ಹೈದರಾಬಾದ್: ಭಾರತೀಯ ನಾಗರೀಕ ಸೇವೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮಹಿಳಾ ಅಧಿಕಾರಿಯೊಬ್ಬರು ಗಂಡಾಗಿ ಲಿಂಗ ಪರಿವರ್ತನೆ ಮಾಡಿಕೊಂಡಿದ್ದಾರೆ. ಅಲ್ಲದೇ, ಅವರ ಮನವಿಗೆ ಕೇಂದ್ರ ಸರ್ಕಾರ ಕೂಡ ಅನುಮತಿಸಿದ್ದು, ಇದೀಗ ಮಹಿಳಾ ಅಧಿಕಾರಿಯ ಅಧಿಕೃತ ದಾಖಲೆಗಳಲ್ಲಿ ಅವರ ಇಚ್ಛೆಯಂತೆಯೇ ಹೆಸರು, ಲಿಂಗವನ್ನು ಬದಲಾಯಿಸಲಾಗಿದೆ.
ಈ ಅಧಿಕಾರಿ ಹೈದರಾಬಾದ್ನ ಕಸ್ಟಮ್ಸ್, ಅಬಕಾರಿ ಮತ್ತು ಸೇವಾ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯ (ಸಿಇಎಸ್ಟಿಎಟಿ) ಪ್ರಾದೇಶಿಕ ಪೀಠದಲ್ಲಿ ಜಂಟಿ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸಂಪೂರ್ಣ ವಿವರ: 35 ವರ್ಷದ ಅನುಸೂಯ ಎಂಬ ಐಆರ್‌ಎಸ್ ಅಧಿಕಾರಿ, "ತಾವು ಮಹಿಳೆಯಿಂದ ಪುರುಷನಾಗಿ ಲಿಂಗ ಪರಿವರ್ತನೆಗೆ ಒಳಗಾಗುತ್ತಿದ್ದೇನೆ. ನನ್ನ ಹೆಸರನ್ನು ಎಲ್ಲಾ ದಾಖಲೆಗಳಲ್ಲಿ ಅನುಸೂಯ ಎನ್ನುವುದರ ಬದಲಾಗಿ 'ಅನುಕತಿರ್ ಸೂರ್ಯ' ಎಂದೂ ಹಾಗು ಲಿಂಗ 'ಪುರುಷ' ಎಂದು ಬದಲಾವಣೆ ಮಾಡಬೇಕು" ಎಂದು ವಿತ್ತ ಸಚಿವಾಲಯಕ್ಕೆ ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ಪುರಸ್ಕರಿಸಿರುವ ಸಚಿವಾಲಯ, ಇದೀಗ ಅವರ ಹೆಸರ ಎಲ್ಲಾ ಅಧಿಕೃತ ದಾಖಲಾತಿಗಳಲ್ಲಿ ಬದಲಾಯಿಸಿ ಜುಲೈ 9ರಂದು ಆದೇಶ ಹೊರಡಿಸಿದೆ.
ಅನುಕತಿರ್ ಸೂರ್ಯ ಎಂದು ಲಿಂಗ ಬದಲಾವಣೆಗೆ ಒಳಗಾಗಿರುವ ಅಧಿಕಾರಿ, 2013ರಲ್ಲಿ ಚೆನ್ನೈನಲ್ಲಿ ಸಹಾಯಕ ಆಯುಕ್ತರಾಗಿ ಆಗಿ ತಮ್ಮ ವೃತ್ತಿ ಆರಂಭಿಸಿದ್ದರು. 2018ರಲ್ಲಿ ಉಪ ಆಯುಕ್ತರ ಹುದ್ದೆಗೆ ಬಡ್ತಿ ಪಡೆದಿದ್ದರು.
ಅನುಕತಿರ್ ಸೂರ್ಯ, ಮದ್ರಾಸ್ ಇನ್ಸುಟಿಟ್ಯೂಟ್ ಆಫ್ ಟೆಕ್ನಾಲಾಜಿಯಲ್ಲಿ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯೂನಿಕೇಷನ್ನಲ್ಲಿ ಪದವಿ ಪಡೆದಿದ್ದಾರೆ. 2023ರಲ್ಲಿ ಭೋಪಾಲ್ನಲ್ಲಿನ ನ್ಯಾಷನಲ್ ಲಾ ಇನ್ಸುಟಿಟ್ಯೂಟ್ ಯುನಿವರ್ಸಿಟಿಯಲ್ಲಿ ಸೈಬರ್ ಲಾ ಮತ್ತು ಸೈಬರ್ ಫಾರೆನ್ಸಿಕ್ನಲ್ಲಿ ಪಿಜಿ ಡಿಪ್ಲೊಮಾ ಮುಗಿಸಿದ್ದಾರೆ.
2014ರ ಏಪ್ರಿಲ್ 15ರಂದು ನಲ್ಸಾ ಪ್ರಕರಣದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ತೃತೀಯ ಲಿಂಗವನ್ನು ಗುರುತಿಸಿತ್ತು. ಹಾಗೆಯೇ ಲಿಂಗ ಗುರುತಿಸುವುವಿಕೆ ಹಾಗೂ ಲಿಂಗ ಪುನರ್ವಿತರಣೆ ಶಸ್ತ್ರಚಿಕಿತ್ಸೆ ಒಳಗಾಗುವುದು ಮತ್ತು ಬಿಡುವುದು ಅವರ ವೈಯಕ್ತಿಕ ಆಯ್ಕೆ ಎಂದು ಆದೇಶದಲ್ಲಿ ತಿಳಿಸಿತ್ತು. (ಐಎಎನ್ಎಸ್)
ಇದನ್ನೂ ಓದಿ: ಮಲಮಗ, ಆಪ್ತರಿಂದ ಅತ್ಯಾಚಾರ: ನಿವೃತ್ತ IAS ಅಧಿಕಾರಿಯ ಪತ್ನಿಯಿಂದ ಗಂಭೀರ ಆರೋಪ