ನವದೆಹಲಿ: ಭಾರತದಲ್ಲಿ ಇದೇ ಮೊದಲ ಬಾರಿಗೆ ನದಿಗಳಲ್ಲಿನ ಡಾಲ್ಫಿನ್ಗಳ ಸಮೀಕ್ಷೆ ನಡೆಸಲಾಗಿದೆ. ಗಂಗಾ, ಬ್ರಹ್ಮಪುತ್ರ ಮತ್ತು ಸಿಂಧೂ ನದಿಗಳಲ್ಲಿ ಡಾಲ್ಫಿನ್ಗಳ ಮೊದಲ ಅಂದಾಜು ಸಮೀಕ್ಷೆ ನಡೆಸಿದ್ದು, ಫಲಿತಾಂಶಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಗಂಗಾ-ಬ್ರಹ್ಮಪುತ್ರ-ಮೇಘನಾ ನದಿ ವ್ಯವಸ್ಥೆ ಮತ್ತು ಭಾರತ, ಬಾಂಗ್ಲಾದೇಶ, ನೇಪಾಳ ಮತ್ತು ಭೂತಾನ್‌ನಾದ್ಯಂತ ಹರಡಿರುವ ಅದರ ಉಪನದಿಗಳಲ್ಲಿ ಡಾಲ್ಫಿನ್ಗಳು ಕಂಡುಬರುತ್ತವೆ. ಗಂಗಾ ನದಿ ಡಾಲ್ಫಿನ್ನ ಹತ್ತಿರದ ಸಂಬಂಧಿಯಾದ ಸಿಂಧೂ ನದಿ ಡಾಲ್ಫಿನ್ಗಳು ಸಣ್ಣ ಪ್ರಮಾಣದಲ್ಲಿ ಭಾರತದ ಸಿಂಧೂ ನದಿ ವ್ಯವಸ್ಥೆಯಲ್ಲಿ ಕಂಡುಬರುತ್ತವೆ.
"ಪ್ರಾಜೆಕ್ಟ್ ಡಾಲ್ಫಿನ್ ಅಡಿಯಲ್ಲಿ, ನಾವು ನದಿಗಳಲ್ಲಿನ ಡಾಲ್ಫಿನ್ಗಳ ಅಂದಾಜು ಎಣಿಕೆಯನ್ನು ಪೂರ್ಣಗೊಳಿಸಿದ್ದೇವೆ. ಈ ಮಾದರಿಯ ಸಮೀಕ್ಷೆಯು ವಿಶ್ವದಲ್ಲೇ ಮೊದಲನೆಯದು. ಎರಡು ವರ್ಷಗಳ ಕಾಲ ಗಂಗಾ, ಬ್ರಹ್ಮಪುತ್ರ ಮತ್ತು ಸಿಂಧೂ ನದಿಗಳ 8,000 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸಲಾಗಿದೆ. ಫಲಿತಾಂಶಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವೈಲ್ಡ್ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ನೇತೃತ್ವದ ಈ ಸಮೀಕ್ಷೆಯಲ್ಲಿ ಗಂಗಾ ನದಿ ಡಾಲ್ಫಿನ್ ಮತ್ತು ಸಿಂಧೂ ನದಿ ಡಾಲ್ಫಿನ್ ಎಂಬ ಎರಡು ಜಾತಿಗಳನ್ನು ಎಣಿಕೆ ಮಾಡಲಾಗಿದೆ. ಇದು ಭವಿಷ್ಯದ ಮೌಲ್ಯಮಾಪನಕ್ಕಾಗಿ ಭಾರತದಲ್ಲಿನ ನದಿ ಡಾಲ್ಫಿನ್ಗಳ ಬೇಸ್‌ಲೈನ್ ಸಂಖ್ಯೆಯನ್ನು ಒದಗಿಸುತ್ತದೆ.
ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಕೇಂದ್ರೀಕರಿಸಿ ಸಮುದ್ರ ಡಾಲ್ಫಿನ್ಗಳ ಜನಸಂಖ್ಯೆಯ ಅಂದಾಜು ನಡೆಸಲು ಕೂಡ ಸರ್ಕಾರ ಯೋಜಿಸುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ನದಿಗಳಲ್ಲಿ ಡಾಲ್ಪಿನ್‌ಗಳಿದ್ದರೆ ಏನರ್ಥ?: ಸಿಹಿನೀರಿನ ನದಿಗಳು ಮತ್ತು ಕರಾವಳಿ ನೀರಿನಲ್ಲಿ ಡಾಲ್ಫಿನ್‌ಗಳನ್ನು ರಕ್ಷಿಸುವ ಸಂರಕ್ಷಣಾ ಉಪಕ್ರಮವಾದ ಪ್ರಾಜೆಕ್ಟ್ ಡಾಲ್ಫಿನ್ ಅನ್ನು ಭಾರತವು 2020ರಲ್ಲಿ ಪ್ರಾರಂಭಿಸಿತು. ಈ ಯೋಜನೆಯು ದೇಶದ ಸಾಗರಗಳಲ್ಲಿ ಡಾಲ್ಫಿನ್‌ಗಳನ್ನು ರಕ್ಷಿಸುವ ಗುರಿಯನ್ನು ಹೊಂದಿದೆ. ಡಾಲ್ಫಿನ್ಗಳು ಶುದ್ಧ, ಹರಿಯುವ ನೀರಿನಲ್ಲಿ ಮಾತ್ರ ಬದುಕುವುದರಿಂದ ನದಿಗಳಲ್ಲಿ ಡಾಲ್ಫಿನ್ಗಳಿದ್ದರೆ ಆ ನದಿ ಆರೋಗ್ಯಕರವಾದ ನದಿ ವ್ಯವಸ್ಥೆಯನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಅವುಗಳ ಜನಸಂಖ್ಯೆಯನ್ನು ಆಧರಿಸಿ ವಿಜ್ಞಾನಿಗಳು ನದಿಯ ಒಟ್ಟಾರೆ ಆರೋಗ್ಯವನ್ನು ನಿರ್ಣಯಿಸುತ್ತಾರೆ.
ಡಾಲ್ಫಿನ್ಗಳು ಅತ್ಯಂತ ಬುದ್ಧಿವಂತ ಸಮುದ್ರ ಸಸ್ತನಿಗಳಾಗಿವೆ. ಓರ್ಕಾಸ್ ಮತ್ತು ಪೈಲಟ್ ತಿಮಿಂಗಿಲಗಳನ್ನು ಒಳಗೊಂಡಿರುವ ಹಲ್ಲಿನ ತಿಮಿಂಗಿಲಗಳ ಕುಟುಂಬದ ಭಾಗವಾಗಿವೆ. ಡಾಲ್ಫಿನ್ಗಳು ವಿಶ್ವಾದ್ಯಂತ ಕಂಡುಬರುತ್ತವೆ. ಖಂಡಾಂತರ ವಲಯದ ಆಳವಿಲ್ಲದ ಸಮುದ್ರಗಳಲ್ಲಿ ಇವು ಹೆಚ್ಚಾಗಿ ವಾಸಿಸುತ್ತವೆ. ಮಾಂಸಾಹಾರಿಗಳಾದ ಇವು ಹೆಚ್ಚಾಗಿ ಮೀನು ಮತ್ತು ಸ್ಕ್ವಿಡ್ ತಿನ್ನುತ್ತವೆ.
ಇದನ್ನೂ ಓದಿ: ರಾಷ್ಟ್ರಗಳ ಸಮೃದ್ಧಿಯಲ್ಲಿನ ವ್ಯತ್ಯಾಸ ಸಂಶೋಧನೆಗಾಗಿ ಮೂವರಿಗೆ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ