ನಾಸಿಕ್(ಮಹಾರಾಷ್ಟ್ರ): ಅಂತಾರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ನಾಸಿಕ್‌ನ ಯೋಗ ತರಬೇತುದಾರ ಬಾಳು ಮೋಕಲ್ ಎಂಬವರು ವಿಶಿಷ್ಠ ದಾಖಲೆ ಬರೆದರು. -10 ಡಿಗ್ರಿ ಸೆಲ್ಸಿಯಸ್ ತಾಪಮಾನವಿರುವ 750 ಕೆ.ಜಿ ಮಂಜುಗಡ್ಡೆಯ ಮೇಲೆ 42 ನಿಮಿಷ ಕುಳಿತು 52 ಆಸನಗಳನ್ನು ಅವರು ಪ್ರದರ್ಶಿಸಿದರು. ಈ ಸಾಧನೆಯನ್ನು ವರ್ಲ್ಡ್ ರೆಕಾರ್ಡ್ ಬುಕ್ ಆಫ್ ಇಂಡಿಯಾ ದಾಖಲಿಸಿಕೊಂಡಿದೆ.
ಕಳೆದ ವರ್ಷ ಬಾಳು ಮೋಕಲ್, ಬೇವಿನ ಮರದ ಮೇಲೆ ಕುಳಿತು ಅರ್ಧ ಗಂಟೆ 51 ಯೋಗಾಸನ ಮಾಡಿ ಗಮನ ಸೆಳೆದಿದ್ದರು. ಮೂಲತಃ ನಂದಗಾಂವ್ ನಿವಾಸಿಯಾಗಿರುವ ಇವರು ಮೊದಲಿನಿಂದಲೂ ಯೋಗದ ಬಗ್ಗೆ ಅಪಾರ ಒಲವು ಹೊಂದಿದ್ದಾರೆ. ವಿವಿಧೆಡೆ ಯೋಗಾಭ್ಯಾಸ ಮಾಡಿ, ಯಶವಂತರಾವ್ ಚವಾಣ್ ವಿಶ್ವವಿದ್ಯಾನಿಲಯದಲ್ಲಿ ಯೋಗ ಸಂಯೋಜಕರಾಗಿ ಮೂರೂವರೆ ವರ್ಷ ಕೆಲಸ ಮಾಡಿದ್ದಾರೆ.
ಕಳೆದ ಹದಿನೈದು ವರ್ಷಗಳಿಂದ ಬುಡಕಟ್ಟು ಸಮುದಾಯಗಳಿರುವ ಪ್ರದೇಶಗಳು, ವೃದ್ಧಾಶ್ರಮ, ಶಾಲೆ, ಕಾಲೇಜು, ಕಾರಾಗೃಹಗಳಲ್ಲಿ ಶನಿವಾರ ಮತ್ತು ಭಾನುವಾರ ಯೋಗ ತರಬೇತಿ ನೀಡುತ್ತಿದ್ದಾರೆ. ಪತ್ನಿ ಗಾಯತ್ರಿ ಮೋಕಲ್ ಅವರು ಕೂಡಾ ಯೋಗ ತರಬೇತಿ ನೀಡುತ್ತಾರೆ.
ಇಂದು ವಿಶ್ವ ಯೋಗ ದಿನದ ನಿಮಿತ್ತ ಮಂಜುಗಡ್ಡೆಯ ಮೇಲೆ ಕುಳಿತು ಯೋಗ ಮಾಡಿದ್ದಾರೆ. ಮೊದಲಿಗೆ ಪ್ರಾರ್ಥನೆ ಸಲ್ಲಿಸಿದರು. ನಂತರ ಒಂದೊಂದೇ ಆಸನಗಳನ್ನು ಪ್ರದರ್ಶಿಸಿದರು. 42 ನಿಮಿಷಗಳಲ್ಲಿ 52 ಯೋಗಾಸನಗಳನ್ನು ಪ್ರದರ್ಶಿಸಿದ್ದಾರೆ. ವರ್ಲ್ಡ್ ರೆಕಾರ್ಡ್ ಬುಕ್ ಆಫ್ ಇಂಡಿಯಾದ ಸದಸ್ಯರಾದ ಸಂಜಯ್ ಮತ್ತು ಸುಷ್ಮಾ ನಾರ್ವೇಕರ್ ಅವರು ಈ ದಾಖಲೆಗಾಗಿ ಮೋಕಲ್ ಅವರಿಗೆ ಪ್ರಮಾಣಪತ್ರ ನೀಡಿದರು.
ಮರದ ಮೇಲೆ, ದ್ವಿಚಕ್ರ ವಾಹನದಲ್ಲೂ ಯೋಗ: ಈ ಹಿಂದೆ ಬೇವಿನ ಮರದ ಕೊಂಬೆಯ ಮೇಲೆ ಕುಳಿತು 51 ಯೋಗಾಸನಗಳೊಂದಿಗೆ 11 ಬಾರಿ ಸೂರ್ಯ ನಮಸ್ಕಾರ ಮಾಡಿದ್ದರು. ಯಾವ ಮರಗಳಿಂದ ನಮಗೆ ಪ್ರಾಣವಾಯು ಸಿಗುತ್ತದೋ ಅದೇ ಮರಗಳ ಆಸುಪಾಸಿನಲ್ಲಿರುವ ಮರದ ಮೇಲೆ ಯೋಗ ಮಾಡಿದ್ದೇನೆ ಎಂದು ಬಾಳು ಮೋಕಲ್ ಹೇಳಿದ್ದರು. ಮೋಟಾರ್ ಸೈಕಲ್‌ನಲ್ಲೂ ಇವರು ಯೋಗ ಪ್ರದರ್ಶಿಸಿದ್ದರು.
ಇದನ್ನೂ ಓದಿ: ಜನರಲ್ಲಿ ಹೆಚ್ಚುತ್ತಿದೆ ಯೋಗಾಸಕ್ತಿ: ಬೆಂಗಳೂರಿನಲ್ಲಿವೆ ಸಾವಿರಾರು ಯೋಗ ಅಕಾಡೆಮಿಗಳು - Yoga Academies In Bengaluru