ಕೋಲ್ಕತ್ತಾ(ಪಶ್ಚಿಮ ಬಂಗಾಳ): ಬುಧವಾರ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಭಾರಿ ಅನಾಹುತವೊಂದು ತಪ್ಪಿದೆ. ಕೋಲ್ಕತ್ತಾ ವಿಮಾನ ನಿಲ್ದಾಣದಿಂದ ದರ್ಭಾಂಗ್ಗೆ ತೆರಳಲು ಟ್ಯಾಕ್ಸಿ ವೇಯಲ್ಲಿದ್ದ ಇಂಡಿಗೋ ವಿಮಾನ, ರನ್‌ವೇ ಪ್ರವೇಶಿಸಲು ಅನುಮತಿಗಾಗಿ ಕಾಯುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ರೆಕ್ಕೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ರೆಕ್ಕೆಯ ಒಂದು ಭಾಗ ರನ್‌ವೇ ಮೇಲೆ ಬಿದ್ದಿದ್ದು, ಇಂಡಿಗೋ ವಿಮಾನದ ರೆಕ್ಕೆಗೂ ಹಾನಿಯಾಗಿಯಾಗಿದೆ. ಇಂಡಿಗೋ ವಿಮಾನದಲ್ಲಿ ನಾಲ್ಕು ಶಿಶುಗಳು ಸೇರಿದಂತೆ 135 ಪ್ರಯಾಣಿಕರಿದ್ದರು ಎಂದು ತಿಳಿದು ಬಂದಿದೆ.
ಇಬ್ಬರು ಪೈಲಟ್‌ಗಳ ಅಮಾನತು: ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್(ಡಿಜಿಸಿಎ) ಇಂಡಿಗೊ ಎ 320 ವಿಟಿ - ಐಎಸ್ಎಸ್ ವಿಮಾನದ ಪೈಲಟ್‌ಗಳಿಬ್ಬರನ್ನೂ ಅಮಾನತು ಮಾಡಿ ವಿವರವಾದ ತನಿಖೆಗೆ ಆದೇಶಿಸಿದೆ ಎಂದು ವರದಿಯಾಗಿದೆ. "ನಾವು ಈ ವಿಷಯದ ಬಗ್ಗೆ ವಿವರವಾದ ತನಿಖೆಗೆ ಆದೇಶಿಸಿದ್ದೇವೆ ಮತ್ತು ಇಂಡಿಗೋ ಏರ್‌ಲೈನ್ಸ್‌ನ ಇಬ್ಬರೂ ಪೈಲಟ್‌ಗಳನ್ನು ಅಮಾನತು ಮಾಡಲಾಗಿದೆ. ತನಿಖೆಯ ಸಮಯದಲ್ಲಿ ಗ್ರೌಂಡ್ ಸ್ಟಾಫ್ ಗಳನ್ನೂ ವಿಚಾರಣೆ ಮಾಡಲಾಗುವುದು. ಎರಡೂ ವಿಮಾನಗಳನ್ನು ಪರಿಶೀಲನೆಗಾಗಿ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಲಾಗಿದೆ" ಎಂದು ಡಿಜಿಸಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಟ್ಯಾಕ್ಸಿ ವೇಯಲ್ಲಿದ್ದ ಇಂಡಿಗೋ ವಿಮಾನ ಮತ್ತು ಇನ್ನೊಂದು ವಿಮಾನ ಸ್ಪರ್ಶಿಸಿದ ಘಟನೆ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ವರದಿಯಾಗಿದೆ. ವಿಮಾನವು ತಪಾಸಣೆ ಮತ್ತು ಪ್ರೋಟೋಕಾಲ್ ಪ್ರಕಾರ ಅಗತ್ಯ ಕ್ರಮಕ್ಕಾಗಿ ವಿಮಾನ ನಿಲ್ದಾಣಕ್ಕೆ ವಾಪಸ್ ಆಗಿದೆ," ಎಂದು ಇಂಡಿಗೋ ಸಂಸ್ಥೆ ಡಿಜಿಸಿಎಗೆ ವರದಿ ಸಲ್ಲಿಸಿದೆ ಎಂದು ತಿಳಿದು ಬಂದಿದೆ.
ಪ್ರಯಾಣಿಕರಿಗೆ ಕ್ಷಮೆಯಾಚಿಸಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್: ಘಟನೆ ಕುರಿತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಕ್ತಾರ ಪ್ರತಿಕ್ರಿಯಿಸಿ , ಕೋಲ್ಕತ್ತಾ ದಿಂದ ಚೆನ್ನೈ ಪ್ರಯಾಣಿಸಬೇಕಿದ್ದ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ನಾವು ಕ್ಷಮೆಯಾಚಿಸುತ್ತೇವೆ ಎಂದು ತಿಳಿಸಿದ್ದಾರೆ. ಈ ಘಟನೆಯಿಂದ ಕೋಲ್ಕತ್ತಾ ಮತ್ತು ದರ್ಭಾಂಗ ನಡುವಿನ ಇಂಡಿಗೋ ವಿಮಾನ 6E 6152 ವಿಳಂಬವಾಯಿತು. ಎಲ್ಲ ಪ್ರಯಾಣಿಕರಿಗೆ ಪರ್ಯಾಯ ವಿಮಾನದ ವ್ಯವಸ್ಥೆ ಮಾಡಲಾಯಿತು ಎಂದು ಇಂಡಿಗೋ ಸಂಸ್ಥೆ ತಿಳಿಸಿದೆ.
ಇದನ್ನೂ ಓದಿ: ಉತ್ತರಾಖಂಡ: ಸಿಲ್ಕ್ಯಾರಾ ಸುರಂಗದಲ್ಲಿ ಯಂತ್ರ ಪಲ್ಟಿಯಾಗಿ ಕಾರ್ಮಿಕ ಸಾವು - SILKYARA TUNNEL