ಹೈದರಾಬಾದ್: ಭಾರತದ ಸ್ಟಾರ್ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಎಲ್ಲವೂ ಸರಿಯಾಗುತ್ತಿಲ್ಲ ಎನ್ನುತ್ತಿರುವಾಗಲೇ ವೈವಾಹಿಕ ಜೀವನದ ಬಗ್ಗೆ ಊಹಾಪೋಹಗಳು ಹುಟ್ಟಿಕೊಂಡಿವೆ. ಹಾರ್ದಿಕ್ ಮತ್ತು ನತಾಶಾ ಸ್ಟಾನ್ಕೋವಿಕ್ ದಾಂಪತ್ಯದಲ್ಲಿ ಬಿರುಕು ಕಾಣಿಸಿದೆ ಎಂದು ವರದಿಯಾಗಿದೆ. ಇದಕ್ಕೆ ಪುಷ್ಟಿ ಎಂಬಂತೆ, ನತಾಶಾ ಬುಧವಾರ ಇನ್ಸ್ಟಾಗ್ರಾಮ್ ಬಯೋದಿಂದ ತಮ್ಮ ಉಪನಾಮ (ಪಾಂಡ್ಯ)ವನ್ನು ತೆಗೆದುಹಾಕಿದ್ದಾರೆ. ಇದು ಹೆಚ್ಚಿನ ಚರ್ಚೆಗೆ ಗ್ರಾಸವಾಗಿದೆ.
ಆಲ್ರೌಂಡರ್ ಆಗಿರುವ ಹಾರ್ದಿಕ್ ಪಾಂಡ್ಯ ಸದ್ಯ ತಮ್ಮ ಕ್ರಿಕೆಟ್ ವೃತ್ತಿಯಲ್ಲಿ ಸಂಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ. ಈ ಬಾರಿ ಐಪಿಎಲ್ ಸೀಸನ್ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ವಹಿಸಿಕೊಂಡರೂ ಅವರು ವೈಫಲ್ಯ ಕಂಡಿದ್ದಾರೆ. ಐಪಿಎಲ್ ಪಾಯಿಂಟ್ ಪಟ್ಟಿಯಲ್ಲಿ ಮುಂಬೈ ಫ್ರಾಂಚೈಸಿ ಕೊನೆಯ ಸ್ಥಾನ ಪಡೆದಿದೆ. ಮತ್ತೊಂದೆಡೆ, ವೈಯಕ್ತಿಕ ಜೀವನದಲ್ಲಿಯೂ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ಪಾಂಡ್ಯ ಬ್ಯುಸಿನೆಸ್ನಲ್ಲಿ ಮಲಸಹೋದರನೇ ಮೋಸ ಮಾಡಿದ್ದಾರೆ. ಇದರ ಮಧ್ಯೆ ಈಗ ದಾಂಪತ್ಯ ಜೀವನದ ಬಗ್ಗೆ ವರದಿಗಳು ಹೊರಬರುತ್ತಿವೆ.
ಇದನ್ನೂ ಓದಿ: ಕ್ರಿಕೆಟರ್ಸ್ ಪಾಂಡ್ಯ ಸಹೋದರರಿಗೆ ₹4 ಕೋಟಿ ವಂಚನೆ; ಮಲಸಹೋದರ ಅರೆಸ್ಟ್
ಸರ್ಬಿಯಾದ ಡ್ಯಾನ್ಸರ್, ನಟಿಯಾದ ನತಾಶಾ ಮತ್ತು ಹಾರ್ದಿಕ್ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಮೂರ್ನಾಲ್ಕು ವರ್ಷಗಳು ಕಳೆದಿವೆ. ಇದೀಗ ದಂಪತಿ ಪರಸ್ಪರ ದೂರವಾಗಿದ್ದಾರೆ ಎಂದು ವರದಿಗಳು ಹರಿದಾಡುತ್ತಿವೆ. ಆದರೆ, ಈ ಬಗ್ಗೆ ನಟಾಶಾ ಆಗಲಿ, ಹಾರ್ದಿಕ್ ಆಗಲಿ ಇದುವರೆಗೆ ಯಾವುದೇ ಹೇಳಿಕೆ ನೀಡಿಲ್ಲ.
ಚರ್ಚೆ ಹುಟ್ಟುಹಾಕಿದ್ದು ಏನು?: 30 ವರ್ಷದ ಹಾರ್ದಿಕ್ ಮತ್ತು ನತಾಶಾ ದಾಂಪತ್ಯದ ಬಗ್ಗೆ ಚರ್ಚೆ ಹುಟ್ಟುಹಾಕಿರುವುದು ರೆಡ್ಡಿಟ್ ವೆಬ್ಸೈಟ್ನ ಒಂದು ಪೋಸ್ಟ್. ಇದು ಸೋಷಿಯಲ್ ಮೀಡಿಯಾ ಬಳಕೆದಾರರ ಗಮನ ಸೆಳೆದಿದೆ. ಹಾರ್ದಿಕ್ ಮತ್ತು ಪತ್ನಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ನಿಯಮಿತವಾಗಿ ತಮ್ಮ ವಿಡಿಯೊಗಳನ್ನು ಅಥವಾ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದರು. ಆದರೆ, 2024ರ ಐಪಿಎಲ್ ಪ್ರಾರಂಭ ಎಂದರೆ, ಕಳೆದೆರಡು ತಿಂಗಳುಗಳಿಂದ ಅವರು ಪರಸ್ಪರರ ಬಗ್ಗೆ ಏನನ್ನೂ ಪೋಸ್ಟ್ ಮಾಡಿಲ್ಲ ಎಂದು ವರದಿ ಮಾಡಿದೆ.
ಅವರಿಬ್ಬರೂ ಇನ್‌ಸ್ಟಾಗ್ರಾಂನಲ್ಲಿ ಪರಸ್ಪರರ ಸ್ಟೋರಿಗಳನ್ನು ಪೋಸ್ಟ್ ಮಾಡುತ್ತಿಲ್ಲವಾದ್ದರಿಂದ ಇದೊಂದು ಕೇವಲ ಊಹಾಪೋಹವಾಗಿದೆ. ನತಾಶಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ನತಾಶಾ ಸ್ಟಾಂಕೋವಿಕ್ ಪಾಂಡ್ಯ ಎಂದು ಹೆಸರು ಹೊಂದಿದ್ದರು. ಆದರೆ, ಈಗ ಅವರು ತಮ್ಮ ಹೆಸರನ್ನು ಸಂಪೂರ್ಣವಾಗಿ ತೆಗೆದುಹಾಕಿದ್ದಾರೆ. ಅಲ್ಲದೇ, ಮಾರ್ಚ 4ರಂದು ನತಾಶಾ ಅವರ ಜನ್ಮದಿನ ಇತ್ತು. ಆ ದಿನವೂ ಹಾರ್ದಿಕ್ ಅವರ ಯಾವುದೇ ಪೋಸ್ಟ್ ಇರಲಿಲ್ಲ. ಅಗಸ್ತ್ಯ (ಮಗ) ಅವರೊಂದಿಗೆ ಇರುವ ಪೋಸ್ಟ್ ಅನ್ನು ಹೊರತುಪಡಿಸಿ ತಮ್ಮ ಮತ್ತು ಹಾರ್ದಿಕ್ ಅವರ ಎಲ್ಲ ಇತ್ತೀಚಿನ ಪೋಸ್ಟ್‌ಗಳನ್ನು ತೆಗೆದುಹಾಕಿದ್ದಾರೆ. ಅಲ್ಲದೇ, ಈ ಐಪಿಎಲ್ ಟೂರ್ನಿ ಅಥವಾ ತಂಡದ ಬಗ್ಗೆ ಪೋಸ್ಟ್ ಸ್ಟೋರಿಗಳಲ್ಲಿ ಕಾಣಿಸಿಕೊಂಡಿಲ್ಲ ಎಂದು ವರದಿ ಹೇಳಿದೆ.
ಬಯೋದಿಂದ ಉಪನಾಮ ತೆಗೆದಿದ್ದೇಕೆ?: ನತಾಶಾ ತಮ್ಮ ಇನ್ಸ್ಟಾಗ್ರಾಂ ಬಯೋದಲ್ಲಿ 'ಪಾಂಡ್ಯ' ಎಂಬ ಉಪನಾಮವಿದೆಯೇ ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಆದರೆ, ನಟಾಶಾ ಇನ್‌ಸ್ಟಾಗ್ರಾಂನಲ್ಲಿ ಹಾರ್ದಿಕ್ ಪಾಂಡ್ಯ, ಅವರ ಸಹೋದರ ಕೃನಾಲ್ ಪಾಂಡ್ಯ ಮತ್ತು ಅವರ ಸಹೋದರನ ಪತ್ನಿ ಪಂಖೂರಿ ಶರ್ಮಾ ಅವರನ್ನು ಇನ್ನೂ ಫಾಲೋ ಮಾಡುತ್ತಿದ್ದಾರೆ.
ಹಾರ್ದಿಕ್ ಮತ್ತು ನತಾಶಾ 2020ರ ಮೇನಲ್ಲಿ ಸರಳವಾಗಿ ವಿವಾಹವಾಗಿದ್ದರು. ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಈ ದಂಪತಿ ತಮ್ಮ ವಿವಾಹದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದರು. ಇದಾದ ನಂತರ ಜುಲೈನಲ್ಲಿ ತಮ್ಮ ಮೊದಲ ಮಗುವನ್ನು ಬರ ಮಾಡಿಕೊಂಡಿದ್ದರು. 2023ರ ಫೆಬ್ರವರಿಯಲ್ಲಿ, ಉದಯಪುರದಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯಗಳಂತೆ ಅದ್ದೂರಿ ಮದುವೆಯಾಗಿದ್ದರು.
ಇದನ್ನೂ ಓದಿ: ಹಾರ್ದಿಕ್ ಪಾಂಡ್ಯಗೆ ₹30 ಲಕ್ಷ ದಂಡ: ಮುಂದಿನ ಸೀಸನ್ ಐಪಿಎಲ್ ಪಂದ್ಯಕ್ಕೆ ನಿಷೇಧ