ನವದೆಹಲಿ: ಕೈಗಾರಿಕೋದ್ಯಮಿ ಮತ್ತು ಮಾಜಿ ಕಾಂಗ್ರೆಸ್ ಸಂಸದ ನವೀನ್ ಜಿಂದಾಲ್ ಮತ್ತು ಹರಿಯಾಣದ ಸ್ವತಂತ್ರ ಶಾಸಕ ರಂಜಿತ್ ಚೌಟಾಲಾ ಅವರು ಭಾನುವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಕುರುಕ್ಷೇತ್ರದಿಂದ ನವೀನ್ ಜಿಂದಾಲ್ ಮತ್ತು ಹಿಸಾರ್ ಕ್ಷೇತ್ರದಿಂದ ರಂಜಿತ್ ಚೌಟಾಲಾ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕಣಕ್ಕಿಳಿಸಿದೆ.
78 ವರ್ಷದ ಚೌಟಾಲಾ ಬಿಜೆಪಿ ನೇತೃತ್ವದ ಹರಿಯಾಣ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ಇವರು ಮಾಜಿ ಉಪಪ್ರಧಾನಿ ದೇವಿ ಲಾಲ್ ಅವರ ಪುತ್ರ ಹಾಗು ಭಾರತೀಯ ರಾಷ್ಟ್ರೀಯ ಲೋಕದಳ ಮುಖ್ಯಸ್ಥ ಮತ್ತು ಮಾಜಿ ಹರಿಯಾಣ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ಅವರ ಸಹೋದರ.
ಇನ್ನು, ಕಾಂಗ್ರೆಸ್ ಸಂಸದರಾಗಿ 2004-14ರ ಚುನಾವಣೆಯಲ್ಲಿ ಕುರುಕ್ಷೇತ್ರವನ್ನು ಪ್ರತಿನಿಧಿಸಿದ್ದ ಜಿಂದಾಲ್, ಪ್ರಧಾನಿ ನರೇಂದ್ರ ಮೋದಿಯವರ 'ವಿಕ್ಷಿತ್ ಭಾರತ್' ಕಾರ್ಯಸೂಚಿಗೆ ಕೊಡುಗೆ ನೀಡಲು ಬಯಸುವುದಾಗಿ ಹೇಳಿದರು. 2014ರಲ್ಲಿ ಕುರುಕ್ಷೇತ್ರದಿಂದ ಸೋತಿದ್ದ ಜಿಂದಾಲ್, ''ಕಳೆದ 10 ವರ್ಷಗಳಲ್ಲಿ ಮೋದಿಯವರ ನಾಯಕತ್ವದಲ್ಲಿ ದೇಶವು ಪ್ರಗತಿ ಸಾಧಿಸಿದೆ. 370ನೇ ವಿಧಿ ರದ್ದತಿಯಂತಹ ಅನೇಕ ಐತಿಹಾಸಿಕ ಕ್ರಮಗಳನ್ನು ಕೇಂದ್ರ ತೆಗೆದುಕೊಂಡಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಕನಸು ಕೂಡ ನನಸಾಗಿದೆ'' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನವೀನ್ ಜಿಂದಾಲ್ ಹರಿಯಾಣದ ಮಾಜಿ ಸಚಿವ ಮತ್ತು ದಿವಂಗತ ಕೈಗಾರಿಕೋದ್ಯಮಿ ಓ.ಪಿ.ಜಿಂದಾಲ್ ಅವರ ಪುತ್ರ.
''ಪಕ್ಷದಲ್ಲಿ ಜಿಂದಾಲ್ ಅವರ ಉಪಸ್ಥಿತಿಯು ದೇಶದ ಆರ್ಥಿಕತೆ ಮತ್ತು ಸಮೃದ್ಧಿಯನ್ನು ಹೆಚ್ಚಿಸುವ ಸರ್ಕಾರದ ಕಾರ್ಯಸೂಚಿಗೆ ಸಹಾಯ ಮಾಡುತ್ತದೆ. ಜಿಂದಾಲ್ ಸ್ಟೀಲ್ ಅಧ್ಯಕ್ಷರು ಕ್ರೀಡೆ ಮತ್ತು ಶಿಕ್ಷಣದಲ್ಲಿಯೂ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ'' ಎಂದು ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕರು ಹೇಳಿದರು.
ಸಿರ್ಸಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾಜಿ ಸಂಸದ ಅಶೋಕ್ ತನ್ವಾರ್ ಮತ್ತು ಇತರ ನಾಯಕರ ಸಮ್ಮುಖದಲ್ಲಿ ರಂಜಿತ್ ಚೌಟಾಲಾ ಅವರು ಬಿಜೆಪಿ ಸೇರಿದರು ಎಂದು ಪಕ್ಷದ ಮುಖಂಡರು ಮಾಹಿತಿ ನೀಡಿದರು.
ಪಕ್ಷ ಸೇರ್ಪಡೆಗೊಂಡ ನಂತರ ಮಾತನಾಡಿದ ರಂಜಿತ್ ಚೌಟಾಲಾ, ''ಪ್ರಧಾನಿ ಮೋದಿಯವರ ದೂರದೃಷ್ಟಿಯ ನಾಯಕತ್ವದಲ್ಲಿ ದೇಶವು ಉತ್ತಮ ಪ್ರಗತಿ ಸಾಧಿಸುತ್ತಿದೆ. ಹರಿಯಾಣದಿಂದ ಎಲ್ಲಾ 10 ಸ್ಥಾನಗಳನ್ನು ಬಿಜೆಪಿ ಗೆಲ್ಲಿಸಲು ನಾವು ಶ್ರಮಿಸುತ್ತೇವೆ" ಎಂದರು.
ಹರ್ಯಾಣ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ತನ್ವರ್ ಇತ್ತೀಚೆಗೆ ಆಮ್ ಆದ್ಮಿ ಪಕ್ಷದಿಂದ (ಎಎಪಿ) ಬಿಜೆಪಿ ಸೇರ್ಪಡೆಯೊಂಡಿದ್ದರು. ಅವರು ಸಿರ್ಸಾದಿಂದ ಕಣಕ್ಕಿಳಿದಿದ್ದಾರೆ. ಜಿಂದಾಲ್ ಮತ್ತು ರಂಜಿತ್ ಚೌಟಾಲಾ ಸೇರಿದಂತೆ ಹರಿಯಾಣದಿಂದ ಇನ್ನೂ ನಾಲ್ವರು ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಘೋಷಿಸಿದ ಬಳಿಕ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ, "ನಾವು 10 ರಲ್ಲಿ 10 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಪೂರ್ಣ ವಿಶ್ವಾಸದಿಂದ ಹೇಳಬಲ್ಲೆ. 2047ರ ವೇಳೆಗೆ ಪ್ರಧಾನ ಮಂತ್ರಿಗಳು ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಗುರಿ ಸಾಧಿಸಲು ಶ್ರಮಿಸುತ್ತಾರೆ. ಬಿಜೆಪಿ ಇದೀಗ ಹರಿಯಾಣದ ಎಲ್ಲಾ 10 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ರಂಜಿತ್ ಚೌಟಾಲಾ ಅವರನ್ನು ಬಿಜೆಪಿಗೆ ಸ್ವಾಗತಿಸುತ್ತೇನೆ. ನೀವು ಬಿಜೆಪಿಗೆ ಸೇರ್ಪಡೆಗೊಳ್ಳುವುದರಿಂದ ಖಂಡಿತವಾಗಿಯೂ ಪಕ್ಷಕ್ಕೆ ಮತ್ತಷ್ಟು ಬಲ ಬರುತ್ತದೆ" ಎಂದು ಹೇಳಿದ್ದಾರೆ.
2019ರ ಲೋಕಸಭೆ ಚುನಾವಣೆಯಲ್ಲಿ ಹರಿಯಾಣದ ಎಲ್ಲಾ 10 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿತ್ತು.
ಗೋವಾದಲ್ಲಿ ಕೈಗಾರಿಕೋದ್ಯಮಿ ಪಲ್ಲವಿ ಡೆಂಪೋ ಬಿಜೆಪಿ ಟಿಕೆಟ್: ಡೆಂಪೋ ಇಂಡಸ್ಟ್ರೀಸ್ ಕಾರ್ಯನಿರ್ವಾಹಕ ನಿರ್ದೇಶಕಿ ಪಲ್ಲವಿ ಡೆಂಪೊ ಅವರಿಗೆ ಗೋವಾದಿಂದ ಬಿಜೆಪಿ ಟಿಕೆಟ್ ನೀಡಿದೆ. ಪಲ್ಲವಿ ಡೆಂಪೊ ಈ ರಾಜ್ಯದಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಮೊದಲ ಮಹಿಳಾ ಅಭ್ಯರ್ಥಿಯೂ ಹೌದು.
ವಾಣಿಜ್ಯೋದ್ಯಮಿ ಮತ್ತು ಶಿಕ್ಷಣ ತಜ್ಞರೂ ಆಗಿರುವ ಡೆಂಪೊ ಅವರು ಪುಣೆ ಎಂಐಟಿಯಿಂದ ರಸಾಯನಶಾಸ್ತ್ರದಲ್ಲಿ ಪದವಿ ಮತ್ತು ವ್ಯವಹಾರ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ (MBA) ಪಡೆದಿದ್ದಾರೆ. 49 ವರ್ಷ ವಯಸ್ಸಿನ ಇವರು, ಡೆಂಪೋ ಇಂಡಸ್ಟ್ರೀಸ್‌ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಮಾಧ್ಯಮ ಮತ್ತು ರಿಯಲ್ ಎಸ್ಟೇಟ್ ವಿಭಾಗವನ್ನು ನೋಡಿಕೊಳ್ಳುತ್ತಿದ್ದಾರೆ.