ಚೆನ್ನೈ (ತಮಿಳುನಾಡು): ಕಾಂಗ್ರೆಸ್ ಶಾಸಕಾಂಗ ಪಕ್ಷದ ಮುಖ್ಯ ಸಚೇತಕರಾದ ಎಸ್.ವಿಜಯಧರಣಿ ಅವರು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರುತ್ತಾರೆ ಎಂಬ ಊಹಾಪೋಹಗಳನ್ನು ತಮಿಳುನಾಡು ಕಾಂಗ್ರೆಸ್ ಸಮಿತಿ (ಟಿಎನ್‌ಸಿಸಿ) ಅಧ್ಯಕ್ಷ ಕೆ.ಸೆಲ್ವಪೆರುಂತಗೈ ಭಾನುವಾರ ತಳ್ಳಿಹಾಕಿದ್ದಾರೆ.
''ಲೋಕಸಭೆ ಚುನಾವಣೆ ಹಿನ್ನೆಲೆ ತಮಿಳುನಾಡಿನಲ್ಲಿ ಇಂಡಿಯಾ ಬಣ ಭಾರಿ ಲಾಭ ಪಡೆಯಲಿದೆ. ತಮಿಳುನಾಡಿನ ಎಲ್ಲ 39 ಸ್ಥಾನಗಳನ್ನು ಮತ್ತು ಪುದುಚೇರಿಯಲ್ಲಿ ಏಕೈಕ ಸ್ಥಾನವನ್ನು ಗೆಲ್ಲುವುದು ನಮ್ಮ ಗುರಿಯಾಗಿದೆ ಎಂದು ಅವರು ಹೇಳಿದರು. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದಲ್ಲಿ ತಮಿಳುನಾಡಿನಲ್ಲಿ ಇಂಡಿಯಾ ಬಣದ ಯಶಸ್ಸಿಗೆ ಕಾಂಗ್ರೆಸ್ ಮತ್ತು ಡಿಎಂಕೆ ಒಟ್ಟಾಗಿ ಕೆಲಸ ಮಾಡುತ್ತಿವೆ'' ಎಂದು ಸೆಲ್ವಪೆರುಂತಗೈ ತಿಳಿಸಿದರು.
''ಮಕ್ಕಳ್ ನೀಧಿ ಮೈಯಂ ನಾಯಕ ಮತ್ತು ತಮಿಳು ಸೂಪರ್‌ಸ್ಟಾರ್ ಕಮಲ್ ಹಾಸನ್‌ಗೆ ಕಾಂಗ್ರೆಸ್ ಕೋಟಾದಿಂದ ಒಂದು ಸ್ಥಾನವನ್ನು ನೀಡಲು ಡಿಎಂಕೆ ಪ್ರಯತ್ನಿಸುತ್ತಿದೆ ಎಂಬ ವದಂತಿಗಳ ಬಗ್ಗೆ ನಾನು ಯಾವುದೇ ಪ್ರತಿಕ್ರಿಯಿಸುವುದಿಲ್ಲ'' ಎಂದು ಅವರು ಇದೇ ವೇಳೆ ಹೇಳಿದರು. ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷರು, ಮಹಾತ್ಮ ಗಾಂಧಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಕೆ.ಕಾಮರಾಜ್, ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಪೆರಿಯಾರ್ ಅವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದರು.
ಕಮಲ್ನಾಥ್ ಬಿಜೆಪಿ ಸೇರ್ಪಡೆ ಊಹಾಪೋಹ: ಭೋಪಾಲ್ (ಮಧ್ಯಪ್ರದೇಶ): ಹಿರಿಯ ಕಾಂಗ್ರೆಸ್ ನಾಯಕ ಕಮಲ್ ನಾಥ್ ಮತ್ತು ಅವರ ಪುತ್ರ ನಕುಲ್ ನಾಥ್ ಅವರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ಊಹಾಪೋಹಗಳ ನಡುವೆಯೇ ಕಮಲ್ ನಾಥ್ಗೆ ನಿಷ್ಠರಾಗಿರುವ ಮಧ್ಯಪ್ರದೇಶದ ಸುಮಾರು ಅರ್ಧ ಡಜನ್ ಶಾಸಕರು ಭಾನುವಾರ ದೆಹಲಿಗೆ ತಲುಪಿರುವ ಭಾರಿ ಕುತೂಹಲ ಮೂಡಿಸಿತ್ತು. ಈ ಶಾಸಕರ ಪೈಕಿ ಮೂವರು ಚಿಂದ್ವಾರದವರಾಗಿದ್ದಾರೆ ಎಂದು ಕಮಲನಾಥ್ ಅವರ ಆಪ್ತ ಮೂಲಗಳು ಹೇಳಿವೆ.
ಆದ್ರೆ, ಈ ಶಾಸಕರು ಯಾವುದೇ ಕರೆಗಳಿಗೆ ಉತ್ತರಿಸಿಲ್ಲ ಹಾಗೂ ಕಮಲ್ ನಾಥ್ ನಿಷ್ಠಾವಂತ ಮತ್ತು ಮಾಜಿ ರಾಜ್ಯ ಸಚಿವ ಲಖನ್ ಘಂಗೋರಿಯಾ ಕೂಡ ದೆಹಲಿಯಲ್ಲಿ ಅವರ ಜೊತೆಗೆ ಇದ್ದಾರೆ ಎಂದು ಕಾಂಗ್ರೆಸ್ನ ಮೂಲಗಳು ತಿಳಿಸಿವೆ.
ಚಿಂದ್ವಾರಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಧ್ಯಪ್ರದೇಶದ ಮಾಜಿ ಸಚಿವ, ಕಮಲ್ ನಾಥ್ ನಿಷ್ಠಾವಂತ ದೀಪಕ್ ಸಕ್ಸೇನಾ ಅವರು, ''ವಿಧಾನಸಭಾ ಸೋಲಿನ ನಂತರ ಅವರನ್ನು ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಿದ ರೀತಿಯು ತಮಗೆ ನೋವು ತಂದಿದೆ'' ಎಂದು ತಿಳಿಸಿದ್ದರು. "ಹಿರಿಯ ನಾಯಕನಿಗೆ ದೊರೆಯಬೇಕಾದ ಗೌರವ ಸಿಗಬೇಕು ಎಂದು ನಾವು ಆಶಯಪಡುತ್ತೇವೆ. ಕಮಲನಾಥ್ ಯಾವುದೇ ನಿರ್ಧಾರ ತೆಗೆದುಕೊಂಡರೂ ಕೂಡ ನಾವು ಅವರ ಜೊತೆಗೆ ಇರುತ್ತೇವೆ" ಎಂದು ಸಕ್ಸೇನಾ ತಿಳಿಸಿದ್ದರು.
ಇದನ್ನೂ ಓದಿ: ಫೆ.21ರಂದು ‘ದೆಹಲಿ ಚಲೋ’ ಪ್ರತಿಭಟನಾ ಮೆರವಣಿಗೆ ಮುಂದುವರಿಸುತ್ತೇವೆ: ಕೇಂದ್ರ ಸಚಿವರ ಭೇಟಿ ಬಳಿಕ ರೈತ ಮುಖಂಡರ ಹೇಳಿಕೆ