒಂಬತ್ತು ಜನರು ಸಾವನ್ನಪ್ಪಿ, 41 ಮಂದಿ ಗಾಯಗೊಂಡಿದ್ದಾರೆ.
ಈ ದಾಳಿಯ ನಂತರ ಪೊಲೀಸರು, ಸೇನೆ, ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ಕೇಂದ್ರ ಗುಪ್ತಚರ ಸಂಸ್ಥೆಗಳನ್ನು ಒಳಗೊಂಡ ತಂಡ ಜಂಟಿ ಕಾರ್ಯಾಚರಣೆ ನಡೆಸುತ್ತಿದೆ. ತನಿಖೆಯ ಭಾಗವಾಗಿ ದಾಳಿಯಲ್ಲಿ ಬದುಕುಳಿದವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿಷೇಧಿತ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಸಂಘಟನೆಯ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಆರಂಭದಲ್ಲಿ ದಾಳಿಯ ಹೊಣೆ ಹೊತ್ತುಕೊಂಡಿತ್ತು. ಆದರೆ, ನಂತರ ತನ್ನ ಹೇಳಿಕೆಯನ್ನು ವಾಪಸ್ ಪಡೆದುಕೊಂಡಿದೆ. ದಾಳಿಯಲ್ಲಿ ಮೃತಪಟ್ಟವರಲ್ಲಿ ಎರಡು ವರ್ಷದ ಮಗು ಟಿಟು ಸಾಹ್ನಿ ಮತ್ತು ಅವರ ತಾಯಿ ಪೂಜಾ ಸೇರಿದ್ದಾರೆ. ಮೃತರಲ್ಲಿ ಮೂವರು ಉತ್ತರ ಪ್ರದೇಶದವರು.
ರಿಯಾಸಿ ಮೂಲದ ಬಸ್ ಚಾಲಕ ಮತ್ತು ಕಂಡಕ್ಟರ್ ಕೂಡ ಸಾವನ್ನಪ್ಪಿದ್ದಾರೆ. ಮೃತಪಟ್ಟ ಒಂಬತ್ತು ಮಂದಿಯಲ್ಲಿ ಐವರಿಗೆ ಗುಂಡಿನ ಗಾಯಗಳಾಗಿವೆ. ಇನ್ನು ಗಾಯಗೊಂಡವರಲ್ಲಿ ಕೆಲವರು ಜಮ್ಮು ಮತ್ತು ರಿಯಾಸಿ ಜಿಲ್ಲೆಗಳ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪರ್ವತಗಳಲ್ಲಿ ಅಡಗಿರುವ ಉಗ್ರರು: ರಜೌರಿ ಮತ್ತು ರಿಯಾಸಿ ಪರ್ವತ ಪ್ರದೇಶಗಳಲ್ಲಿ ಭಯೋತ್ಪಾದಕರು ಅಡಗಿದ್ದಾರೆ ಎಂದು ಭದ್ರತಾ ಪಡೆಗಳು ಶಂಕಿಸಿವೆ. ಈ ಪ್ರದೇಶದಲ್ಲಿ ಶೋಧ ತೀವ್ರಗೊಳಿಸಲಾಗಿದೆ.